ಕಾಫಿ ತೋಟದಲ್ಲಿ ಕಾರ್ಮಿಕರ ನೇಮಿಸಿಕೊಳ್ಳುವ ಮುನ್ನ ಎಚ್ಚರವಿರಲಿ: ಯಾಕೆ ಗೊತ್ತಾ?
ಮಡಿಕೇರಿ, ಡಿಸೆಂಬರ್ 20: ಕಾಫಿ ಬೆಲೆ ಗಗನಕ್ಕೇರುತ್ತಿದ್ದಂತೆಯೇ ಬೆಳೆಗಾರರಿಗೆ ಕಾಫಿಯನ್ನು ಕಳ್ಳರಿಂದ ರಕ್ಷಿಸಿಕೊಳ್ಳುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮೊದಲೆಲ್ಲ ಕಾಫಿ ಕೊಯ್ಲು ಮಾಡಿ ಎಲ್ಲೆಂದರಲ್ಲಿ ರಾಶಿ ಹಾಕಿಟ್ಟರೂ ಯಾರೂ ಅದರ ಗೋಜಿಗೆ ಹೋಗುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಕಾಫಿಯನ್ನು ಕೊಯ್ಲು ಮಾಡಿ ಮಾರಾಟ ಮಾಡುವ ತನಕ ಕಣ್ಣಿಗೆ ಎಣ್ಣೆಹಾಕಿಕೊಂಡು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಅರೇಬಿಕಾ ಕಾಫಿ ಕೊಯ್ಲು ನಡೆಯುತ್ತಿದ್ದು, ರೋಬಸ್ಟಾ ಕಾಫಿ ಕೂಡ ಹಣ್ಣಾಗುತ್ತಿದ್ದು, ಕೊಯ್ಲು ಆರಂಭಗೊಂಡಿದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ರೊಬಸ್ಟಾ ಕಾಫಿಯನ್ನೇ ಬೆಳೆಯುತ್ತಿದ್ದು, ಇದು ಅರೇಬಿಕಾ ಕಾಫಿಯಷ್ಟು ಬೇಗ ಕೊಯ್ಲುಗೆ ಬರುವುದಿಲ್ಲ. ಹೀಗಾಗಿ ಜನವರಿ ಮತ್ತು ಫೆಬ್ರವರಿವರೆಗೆ ಕೊಯ್ಲು ನಡೆಯಲಿದೆ. ಆದರೆ ಕಾಫಿ ಗಿಡದಲ್ಲಿ ಕೊಯ್ಲುಗೆ ಬರುತ್ತಿದ್ದಂತೆಯೇ ಕಾಫಿ ಬೆಳೆಗಾರರಲ್ಲಿ ಆತಂಕವೂ ಶುರುವಾಗಿದೆ. ಕಾಫಿ ಹಣ್ಣಾಗುತ್ತಿದ್ದಂತೆಯೇ ಕೊಯ್ಲು ಮಾಡಿ ಮುಗಿಸಬೇಕಿದೆ. ಆದರೆ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಪರದಾಡುವಂತಾಗಿದೆ.

ಈ ಹಿಂದೆ ಸ್ಥಳೀಯವಾಗಿಯೇ ಕಾರ್ಮಿಕರು ಕೆಲಸಕ್ಕೆ ಸಿಗುತ್ತಿದ್ದರು. ಆದರೆ ಬದಲಾದ ಕಾಲದಲ್ಲಿ ತೋಟದಲ್ಲಿ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಇರುವ ಕೆಲವು ಕಾರ್ಮಿಕರು ಕೆಲವು ಎಸ್ಟೇಟ್ ಗಳಲ್ಲಿ ಖಾಯಂ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ಕಾರ್ಮಿಕರಿಗೂ ಹೆಚ್ಚಿನ ಬೇಡಿಕೆಯಿರುವುದರಿಂದ ಅವರನ್ನು ಮನೆಗೆ ಬಂದು ಕರೆದೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಾರ್ಮಿಕರ ಕೊರತೆಯಿಂದಾಗಿ ದೂರದಿಂದ ಬರಲಿರುವ ಅಸ್ಸಾಂ ಕಾರ್ಮಿಕರನ್ನು ಕಾದು ಕುಳಿತುಕೊಳ್ಳುವಂತಾಗಿದೆ.
