ಅ.16ರಿಂದ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ: ಇಲ್ಲಿದೆ ಸಂಪೂರ್ಣ ವಿವರ
ಮಂಡ್ಯ, ಸೆಪ್ಟೆಂಬರ್ 30 : ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಅಕ್ಟೋಬರ್ 16ರಿಂದ ಮೂರು ದಿನಗಳ ಕಾಲ ಸಾಂಪ್ರದಾಯಿಕ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಸಾರುವ ದಸರಾ ಮಹೋತ್ಸವವನ್ನು ಜನರ ಉತ್ಸವವನ್ನಾಗಿ ಅಚ್ಚುಕಟ್ಟಾಗಿ ನೆರವೇರಿಸಬೇಕು. ಎಲ್ಲಾ ಉಪಸಮಿತಿಗಳು ಸಮನ್ವಯ ಸಾಧಿಸಿ ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖೇನ ದಸರಾ ಮಹೋತ್ಸವವನ್ನು ಯಶಸ್ವಿಯಾಗಿಸಬೇಕು ಎಂದು ಸಲಹೆ ನೀಡಿದರು.

ದಸರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ, ಪಾರಂಪರಿಕವಾಗಿ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮೂರು ದಿನಗಳ ಕಾರ್ಯಕ್ರಮಗಳ ರೂಪರೇಷೆಗಳನ್ನು ಸಿದ್ಥಪಡಿಸಬೇಕು. ಅಧಿಕಾರಿಗಳು ತಮಗೆ ವಹಿಸಿರುವ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ. ಜೊತೆಗೆ ಪೂರ್ವಭಾವಿಯಾಗಿ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಜಿಲ್ಲೆಯ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, 'ದಸರಾ ಮಹೋತ್ಸವ ಆಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿಧಾನಸಭಾ ಹಾಗೂ ವಿಧಾನಪರಿಷತ್ ಶಾಸಕರನ್ನೊಳಗೊಂಡ ಸಂಪೂರ್ಣ ದಸರಾ ಆಚರಣಾ ಸಮಿತಿ, ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ, ಮೆರವಣಿಗೆ, ವಸ್ತು ಪ್ರದರ್ಶನ, ಆರೋಗ್ಯ, ನಗರ ಅಲಂಕಾರ, ಕ್ರೀಡಾ, ಆಹಾರ ಹಾಗೂ ಹಣಕಾಸು ಸಮಿತಿ ರಚಿಸಲಾಗಿದೆ. ಎಲ್ಲಾ ಸಮಿತಿಯ ಸದಸ್ಯರು ಸಮನ್ವಯ ಸಾಧಿಸಿ ದಸರಾ ಮಹೋತ್ಸವ ಯಶಸ್ವಿಗೊಳಿಸುವಂತೆ' ಸೂಚಿಸಿದರು.

ದಸರಾ ಮಹೋತ್ಸವದ ಮುಖ್ಯ ಆಯಾಮವೇ ಸಾಂಸ್ಕೃತಿಕ ಕಾರ್ಯಕ್ರಮ. ಹಾಗಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿವಿಧ ಕಲಾತಂಡಗಳ ಮೆರುಗು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಜೊತಗೆ ಸ್ಥಳೀಯ ಕಲಾತಂಡದವರೆಗೆ ಆದ್ಯತೆ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವಿರ್ ಆಸಿಫ್ ಮಾತನಾಡಿ, 'ಕಿರಂಗೂರು ಬನ್ನಿಮಂಟಪ, ಜಂಬೂ ಸವಾರಿ ಸಾಗುವ ರಸ್ತೆ, ಕಾರ್ಯಕ್ರಮ ನಡೆಯುವ ವೇದಿಕೆ ಸ್ಥಳಗಳನ್ನು ಸ್ವಚ್ಚಗೊಳಿಸುವ ಕೆಲಸ ಶೀಘ್ರ ಕೈಗೊಳ್ಳುವಂತೆ' ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು, ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಎಂ.ಕೃಷ್ಣಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications