ಮಂಡ್ಯ; ನಿವೃತ್ತ ಎಎಸ್‍ಐ ಕೊರೋನಾಗೆ ಬಲಿ
ಮಂಡ್ಯ, ಏಪ್ರಿಲ್ 21; ಕೊರೊನಾ ಆರ್ಭಟ ಎಲ್ಲೆಡೆ ಹೆಚ್ಚುತ್ತಿದ್ದು, ಹಲವರನ್ನು ಬಲಿ ಪಡೆಯುತ್ತಿದೆ. ಇದೀಗ ಕೆ. ಆರ್. ಪೇಟೆ ಪಟ್ಟಣದ ನಿವೃತ್ತ ಸಹಾಯಕ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಕೋವಿಡ್ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.
ಪಟ್ಟಣದ ಜಯನಗರ ಬಡಾವಣೆಯ ನಿವಾಸಿಯಾದ ಹೊಸಹೊಳಲು ರಂಗಸ್ವಾಮಿ (70) ಕೋವಿಡ್‌ಗೆ ಬಲಿಯಾದವರು. ನಿವೃತ್ತಿಯ ನಂತರವೂ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿ ರಾಜೀ ಪಂಚಾಯಿತಿ ಮೂಲಕ ಹಲವು ಕೌಟುಂಬಿಕ ಕೇಸುಗಳನ್ನು ಬಗೆಹರಿಸಿಕೊಡುತ್ತಿದ್ದರು.
ಅಣ್ಣ-ತಮ್ಮಂದಿರು, ಅಕ್ಕತಂಗಿಯರು, ದಾಯಾದಿಗಳು ಅನೋನ್ಯವಾಗಿರಬೇಕು. ಸಣ್ಣಪುಟ್ಟ ವಿಚಾರಗಳಿಗೆ ಪೊಲೀಸ್, ಕೋರ್ಟು, ಕಚೇರಿ, ಕೇಸು ವ್ಯಾಜ್ಯ ಎಂದು ಅಲೆಯಬಾರದು ಎಂದು ತಿಳುವಳಿಕೆ ನೀಡುವ ಮೂಲಕ ಪೊಲೀಸ್ ಠಾಣೆಯ ಕೆಲಸವನ್ನು ಸುಗಮಗೊಳಿಸುತ್ತಿದ್ದರು.

ಅಲ್ಲದೆ ಪೊಲೀಸ್ ಠಾಣೆಯಲ್ಲಿ ಕಚೇರಿ ಕೆಲಸಗಳಿಗೂ ಉಚಿತವಾಗಿ ಸಹಕಾರ ನೀಡುತ್ತಿದ್ದರು. ಸುಮಾರು 10 ವರ್ಷಗಳ ಕಾಲ ಉಚಿತ ಸೇವೆ ನೀಡುವ ಮೂಲಕ ಪೊಲೀಸ್ ಅಧಿಕಾರಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಕಳೆದ ಒಂದು ವಾರದಿಂದ ಕೋವಿಡ್ ಸೋಂಕಿನಿಂದ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಸಾದುಗೋನಹಳ್ಳಿ ಬಳಿ ಕೋವಿಡ್ ನಿಯಮದ ಪ್ರಕಾರ ನಡೆಯಿತು.












Click it and Unblock the Notifications