ಕಾಫಿಯನ್ನು ಕಾಯುವುದೇ ಸವಾಲ್
ಈ ನಡುವೆ ಮಳೆ ಮತ್ತು ಮಳೆ ಮೋಡದ ವಾತಾವರಣ ಇದ್ದುದರಿಂದ ಬೆಳೆಗಾರರು ಆತಂಕಗೊಂಡಿದ್ದರು. ಈ ಸಮಯದಲ್ಲಿ ಹೆಚ್ಚಿನ ಬಿಸಿಲಿನ ಅವಶ್ಯಕತೆಯಿದೆ. ಕೊಯ್ಲು ಮಾಡಿದ ಕಾಫಿ ಹಣ್ಣನ್ನು ಬಿಸಿಲು ಚೆನ್ನಾಗಿ ಬೀಳುವ ಪ್ರದೇಶದಲ್ಲಿ ಹರಡಿ ಒಣಗಿಸಬೇಕಾಗುತ್ತದೆ. ಹೀಗೆ ಹರಡಿ ಒಣಗಿಸುವುದೇ ಬೆಳೆಗಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಕಾರಣ ಕಳ್ಳರು ಹೆಚ್ಚಾಗುತ್ತಿದ್ದು, ಕೆಲವೆಡೆ ಒಣ ಹಾಕಿದ್ದಲ್ಲಿಂದಲೇ ಕಾಫಿಯನ್ನು ಕಳ್ಳತನ ಮಾಡುತ್ತಿರುವುದು ವರದಿಯಾಗಿದೆ. ಹೀಗಾಗಿ ರಾತ್ರಿ ಹಗಲು ಕಾವಲು ಕಾದು ಕಾಫಿಯನ್ನು ಒಣಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ದೂರದಿಂದ ಬಂದಿರುವ ಅಸ್ಸಾಂ ಕಾರ್ಮಿಕರಿಂದಲೇ ಕಾಫಿಕೊಯ್ಲು ಮಾಡಿಸಬೇಕಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಅವರಿಲ್ಲದೆ ತೋಟದ ಕೆಲಸವೇ ನಡೆಯುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ತಮ್ಮ ಕೆಲಸ ಬೇಗ ಮುಗಿಯಲಿ ಎಂಬ ಕಾರಣಕ್ಕಾಗಿ ತೋಟದ ಮಾಲೀಕರು ಸಿಕ್ಕ ಸಿಕ್ಕವರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಇದು ಅಪಾಯಕಾರಿ ಎಂಬುದು ಗೊತ್ತಿದ್ದರೂ ಅದನ್ನೇ ಮಾಡುತ್ತಿದ್ದಾರೆ. ಹಿಂದೆ ಕಾಫಿಯನ್ನು ದಾಸ್ತಾನಿಟ್ಟಲ್ಲಿಂದ ಕಳ್ಳತನ ಮಾಡುತ್ತಿದ್ದ ಪ್ರಕರಣಗಳು ನಡೆಯುತ್ತಿತ್ತು. ಆದರೀಗ ಹಸಿಕಾಫಿಯನ್ನೇ ಕಳ್ಳತನ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ.

ಪೊಲೀಸರು ನೀಡುವ ಸೂಚನೆಗಳೇನು?
