Kodagu Bandh: ವೀರ ಸೇನಾನಿಗಳ ನಿಂದನೆ ಖಂಡಿಸಿ ಕೊಡಗು ಬಂದ್‌ಗೆ ಉತ್ತಮ ಸ್ಪಂದನೆ
ಮಡಿಕೇರಿ, ಡಿಸೆಂಬರ್ 12: ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್ ತಿಮ್ಮಯ್ಯ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಮಾನ ಮಾಡಿದ ವ್ಯಕ್ತಿಯ ಗಡಿಪಾರಿಗೆ ಆಗ್ರಹಿಸಿ ಕೊಡಗು ಸರ್ವ ಜನಾಂಗಗಳ ಒಕ್ಕೂಟ ಕರೆ ನೀಡಿದ್ದ ಅರ್ಧ ದಿನದ ಕೊಡಗು ಬಂದ್‌ಗೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ದೊರೆತಿದೆ. ಖಾಸಗಿ ಬಸ್‌ಗಳು, ಆಟೋ ಇನ್ನಿತರ ವಾಹನಗಳು ರಸ್ತೆಗಿಳಿಯಲಿಲ್ಲ. ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ಸೂಚಿಸಿದ್ದಾರೆ.
ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆ ತನಕ ಕೊಡಗು ಬಂದ್ ಮಾಡುವಂತೆ ಕೊಡಗು ಸರ್ವ ಜನಾಂಗಗಳ ಒಕ್ಕೂಟ ಕರೆ ನೀಡಿತ್ತು. ಇದಕ್ಕೆ ಕೊಡಗಿನಾದ್ಯಂತ ಎಲ್ಲ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಕೊಡಗಿನ ಮುಖ್ಯಪಟ್ಟಣ, ವೀರಾಜಪೇಟೆ. ಕುಶಾಲನಗರ, ಗೋಣಿಕೊಪ್ಪ, ಸೋಮವಾರಪೇಟೆ ಕುಟ್ಟ, ಕೊಡ್ಲಿಪೇಟೆ ಹೀಗೆ ಇಡೀ ಜಿಲ್ಲೆ ಬಂದ್‌ಗೆ ಸ್ಪಂದನೆ ನೀಡಿತ್ತಲ್ಲದೆ, ವೀರಸೇನಾನಿಗಳಿಗೆ ಅಪಮಾನ ಮಾಡಿದ್ದನ್ನು ಖಂಡಿಸಿದ್ದಾರೆ.

ಸಮುದಾಯಗಳ ನಡುವೆ ಬಿರುಕು ಮೂಡಿಸುವ ಕೃತ್ಯವನ್ನು ಯಾರೇ ಎಸಗಿದರೂ ಅದನ್ನು ಖಂಡಿಸುವ ಮತ್ತು ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಒತ್ತಾಯವನ್ನು ಬಂದ್ ಮೂಲಕ ಮಾಡಲಾಗಿದೆ. ಕೊಡಗಿನ ಹೆಬ್ಬಾಗಿಲು ಎಂದೇ ಕರೆಯುವ ಕುಶಾಲನಗರದಲ್ಲಿ ವರ್ತಕರು ತಮ್ಮ ಅಂಗಡಿಯನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಇಲ್ಲಿನ ನಿಸರ್ಗಧಾಮದ ವಾಣಿಜ್ಯ ಮಾಳಿಗೆಗಳು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ನಿಸರ್ಗಧಾಮದ ಮುಂಭಾಗದ ವಾಣಿಜ್ಯ ಕೇಂದ್ರ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕೊಡ್ಲಿಪೇಟೆಯಿಂದ ಕುಟ್ಟದವರೆಗೆ ಸ್ಪಂದನೆ
ಮಡಿಕೇರಿಯಲ್ಲಿಯೂ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತು. ಖಾಸಗಿ ಬಸ್ ರಸ್ತೆಗಿಳಿಯಲಿಲ್ಲ. ಅಗತ್ಯ ಸೇವೆಗಳು ಎಂದಿನಂತೆ ಇದ್ದವು. ಕೊಡಗು ಜಿಲ್ಲೆಯಾದ್ಯಂತ ಕೊಡ್ಲಿಪೇಟೆಯಿಂದ ಕುಟ್ಟದವರೆಗೆ ಎಲ್ಲ ಕಡೆಯಲ್ಲಿಯೂ ಬೆಂಬಲ ವ್ಯಕ್ತವಾಗಿದೆ ಜನ ಸಂಚಾರವೂ ಕೂಡ ವಿರಳವಾಗಿತ್ತು. ಬಹುತೇಕ ಕಡೆ ಆಟೋಗಳ ಓಡಾಟವೂ ಇರಲಿಲ್ಲ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ರವರಿಗೆ ಅಪಮಾನ ಮಾಡಿದ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ಒತ್ತಾಯಿಸುತ್ತಿದ್ದ ದೃಶ್ಯವೂ ಕಂಡು ಬಂದಿತ್ತು.

ಕೊಡಗು ಹಾಸನ ಗಡಿಯಂಚಿನ ಶನಿವಾರಸಂತೆಯಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತು. ಇಲ್ಲಿ. ಯಾವುದೇ ಅಂಗಡಿ ಮುಂಗಟ್ಟು ತೆರೆದಿರಲಿಲ್ಲ. ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ಸಿಗಾಗಿ ಕೆಲವು ಪ್ರಯಾಣಿಕರು ನಿಂತಿರುವ ದೃಶ್ಯ ಕಂಡು ಬಂತು. ಗೋಣಿಕೊಪ್ಪಲಿನಲ್ಲಿ ಖಾಸಗಿ ಬಸ್ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಕಂಡು ಬಂದಿತು. ಸರ್ಕಾರಿ ಬಸ್ಸುಗಳು ಓಡಾಡುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ವಿರಾಜಪೇಟೆ ಪಟ್ಟಣದಲ್ಲಿ ಕೊಡಗು ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು
ವೈಯಕ್ತಿಕವಾಗಿ ನಿಂದಿಸದಂತೆ ಆಗ್ರಹ
ಬಾಳೆಲೆ ಶ್ರೀ ರಾಮ ವೃತ್ತದಲ್ಲಿ ಸಭೆ ಸೇರಿ ದೇಶ ಕಂಡ ಶ್ರೇಷ್ಠ ಸೇನಾನಿಗಳಾಗಿರುವ, ಫೀ.ಮಾ ಕೆ.ಎಂ.ಕಾರ್ಯಪ್ಪ ಹಾಗು ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿದ ಆರೋಪಿ ವಕೀಲ ವಿದ್ಯಾದರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವೀರಸೇನಾನಿಗಳು ಸೇರಿದಂತೆ ಯಾರನ್ನೂ ವೈಯಕ್ತಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸುವುದು ಸರಿಯಲ್ಲವೆಂದು ಮುಖಂಡರಾದ ಅಳಮೆಂಗಡ ಬೋಸ್ ಮಂದಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಮೂರ್ನಾಡು ಪಟ್ಟಣದಲ್ಲಿ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪಕ್ಷ ಬೇಧ, ಜಾತಿ ಭೇದ ಮರೆತು ಒಟ್ಟಾಗಿ ಮೂರ್ನಾಡಿನ ಬಸ್ ನಿಲ್ದಾಣದಲ್ಲಿ ಪ್ರತಿಭಟನೆಯನ್ನು ನಡೆಸಿದರು. ಮಧ್ಯಾಹ್ನದ ಬಳಿಕ ವರ್ತಕರು ಅಂಗಡಿ ಮುಂಗಟ್ಟುಗಳನ್ನು ತೆರದಿದ್ದು ಖಾಸಗಿ ಬಸ್ ಸೇರಿದಂತೆ ವಾಹನಗಳು ಓಡಾಟ ಆರಂಭಿಸಿದ್ದು ಜನಜೀವನ ಎಂದಿನಂತೆ ಸಾಗಿದೆ. ಇದು ಕೇವಲ ಸಾಂಕೇತಿಕ ಬಂದ್ ಆಗಿತ್ತಲ್ಲದೆ, ಇದಕ್ಕೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ದೊರೆತಿದೆ.
ಮೂವತ್ತೆರಡಕ್ಕೂ ಹೆಚ್ಚು ಸಂಘಟನೆಯ ಬೆಂಬಲ
ಇನ್ನು ಬಂದ್‌ಗೆ ಭಾರತೀಯ ಜನತಾ ಪಕ್ಷ, ಕೊಡಗು ಜಿಲ್ಲಾ ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್, ಕೊಡಗು ಮುಸ್ಲಿಂ ಅಸೋಸಿಯೇಷನ್, ಕೇಸರಿ ಯೂತ್ ಮೂವ್ ಮೆಂಟ್ ಸೇವಾ ಸಮಿತಿ, ಪೊಂಬೊಳ್ಚ ಕೂಟ ವಿರಾಜಪೇಟೆ, ರೂಟ್ಸ್ ಆಫ್ ಕೊಡಗು,ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ ವಿರಾಜಪೇಟೆ, ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್, ಕೊಡವ ಪೊಮ್ಮಕ್ಕಡ ಕೂಟ, ಗ್ರಾಮಸ್ಥರು, ಆರ್ಜಿ ಗ್ರಾಮ, ಗ್ರಾಮಸ್ಥರು, ಕದನೂರು ಗ್ರಾಮ, ಗೋಣಿಕೊಪ್ಪ ಕಾವೇರಿ ಪೊಮ್ಮಕ್ಕಡ ಕೂಟ, ಕೊಡಗು ವೆಲ್ಫೇರ್ ಅಸೋಸಿಯೇಷನ್ ಬೆಂಗಳೂರು.
ಕೊಡವ ಕೂಟಾಳಿಯಡ ಕೂಟ, ಚಿನ್ನ- ಬೆಳ್ಳಿ ವರ್ತಕರ ಸಂಘ, ಗೋಣಿಕೊಪ್ಪ, ಪಿ ಪಿ ಕೆ - ಪ್ರತೀಕ್ ಪೊನಣ್ಣ, ಸೇವ್ ರಿವರ್ ಕಾವೇರಿ ಕೊಡಗು, ಚೇಂಬರ್ ಆಫ್ ಕಾಮರ್ಸ್ ಪೊನ್ನಂಪೇಟೆ, ಕುಶಾಲ ಕುಂಬಾರ ಸಂಘ ಕೊಡಗು, ಕೊಡವ ಟಗ್ ಆಫ್ ವಾರ್ ಅಕಾಡೆಮಿ ಕೊಡಗು, ಉಳ್ಳಿಯಡ ಎಂ. ಪೂವಯ್ಯ, ಬ್ರಹ್ಮಗಿರಿ ಪತ್ರಿಕೆ, ಕೊಡವ ನ್ಯಾಷನಲ್ ಕೌನ್ಸಿಲ್ (ಸಿ ಎನ್ ಸಿ), ತಿರಿ ಬೊಳ್ಚ ಕೂಟ, ಮಡಿಕೇರಿ, ಕೊಡವ ಬೈಕರ್ಸ್ ಅಸೋಸಿಯೇಷನ್, ಕೊಡಗು, ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ ಕೈಕೇರಿ.
ಕೊಡಗು ರಕ್ಷಣಾ ವೇದಿಕೆ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್, ಬೆಪ್ಪು ನಾಡ್ ಕೊಡವ ಸಂಘ, ಅರಮೇರಿ, ಕೊಡಗು ಹೋಟೆಲ್, ರೆಸ್ಟೋರೆಂಟ್ ಮತ್ತು ರೆಸಾರ್ಟ್ ಮಾಲೀಕರ ಸಂಘ, ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್, ಕೊಡಗು, ಮಿಷನ್ ಮೋದಿ ಡೆಮಾಕ್ರಸಿ ಡೆವೆಲಪ್ ಮೆಂಟ್ ಟ್ರಸ್ಟ್ ಮೈಸೂರು ಜಿಲ್ಲೆ ಪ್ರಭಾರಿ ಕೊಡಗು ಜಿಲ್ಲೆ, ಗೋಣಿಕೊಪ್ಪ ಪ್ರಗತಿ ಅಟೋ ಚಾಲಕರ ಹಾಗೂ ಮಾಲೀಕರ ಸಂಘಗಳು ಬಂದ್‌ಗೆ ಮೊದಲಾದ ಸಂಘಟನೆಗಳು ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು.












Click it and Unblock the Notifications