ಮಂಡ್ಯದಲ್ಲಿ ಫೆಬ್ರವರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ?
ಮಂಡ್ಯ, ಆಗಸ್ಟ್ 08; ಸಕ್ಕರೆ ನಾಡು ಮಂಡ್ಯದಲ್ಲಿ 30 ವರ್ಷಗಳ ಬಳಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. 2024ರ ಫೆಬ್ರವರಿಯಲ್ಲಿ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲು ನಿರ್ಧರಿಸಲಾಗಿದ್ದು, ದಿನಾಂಕ ಇನ್ನೂ ಅಂತಿಮಗೊಳ್ಳಬೇಕಿದೆ.
ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು.

ಸಚಿವರು ಮಾತನಾಡಿ, "ಜಿಲ್ಲೆಯಲ್ಲಿರುವ ಕನ್ನಡ ಸಾಹಿತ್ಯ ಆಸಕ್ತರು, ಸಂಘ, ಸಂಸ್ಥೆ, ಸಂಘಟನೆಯ ಮುಖ್ಯಸ್ಥರ ಸಲಹೆ, ಅಭಿಪ್ರಾಯ ಹಾಗೂ ಸೂಚನೆಗಳನ್ನು ಪಡೆದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುತ್ತದೆ" ಎಂದು ಹೇಳಿದರು.
ಫೆಬ್ರವರಿಯಲ್ಲಿ ಸಮ್ಮೇಳನ; 1994ರಲ್ಲಿ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಫೆಬ್ರವರಿ 11 ರಿಂದ 13ರ ತನಕ ನಡೆಸಲಾಗಿತ್ತು. 2024ರ ಫೆಬ್ರವರಿಯಲ್ಲಿಯೇ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲು ಸಭೆಯಲ್ಲಿ ಚರ್ಚೆಗಳು ನಡೆದವು.
ಸಭೆಯಲ್ಲಿ ಮಾತನಾಡಿದ ಎನ್. ಚೆಲುವರಾಯಸ್ವಾಮಿ, "ಸಮ್ಮೇಳನ ಆಯೋಜಿಸುವ ಸಮಯದಲ್ಲಿ ನಡೆಯವ ಸಭೆಗಳಿಗೆ ಆಹ್ವಾನ ನೀಡಿಲ್ಲ ಎಂದು ಸಾಹಿತ್ತಾಸಕ್ತರು ಮನಸ್ತಾಪ ಮಾಡಿಕೊಳ್ಳಬಾರದು. ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲದಿದ್ದರೂ ಲಿಖಿತವಾಗಿ ತಮ್ಮ ಸಲಹೆಗಳನ್ನು ಜಿಲ್ಲಾಡಳಿತಕ್ಕೆ ಕಳುಹಿಸಿ ಕೊಡಬಹುದು" ಎಂದರು.
"ಸಾಹಿತ್ಯ ಸಮ್ಮೇಳನ ಆಯೋಜನೆಯ ದಿನಾಂಕ ನಿಗದಿ ಮಾಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಸಮ್ಮೇಳನದಲ್ಲಿ ಯುವಕರು, ರೈತರು ಹಾಗೂ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಿಗೆ ಪ್ರಾಮುಖ್ಯತೆ ನೀಡಲಾಗುವುದು" ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಶಾಸಕ ರವಿಕುಮಾರ್ ಮಾತನಾಡಿ, "ಜಿಲ್ಲಾ ಕೇಂದ್ರದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಲು ಎರಡು ಸ್ಥಳಗಳನ್ನು ಗುರುತಿಸಲಾಗಿದೆ. ಸಮ್ಮೇಳನಕ್ಕೆ ಬೇಕಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಕೇಂದ್ರದಲ್ಲಿ ಆಯೋಜಿಸುವಂತೆ" ಮನವಿ ಮಾಡಿದರು.