ಹೀಗಿರುವಾಗ ಬೆಳೆಗಾರರು ಗುರುತು ಪರಿಚಯವಿಲ್ಲದ ಮತ್ತು ಪೊಲೀಸ್ ಇಲಾಖೆ ನಿಯಮಗಳನ್ನು ಪಾಲಿಸದೆ ಕೆಲಸಕ್ಕೆ ದೂರದ ಅಸ್ಸಾಂನ ಕೆಲಸಗಾರರನ್ನು ನೇಮಿಸಿಕೊಳ್ಳುವುದು ಅಪಾಯಕಾರಿಯಾಗಿದೆ. ಒಂದು ವೇಳೆ ಪೊಲೀಸ್ ಇಲಾಖೆ ನೀಡಿರುವ ಸೂಚನೆ ಮತ್ತು ನಿಯಮವನ್ನು ಪಾಲಿಸದೆ ಹೋದರೆ ಒಂದು ವೇಳೆ ಅಪರಾಧ ಘಟನೆ ನಡೆದರೆ ಅದಕ್ಕೆ ಮಾಲೀಕರನ್ನೇ ಎ 2 ಆರೋಪಿಯನ್ನಾಗಿ ಮಾಡಲಾಗುತ್ತದೆ. ಈ ಬಗ್ಗೆ ಮಾಲೀಕರು ಅರಿತು ಕೊಳ್ಳುವುದು ಒಳ್ಳೆಯದು.
ಪ್ರತಿವರ್ಷವೂ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿನ ಕಾಫಿ ಮತ್ತು ಕಾಳು ಮೆಣಸು ವ್ಯಾಪಾರಿಗಳು, ತೋಟದ ಮಾಲೀಕರೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ಪಡೆದು, ಕಾಫಿ ಮತ್ತು ಕಾಳು ಮೆಣಸು ವ್ಯಾಪರಸ್ಥರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಜತೆಗೆ ಕಾಫಿ ಮತ್ತು ಕಾಳು ಮೆಣಸು ವ್ಯಾಪಾರಸ್ಥರು ಕಾಫಿ ಮತ್ತು ಕಾಳು ಮೆಣಸು ಖರೀದಿ ಮಾಡುವ ಸಂದರ್ಭದಲ್ಲಿ ಮಾರಾಟ ಮಾಡುವವರ ಸಂಪೂರ್ಣ ಮಾಹಿತಿ (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ)ಯನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಸೂಚಿಸಲಾಗುತ್ತಿದೆ.
ತೋಟದ ಮಾಲೀಕರು ಎಚ್ಚರವಾಗಿರಿ
ಒಂದು ವೇಳೆ ಕಾಫಿ ಖರೀದಿ ಸಂದರ್ಭ ಸಂಶಯ ಉಂಟಾದಲ್ಲಿ ಅಂತಹ ವ್ಯಕ್ತಿಗಳ ಭಾವಚಿತ್ರವನ್ನು ತೆಗೆದುಕೊಳ್ಳುವುದು ಹಾಗೆಯೇ ಸದರಿ ಮಾರಾಟಗಾರರ ಕುರಿತು ಮತ್ತು ಅವರ ಹಿನ್ನೆಲೆಯನ್ನು ಪರಿಶೀಲಿಸಿ ಎಚ್ಚರಿಕೆಯಿಂದ ವ್ಯವಹರಿಸಲು ಬೆಳೆಗಾರರಿಗೆ ಸೂಚಿಸಲಾಗಿದೆ. ಒಂದು ವೇಳೆ ವ್ಯಾಪಾರಸ್ಥರು ಖರೀದಿದಾರರ ವಿವರವನ್ನು ಸಂಗ್ರಹಿಸದಿರುವುದು ಕಂಡುಬಂದಲ್ಲಿ ಅಂತಹ ವ್ಯಾಪರಸ್ಥರ ಮೇಲೆ ಸೆಕ್ಷನ್: 411 ಐಪಿಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ನ್ಯಾಯಾಲಯವು 3 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.

ಇದೆಲ್ಲದರ ನಡುವೆ ಬೆಳೆಗಾರರು ಕಾಫಿ ವ್ಯಾಪಾರ ನಡೆಸುವ ಸಂದರ್ಭ ಮಾರಾಟದಾರರ ಕುರಿತು ಸಂಶಯ ಬಂದಲ್ಲಿ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ಒದಗಿಸಿದಲ್ಲಿ ಕೂಡಲೇ ಸ್ಥಳಕ್ಕೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ, ತರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಅದು ಏನೇ ಇರಲಿ ತೋಟದ ಮಾಲೀಕರು ಒಂದಷ್ಟು ಎಚ್ಚರಿಕೆ ವಹಿಸುವುದು ಬಹುಮುಖ್ಯವಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications