ಮಡಿಕೇರಿಯಲ್ಲಿ ಅತ್ತಿಗೆಯ ಕೊಲೆಗೆ ಮೈದುನನೇ ಕೊಟ್ಟ ಸುಪಾರಿ
ಮಡಿಕೇರಿ, ಜನವರಿ 01: ಆಸ್ತಿ ವೈಷಮ್ಯದಿಂದ ಆಕ್ರೋಶಗೊಂಡಿದ್ದ ವ್ಯಕ್ತಿಯೊಬ್ಬ ತನ್ನ ಅಣ್ಣನ ಹೆಂಡತಿಯ ಹತ್ಯೆಗೆ ಸಂಚು ರೂಪಿಸಿ ಇದೀಗ ಜೈಲು ಪಾಲಾಗಿದ್ದಾನೆ. ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಚೇಲಾವರ ಗ್ರಾಮದ ನಿವಾಸಿ ಎಂ.ಎನ್. ಸುಬ್ಬಯ್ಯ, ತನ್ನ ಅತ್ತಿಗೆ ಕೊಲೆಗೆ ಸಂಚು ಮಾಡಿದ ಆರೋಪಿ.
ಈತನ ಅತ್ತಿಗೆ ರೇಖಾ ಪೂವಯ್ಯ ನೀಡಿರುವ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.
ಕಳೆದ ಅಕ್ಟೋಬರ್ ನಿಂದ ಆರೋಪಿ ರೇಖಾ ಅವರಿಗೆ ನಿರಂತರವಾಗಿ ಕಿರುಕುಳ ನೀಡುವುದರೊಂದಿಗೆ ಕೊಲೆ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ರಕ್ಷಣೆ ನೀಡುವಂತೆ ಮಹಿಳೆ ಕೇಳಿಕೊಂಡಿದ್ದಾರೆ. ಅಲ್ಲದೆ ಆರೋಪಿಯು ಅಸ್ಸಾಂ ಮೂಲದ ಕಾರ್ಮಿಕರ ತಂಡವೊಂದಕ್ಕೆ ಸುಪಾರಿ ನೀಡಲು ಮುಂದಾಗಿದ್ದ ಎಂಬುದು ತಿಳಿದುಬಂದಿದೆ. ಆ ಕಾರ್ಮಿಕರು ಇದಕ್ಕೆ ಒಪ್ಪದೆ ವಿಷಯವನ್ನು ನೇರ ರೇಖಾ ಪೂವಯ್ಯ ಅವರಿಗೆ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ತುರ್ತು ಮಾಹಿತಿ ಕಲೆ ಹಾಕಿ, ತನಿಖೆಗೆ ಸೂಚಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಆಸ್ತಿಗಾಗಿ ಅತ್ತಿಗೆಯನ್ನು ಕೊಲೆ ಮಾಡಲು ಆರೋಪಿಯು ಹೊರ ರಾಜ್ಯದ ಕಾರ್ಮಿಕರಿಗೆ ಲಕ್ಷಗಟ್ಟಲೆ ಹಣ ಕೊಟ್ಟು ಸುಪಾರಿ ನೀಡಿರುವುದಾಗಿ ಮಾಹಿತಿ ಲಭಿಸಿದೆ. ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.












Click it and Unblock the Notifications