ವಿಧಾನ ಪರಿಷತ್ ಶಾಸಕ ಮಧು ಜಿ ಮಾದೇಗೌಡ ಮಾತನಾಡಿ, ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಸಮ್ಮೇಳನ ಆಯೋಜಿಸುವುದು ಸೂಕ್ತ ಎಂದು ಅನಿಸಿಕೆ ವ್ಯಕ್ತ ಪಡಿಸಿದರು. ಹಲ್ಲೆಗೆರೆಯ ವೈದ್ಯರೊಬ್ಬರೂ ವಿಶೇಷ ಸಾಧನೆ ಮಾಡಿದ್ದು, ಸಮ್ಮೇಳನದಲ್ಲಿ ಅವರನ್ನು ಗೌರವಿಸುವಂತೆ ಹಾಗೂ ಮೈ ಶುಗರ್ ಹೊಸ ಕಾರ್ಖಾನೆಗೆ ಬೇಕಿರುವ ಸಿದ್ಧತೆ ಮಾಡಿಕೊಂಡು ಶಂಕುಸ್ಥಾಪನೆಯನ್ನು ಸಮ್ಮೇಳನದ ಸಂದರ್ಭದಲ್ಲಿ ಮಾಡುವಂತೆ ಮನವಿ ಸಲ್ಲಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಸಂಘಟನೆಗಳ ಮುಖ್ಯಸ್ಥರು ಸಮ್ಮೇಳನ ಕೃಷಿ ಹಾಗೂ ಜಾನಪದಕ್ಕೆ, ಯುವ ಜನರಿಗೆ, ಸ್ಥಳೀಯ ಸಾಹಿತಿಗಳಿಗೆ, ಸ್ಥಳೀಯ ಸಾಹಿತಿಗಳ ಪುಸ್ತಕ ಮಾರಾಟಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಅಲ್ಲದೇ 2024ರ ಫೆಬ್ರವರಿಯಲ್ಲಿ ಸಮ್ಮೇಳನ ಆಯೋಜನೆ ಮಾಡಲು ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜಾತ್ಯತೀತ, ಪಕ್ಷಾತೀತವಾಗಿ ನಡೆಯಬೇಕು. ಹೆಚ್ಚಿನ ಎನ್.ಸಿ.ಸಿ, ಎನ್ ಎಸ್.ಎಸ್ ವಿದ್ಯಾರ್ಥಿಗಳನ್ನು ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ, ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ಬಗ್ಗೆ, ಸಮ್ಮೇಳನದಲ್ಲಿ ಕೈಗೊಂಡ ನಿರ್ಣಾಯಗಳನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಮಾತನಾಡಿ, "ಸಮ್ಮೇಳನ ಆಯೋಜನೆಗೆ ಸರ್ಕಾರದ ಸಹಾಯ ಬೇಕಿದೆ. ಜನಪ್ರತಿನಿಧಿಗಳು, ಮುಖಂಡರು, ಜನರ ಸಮನ್ವಯ ಸಾಧಿಸಲಾಗುತ್ತದೆ" ಎಂದರು. ಕಳೆದ ಸಾಲಿನಲ್ಲಿ ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಬಗ್ಗೆ ವಿವರಣೆ ನೀಡಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ, ಅನುದಾನ, ವೇದಿಕೆ, ವಿವಿಧ ಸಮಿತಿ, ಪುಸ್ತಕ ಮಾರಾಟ ಮಳಿಗೆ, ನೋಂದಣಿ, ಸಮ್ಮೇಳನದಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಇನ್ನಿತರೆ ವಿಷಯಗಳಲ್ಲಿ ವಿಶೇಷ ಸಾಧನೆ ಮಾಡಿರುವ 87 ಜನರನ್ನು ಗುರುತಿಸಿ ಗೌರವಿಸುವ ಕುರಿತಂತೆ ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು.
ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಮತ್ತು ಧ್ಯೇಯವಾಕ್ಯವನ್ನು ಜನರಿಂದ ಆಹ್ವಾನಿಸಿತ್ತು. ಕೊನೆ ಕ್ಷಣದಲ್ಲಿ ಆಗುವ ಗಡಿಬಿಡಿಯನ್ನು ತಡೆಯಲು ಕಸಾಪ ಈಗಾಗಲೇ ಸಮ್ಮೇಳನಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.
ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 87ನೇ ಸಮ್ಮೇಳನವನ್ನು ನಡೆಸಲು ಮಂಡ್ಯ ಜಿಲ್ಲೆಗೆ ಅವಕಾಶ ಸಿಕ್ಕಿತ್ತು. ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿಕ್ಕಮಗಳೂರು, ಉತ್ತರ ಕನ್ನಡ, ರಾಮನಗರ, ಬಳ್ಳಾರಿ, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಸಹ ಸಮ್ಮೇಳನ ಆಯೋಜನೆಯ ಸ್ಪರ್ಧೆಯಲ್ಲಿದ್ದವು.












Click it and Unblock the Notifications