HD Kumaraswamy: ಚುನಾವಣೆ ಸಂದರ್ಭದಲ್ಲೇ ಕುಮಾರಸ್ವಾಮಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ- ಕೈ ಶಾಸಕ ವ್ಯಂಗ್ಯ
ಮಂಡ್ಯ ಮಾರ್ಚ್ 31: ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಚುನಾವಣೆ ಸಮಯದಲ್ಲೇ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ವ್ಯಂಗ್ಯವಾಡಿದ್ದಾರೆ.
ಕಳೆದ ದಿನ ಮಂಡ್ಯದ ಮಳವಳ್ಳಿಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 'ಎಚ್‌ಡಿ ಕುಮಾರಸ್ವಾಮಿ ಅವರಿಗೆ ಯಾವುದೇ ಚುನಾವಣೆ ಬರಲಿ ಹಾರ್ಟ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ. ಒಂದು ದಿನ ಅಡ್ಮಿಟ್ ಆಗ್ತಾರೆ. ಇನ್ನೊಂದು ದಿನ ಶಸ್ತ್ರಚಿಕಿತ್ಸೆ ಆಗುತ್ತೆ. ಮೂರನೇ ದಿನ ಅವರು ಹೊರ ಬರುತ್ತಾರೆ. ನಾಲ್ಕನೇ ದಿನ ಇಡೀ ರಾಜ್ಯ ಸುತ್ತುತ್ತಾರೆ. ಇದು ಹೇಗೆ ಸಾಧ್ಯ' ಎಂದು ರಮೇಶ್ ಬಂಡೆಸಿದ್ದೇಗೌಡ ಪ್ರಶ್ನೆ ಮಾಡಿದ್ದಾರೆ.

ಜೊತೆಗೆ 'ಸಚಿವ ಚಲುವರಾಯಸ್ವಾಮಿಗೂ ಇರುವ ಕಾಯಿಲೆ ಕುಮಾರಸ್ವಾಮಿಗೂ ಇದೆ. ಚಲುವರಾಯ ಸ್ವಾಮಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರೆ ಒಂದು ತಿಂಗಳು ಹೊರಬರುವುದಿಲ್ಲ. ಆದರೆ ಕುಮಾರಸ್ವಾಮಿ ಅವರು ಮೂರ್ನಾಲ್ಕು ದಿನಗಳಲ್ಲಿ ಹೊರ ಬರುತ್ತಾರೆ. ಈ ಟೆಕ್ನಿಕ್ ಏನು? ಎಂದು ನನಗೆ ಅರ್ಥವಾಗಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ. ಇದು ಅಭಿವೃದ್ಧಿ ಚುನಾವಣೆ ಜನ ಮಾರು ಹೋಗಬಾರದು ಎಂದು ಅವರು ಹೇಳಿದ್ದಾರೆ.
ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದಂತೆ ದಳ ನಾಯಕರು ವಾಗ್ದಾಳಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ,'ದುಡ್ಡು ತೆಗೆದುಕೊಂಡು ಜೆಡಿಎಸ್‌ಗೆ ಮೋಸ ಮಾಡಿಕೊಂಡು ಹೋದವರು ಮಹಾನಾಯಕರ ಬಗ್ಗೆ ಮಾತನಾಡುತ್ತಾರೆ. ಅವರ ವ್ಯಕ್ತಿತ್ವಕ್ಕೆ ಭಾರಿ ದೊಡ್ಡ ಹೊಡೆತ ಇದು. ಕುಮಾರಸ್ವಾಮಿ ಅವರು ಮೆಡಿಕಲ್ ಟ್ರೀಟ್‌ಮೆಂಟ್ ಬಗ್ಗೆ ಕೇಳುವ ಅಧಿಕಾರ ಅವರಿಗೆ ಇಲ್ಲ. ಅವರು ಬೇಗ ಗುಣವಾಗಬೇಕು ಎಂದು ಜನ ರಾಜ್ಯಾದ್ಯಂತ ದೇವಸ್ಥಾನದಲ್ಲಿ ಬೇಡಿಕೊಂಡಿದ್ದಾರೆ. ಅವರು ಹೇಗೆ ಬಂದರು ಅನ್ನೋದು ಇವರಿಗೆ ಯಾಕೆ ಬೇಕು? ರಾಜ್ಯದಲ್ಲಿ ರೈತರು ಕಂಗಾಲಾಗಿದ್ದಾರೆ ಅದರ ಬಗ್ಗೆ ಗಮನ ಹರಿಸಲಿ. ಅದನ್ನು ಬಿಟ್ಟು ರೈತರಿಗೆ ಮೋಸ ಮಾಡಿ ಮತ್ತೊಬ್ಬರ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಆಕ್ರೋಶಗೊಂಡರು.

ಇನ್ನೂ ಈ ಬಗ್ಗೆ ಮಾಜಿ ಸಚಿವ ಸಿಎಸ್ ಪುಟ್ಟರಾಜು ಮಾತನಾಡಿ, 'ಸೋಲಿನ ಅತಾಶೆ ಈ ಭಾವನೆಗಳನ್ನು ವ್ಯಕ್ತಪಡಿಸುತ್ತಿದೆ. ಚಲುವರಾಯ ಸ್ವಾಮಿ ಜನರ ಮಧ್ಯ ಬೆಳದವರಲ್ಲ. ಎಸಿಯಲ್ಲಿ ಬೆಳೆದವರು. ಹೀಗಾಗಿ ಅವರು ತಿಂಗಳು ಆಸ್ಪತ್ರೆಯಲ್ಲಿ ಇರುತ್ತಾರೆ. ಕುಮಾರಸ್ವಾಮಿ ಅವರು ಒಬ್ಬ ಮಹಾನಾಯಕ. ಕುಮಾರಸ್ವಾಮಿ ಇಲ್ಲಿ ಹುಟ್ಟಿ ಬೆಳೆದು ನೀರಿಗಾಗಿ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಕಣ್ಣೀರು ರಾಜಕೀಯ ಅಂತ ಮಾತನಾಡುವವರಿಗೆ ನಾನು ಸಾಕ್ಷಿ ಒದಗಿಸುತ್ತೇನೆ. ಅವರ ಆರೋಗ್ಯದ ಬಗ್ಗೆ ಡಾಕ್ಟರ್ ರೆಕಾರ್ಡ್ ಮಾಡಿದ್ದಾರೆ ಅದನ್ನು ತಂದು ಕೊಡುತ್ತೇವೆ' ಎಂದರು.












Click it and Unblock the Notifications