ಮಳವಳ್ಳಿ: ಕೊಟ್ಟ ಭರವಸೆಗಳನ್ನ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಮತ ಕೇಳುವುದಿಲ್ಲ ಎಂದ ಕುಮಾರಸ್ವಾಮಿ
ಮಳವಳ್ಳಿ, ಡಿಸೆಂಬರ್, 20: ಐದು ವರ್ಷ ಸ್ವತಂತ್ರವಾಗಿ ನಿಜವಾದ ಮಣ್ಣಿನ ಮಕ್ಕಳ ಪಕ್ಷವಾದ ಜಾತ್ಯಾತೀತ ಜನತಾ ದಳಕ್ಕೆ ಅಧಿಕಾರ ಕೊಟ್ಟರೇ ಪಂಚರತ್ನ ಯೋಜನೆಯನ್ನು ಅನುಷ್ಠಾನಗೊಳಿಸುತ್ತೇನೆ. ಕೊಟ್ಟ ಭರವಸೆಯನ್ನು ಈಡೇರಿಸದಿದ್ದರೇ ಮುಂದಿನ ದಿನಗಳಲ್ಲಿ ಮತ ಕೇಳುವುದಕ್ಕೆ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಳವಳ್ಳಿಯಲ್ಲಿ ತಿಳಿಸಿದರು.
ಹಲಗೂರಿನಿಂದ ಪಟ್ಟಣದ ಅನತ್ರಾಂ ವೃತ್ತಕ್ಕೆ ಪಂಚಯಾತ್ರೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯ ಮೇಲೆ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸಲಾಯಿತು. ನಂತರ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ನಾನು 2 ಬಾರಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೇನೆ. ಆದರೂ ಕೂಡ ಬಡವರಿಗೆ ಅನುಕೂಲವಾಗಬೇಕು, ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು, ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳು ದೊರೆಯಬೇಕು, ಯುವಕರಿಗೆ ಉದ್ಯೋಗ ನೀಡುವಂತಾಗಬೇಕು, ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕೆಂಬ ಉದ್ದೇಶದಿಂದ ಪಂಚರತ್ನ ಯಾತ್ರೆಯನ್ನು ಆರಂಭಿಸಲಾಗಿದೆ. ಸ್ವತಂತ್ರವಾಗಿ ಅಧಿಕಾರ ಕೊಟ್ಟರೇ ಪಂಚರತ್ನ ಯೋಜನೆ ಜೊತೆಗೆ ಎಲ್ಲಾ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಡಲಾಗುವುದು. 65 ವರ್ಷ ಮೇಲ್ಪಟ್ಟ ವೃದ್ದರಿಗೆ 5 ಸಾವಿರ ವೃದ್ದಪ್ಯವೇತನ, ಅಂಗವಿಕಲರಿಗೆ ಎರಡುವರೆ ಸಾವಿರ ವೇತನ ಸೇರಿದಂತೆ ಸಂರ್ಪೂಣ ನೀರಾವರಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ಆರೋಗ್ಯದ ಸಮಸ್ಯೆ ಇದ್ದರೂ ಗ್ರಾಮಗಳಿಗೆ ಭೇಟಿ
1996 ರಲ್ಲಿ ಕನಕಪುರ ಲೋಕಸಭಾ ಚುನಾವಣೆಯಲ್ಲಿ ತನಗೆ ಮಳವಳ್ಳಿಯಿಂದ 10 ಸಾವಿರ ಮತ ಲೀಡ್ ನೀಡುವುದರ ಮೂಲಕ ರಾಜಕೀಯ ಜನ್ಮ ನೀಡಿರುವ ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನನ್ನ ಆರೋಗ್ಯದ ಸಮಸ್ಯೆ ಇದ್ದರೂ ಕೂಡ 70ರಿಂದ 80 ಗ್ರಾಮಗಳಿಗೆ ಭೇಟಿ ನೀಡುತ್ತಿರುವೆ. ಹೀಗಾಗಿ ಒಮ್ಮೆ ಪೂರ್ಣ ಪ್ರಮಾಣದ ಸರ್ಕಾರದ ರಚನೆಗೆ ಅವಕಾಶ ನೀಡಿದರೇ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತೇನೆ ಎಂದು ಹೇಳಿದರು. ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿಲ್ಲ. ಶಿಕ್ಷಣ ಕ್ಷೇತ್ರವೊಂದರಲ್ಲಿ ಸುಮಾರು 57 ರಷ್ಟು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಇವೆ. ಎಚ್.ಡಿ. ದೇವೇಗೌಡರ ಅವಧಿಯಲ್ಲಿ 1 ಲಕ್ಷ ಹುದ್ದೆ, 2006 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 56 ಸಾವಿರ ಶಿಕ್ಷಕರ ಭರ್ತಿ ಮಾಡಿದ್ದೇನೆ ಎಂದರು.

ಬಡವರ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತೇವೆ-HDK
ಗುಣಾತ್ಮಾಕ ಶಿಕ್ಷಣ ಕೊಡಿಸಬೇಕೆಂದು ಪೋಷಕರು ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಿದರೇ ಒಂದು ಲಕ್ಷ ಬೇಕಾಗುತ್ತದೆ. ಇಂತಹ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರತಿ ಪಂಚಾಯತಿ ಒಂದು ಉತ್ತಮ ಶಾಲೆ, ಶಿಕ್ಷಕರ ನೇಮಕ ಮಾಡಲಾಗುತ್ತದೆ. ಬಡವರು, ಶ್ರೀಮಂತರಿಗೆ ಸಮಾನ ವಿಧ್ಯಾಭ್ಯಾಸ ನೀಡಲಾಗುವುದು. 30 ಬೆಡ್‌ನ ಸುಸಜ್ಜಿತ ಆಸ್ಪತ್ರೆಯೊಂದಿಗೆ ತಲಾ ಮೂರು ವೈದ್ಯರು ಮತ್ತು ನರ್ಸ್‌ಗಳನ್ನು ನೇಮಕ ಮಾಡಲಾಗುವುದು ಎಂದರು. ರೈತರ ಸಾಲ ಮುನ್ನಾ ಮಾಡಿದರೂ ಯಾವುದೇ ಸುಧಾರಣೆ ಕಂಡಿಲ್ಲ. ಹೀಗಾಗಿ ಬಿತ್ತನೆ ಬೀಜ, ಔಷಧಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂಪಾಯಿ, 24 ಗಂಟೆ ವಿದ್ಯುತ್ ಪೂರೈಕೆ, ಯುವಕರಿಗೆ ಸ್ವಾವಲಂಬಿ ಉದ್ಯೋಗ ನೀಡಲಾಗುವುದು. ಮನೆಗೆ ಪ್ರತಿನಿತ್ಯ ಸಾವಿರಾರು ಮಂದಿ ಕಷ್ಟವನ್ನು ಹೇಳಿಕೊಂಡು ಬರುತ್ತಾರೆ. ಅವರಿಗೆ ಜಾತಿಬೇದ ಎನ್ನದೇ ಸಹಾಯ ಮಾಡುತ್ತೇನೆ ಎಂದರು.

ಸಮರ್ಪಕ ನೀರು ಪೂರೈಕೆ ಮಾಡಲು ಒತ್ತಡ
ಮಾಜಿ ಪ್ರಧಾನಿ ದೇವೇಗೌಡರು ತಮ್ಮ 91ನೇ ವಯಸ್ಸಿನ ಇಳಿವಯಸ್ಸಿನಲ್ಲೂ ಜನರಿಗಾಗಿ ದುಡಿಯುತ್ತಿದ್ದಾರೆ. ಸಂಸತ್‌ನಲ್ಲಿ ಸಮರ್ಪಕ ನೀರು ಪೂರೈಕೆ ಮಾಡಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಜನರ ಹಿತಕ್ಕಾಗಿ ಶ್ರಮಿಸುತ್ತಿದ್ದು, 123 ಸ್ಥಾನ ಗೆಲ್ಲಿಸಲು ಅರ್ಶಿವದಿಸಬೇಕು. ಶಾಸಕ ಡಾ.ಕೆ. ಅನ್ನದಾನಿ ನಿಮ್ಮ ಮನೆಯ ಮಗನಾಗಿದ್ದು, ಮುಂದಿನ ಚುನಾವಣೆಯಲ್ಲಿ ಅವರನ್ನು 50 ಸಾವಿರ ಲೀಡ್‌ನಲ್ಲಿ ಗೆಲ್ಲಿಸಬೇಕು. ಮೊಟ್ಟ ಮೊದಲ ಬಾರಿಗೆ ಶಾಸಕನಾದ ಸಂದರ್ಭದಲ್ಲಿ ಮೊದಲ ಬಾರಿಗೆ ಕ್ರೇನ್ ಮೂಲಕ ಹೂವಿನ ಹಾರ ಹಾಕಿದರು. ಅದನ್ನು ಬೇರೆ ಪಕ್ಷದವರು ಕಾಪಿ ಮಾಡಿಕೊಂಡು ಕ್ರೇನ್ ಮೂಲಕ ಹೂವು ಹೂವಿನ ಹಾರ ಹಾಕಿಸಲು ಮುಂದಾದರು. ಇದನ್ನು ಹರಿತ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹೊಸ ಟ್ರೆಂಡ್ ಆರಂಭಿಸಿ ಹೆಲಿಕಾಪ್ಟರ್ ಮೂಲಕ ಹೂವಿನ ಮಳೆ ಸುರಿಸಿದ್ದಾರೆ. ಅವರ ಅಭಿಮಾನಕ್ಕೆ ಚಿರಋಣಿ ಆಗಿರುತ್ತೇನೆ ಎಂದರು.

ಬಿಜೆಪಿ ಸರ್ಕಾರದ ವಿರುದ್ಧ ಎಚ್.ಡಿ.ಕೆ ಆಕ್ರೋಶ
ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿ ವಿರುದ್ದ ಟೀಕೆ ಮಾಡಲು ಅವರೇನು ಆಸ್ಪೃಶ್ಯರಾ ಎಂದು ಹೇಳಿದ್ದೇನೆ ಹೊರತು ದಲಿತರನ್ನು ಉದ್ದೇಶಿಸಿ ಮಾತನಾಡಿಲ್ಲ. ನಾನು ದೇಹಲಿಗೆ ಹೋದರೇ ಇಬ್ರಾಹಿಂ ಏಕೆ ಮುಖ್ಯಮಂತ್ರಿಯಾಗಬಾರದು ಎನ್ನುವ ವಿಚಾರದಲ್ಲಿ ಮಾತನಾಡಿದ್ದೇನೆ. 2006ರಲ್ಲಿ ರಸ್ತೆಯಲ್ಲಿ 10 ವರ್ಷದ ದಲಿತ ಹೆಣ್ಣು ಮಗುವಿಗೆ ಚಿಕಿತ್ಸೆ ಕೊಡಿಸಿ ಮೂರು ದಿನಗಳ ಕಾಲ ಮುಖ್ಯಮಂತ್ರಿ ಮನೆಯಲ್ಲಿಯೇ ಇರಿಸಿಕೊಂಡಿದ್ದೆ. ಮೈಸೂರಿನಲ್ಲಿ ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿದ್ದೇನೆ. ಹಲವು ಜನರಿಗೆ ಸಹಾಯ ಮಾಡಿದ್ದೇನೆ, ಇದನ್ನು ಯಾರಿದಂಲೂ ಕಲಿಯಬೇಕಿಲ್ಲ. ಪರಿಶಿಷ್ಟ ಜಾತಿಯ ಮಕ್ಕಳಿಗೆ ಸೌಲಭ್ಯ ಕೊಡಿಸಲು ಬಿಜೆಪಿ ಸರ್ಕಾರ ಮುಂದಾಗುತ್ತಿಲ್ಲ. ಅಂಬೇಡ್ಕರ್ ನಿಗಮ, ಸಮಾಜಕಲ್ಯಾಣ ಇಲಾಖೆ ಏನು ಕೆಲಸ ಮಾಡುತ್ತಿವೆ. ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಮಾರಕವಾಗಿವೆ. ಆದ್ದರಿಂದ ರಾಜ್ಯದ ಅಭಿವೃದ್ದಿಗಾಗಿ ಪ್ರದೇಶಿಕ ಪಕ್ಷವನ್ನು ಬೆಂಬಲಿಸಬೇಕ ಎಂದು ಮನವಿ ಮಾಡಿದರು.
ಶಾಸಕ ಡಾ. ಕೆ.ಅನ್ನದಾನಿ ಮಾತನಾಡಿ, ನಾಡಿನ ಜನರು ನೆಮ್ಮದಿಯಿಂದ ಬದುಕಲು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಈ ಮೂಲಕ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾನ್ನಾಗಿ ಮಾಡಬೇಕು. ಮುಂದಿನ ಚುನಾವಣೆಯಲ್ಲಿ
ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸುವುದರ ಮೂಲಕ ಕುಮಾರಣ್ಣ ಅವರಿಗೆ ಶಕ್ತಿ ತುಂಬಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಡಾ.ಕೆ. ಅನ್ನದಾನಿ, ಪುಟ್ಟರಾಜು, ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ತಾಲೂಕು ಅಧ್ಯಕ್ಷ ವಿಶ್ವನಾಥ್, ಯುವ ಜೆಡಿಎಸ್ ಅಧ್ಯಕ್ಷ ರವಿಕಂಸಾಗರ, ಪುರಸಭೆ ಅಧ್ಯಕ್ಷೆ ರಾಧನಾಗರಾಜು, ಉಪಾಧ್ಯಕ್ಷ ಪ್ರಶಾಂತ್, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications