ಯುಪಿಯಲ್ಲಿ ಗೂಂಡಾರಾಜ್, ಮಾಫಿಯಾ ನಿಯಂತ್ರಣಕ್ಕಾಗಿ ಬಿಜೆಪಿ ಸರ್ಕಾರ ತನ್ನಿ ಎಂದ ಮೋದಿ
ಲಕ್ನೋ, ಫೆಬ್ರವರಿ 16: ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದೆಂದರೆ ಹಿಂದಿನ ಆಡಳಿತದ ವೇಳೆ ಪ್ರಚಲಿತದಲ್ಲಿದ್ದ ಗಲಭೆಕೋರರು, ಮಾಫಿಯಾ ರಾಜ್ ಮತ್ತು ಗೂಂಡಾ ರಾಜ್‌ಗಳನ್ನು ನಿಯಂತ್ರಿಸುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸೀತಾಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಯುಪಿಯಲ್ಲಿ ಜನರ ಉತ್ಸಾಹವನ್ನು ನೋಡುತ್ತಿದ್ದರೆ, ರಾಜ್ಯದಲ್ಲಿ ಉಳಿದ ಐದು ಹಂತಗಳ ಚುನಾವಣೆಯಲ್ಲಿ ದಾಖಲೆ ಮತದಾನ ನಡೆಯಲಿದೆ. ಬಿಜೆಪಿ ಪರ ವ್ಯಾಪಕ ಬೆಂಬಲ ವ್ಯಕ್ತವಾಗಲಿದೆ ಎಂದರು.
"ಯುಪಿಯಲ್ಲಿ ಬಿಜೆಪಿ ಸರ್ಕಾರವಿದೆ ಎಂದರೆ ಅದು ಹಬ್ಬಗಳನ್ನು ಆಚರಿಸುವ ಸ್ವಾತಂತ್ರ್ಯ, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆ. ಇಲ್ಲಿ ನಮ್ಮ ಸರ್ಕಾರ ಎಂದರೆ ಬಡವರ ಕಲ್ಯಾಣಕ್ಕಾಗಿ ನಿರಂತರ ಕೆಲಸ ಮತ್ತು ಕೇಂದ್ರದ ಯೋಜನೆಗಳಿಗೆ ದುಪ್ಪಟ್ಟು ವೇಗ ಸಿಗಲಿದೆ ಎಂದರ್ಥ." ಫೆಬ್ರವರಿ 23ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿರುವ ಸೀತಾಪುರ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮತ ನೀಡಿ:
ರಾಜ್ಯದಲ್ಲಿ 'ಕಾನೂನು ಸುವ್ಯವಸ್ಥೆ'ಯನ್ನು ಜಾರಿಗೆ ತಂದಿರುವ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡುವಂತೆ ಪ್ರಧಾನಿ ಮೋದಿ ಸಾರ್ವಜನಿಕರಲ್ಲಿ ಮನವಿ ಮಾಡಿದರು. "ಈಗ ಯೋಗಿ ಜಿ ಸರ್ಕಾರವು ಗಲಭೆಕೋರರು ಮತ್ತು ಕ್ರಿಮಿನಲ್‌ಗಳಿಂದ ಯುಪಿ ಜನರನ್ನು ಬಿಡುಗಡೆ ಮಾಡಲು ಕೆಲಸ ಮಾಡುತ್ತಿದೆ. ಅದಕ್ಕಾಗಿಯೇ ಇಂದು ಇಡೀ ಉತ್ತರ ಪ್ರದೇಶವು ಕಾನೂನು ಸುವ್ಯವಸ್ಥೆ ಜಾರಿಗೆ ತಂದವರನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಹೇಳುತ್ತಿದೆ" ಎಂದು ಪ್ರಧಾನಿ ಮೋದಿ ಹೇಳಿದರು.
ಉತ್ತರ ಪ್ರದೇಶದಲ್ಲಿ ಮಾಫಿಯಾ ಆಡಳಿತ:
'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಿದ್ದಾಗ ಬಡವರು ಹೆಚ್ಚು ತೊಂದರೆ ಅನುಭವಿಸುತ್ತಾರೆ, ಮಾಫಿಯಾ ಆಡಳಿತದಲ್ಲಿ ಬಡವರನ್ನು ಕೇಳುವವರೇ ಇಲ್ಲ. ಈ ಹಿಂದೆ ರಾಜವಂಶಸ್ಥರು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಅದೇ ರೀತಿ ವಾತಾವರಣವನ್ನು ಸೃಷ್ಟಿ ಮಾಡಿದ್ದರು ಎಂದು ಮೋದಿ ಆರೋಪಿಸಿದರು.
ಸ್ಥಳೀಯ ಕೈಗಾರಿಕೆಗಳಿಗೆ ಉತ್ತೇಜನ:
ಉತ್ತರ ಪ್ರದೇಶದಲ್ಲಿ ಹಿಂದಿನ ಸರ್ಕಾರಗಳು ಸ್ಥಳೀಯ ಕೈಗಾರಿಕೆಗಳಿಗೆ ಉತ್ತೇಜನ ನೀಡಲಿಲ್ಲ. ಅದರ ಬದಲಿಗೆ ಆಮದಿನ ಮೇಲೆ ಕೇಂದ್ರೀಕೃತವಾಗಿದ್ದವು ಎಂದು ಪ್ರಧಾನಿ ಮೋದಿ ಆರೋಪಿಸಿದರು. ಹಲವು ವರ್ಷಗಳವರೆಗೂ ನಮ್ಮ ಕುಶಲಕರ್ಮಿಗಳ ಕೌಶಲ್ಯಕ್ಕೆ ಒತ್ತು ನೀಡುವ ಬದಲು ಅವರು ವಿದೇಶದಿಂದ ಆಮದು ಮಾಡಿಕೊಳ್ಳಲು ಒತ್ತು ನೀಡುತ್ತಿದ್ದರು. ಇಂದು ನಾವು ಸ್ಥಳೀಯರ ಬಗ್ಗೆ ಮಾತನಾಡುತ್ತಿದ್ದೇವೆ. ದೇಶದಲ್ಲಿ ಗರಿಷ್ಠ ಉತ್ಪಾದನೆಯಾಗಬೇಕು, ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಯುಪಿಯಲ್ಲಿ ಹೋಳಿ ಹಬ್ಬದ ದಿನವೇ ಉಚಿತ ಸಿಲಿಂಡರ್:
ಉತ್ತರ ಪ್ರದೇಶದ ಔರೈಯಾದಲ್ಲಿ ಮಾತನಾಡಿದ ಅಮಿತ್ ಶಾ, ರೈತರಿಗೆ ಉಚಿತ ವಿದ್ಯುತ್ ಸರಬರಾಜು ಸೇರಿದಂತೆ ಹಲವು ಭರವಸೆಗಳನ್ನು ಘೋಷಿಸಿದರು. ಮಾರ್ಚ್ 10ರಂದು ಮತ ಎಣಿಕೆಯಿದೆ, 10ರಂದು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ, ಮಾರ್ಚ್ 18ರ ಹೋಳಿ ಹಬ್ಬದ ದಿನ ಉಚಿತ ಗ್ಯಾಸ್ ಸಿಲಿಂಡರ್ ನಿಮ್ಮ ಮನೆಗೆ ತಲುಪುತ್ತದೆ. ಮುಂದಿನ 5 ವರ್ಷಗಳವರೆಗೆ ಯಾವುದೇ ರೈತರು ವಿದ್ಯುತ್ ಬಿಲ್ ಪಾವತಿಸಬೇಕಾಗಿಲ್ಲ ಎಂದು ಶಾ ಹೇಳಿದರು.
ಬಿಜೆಪಿ ತನ್ನ ಯುಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಪ್ರತಿಬಿಂಬಿಸುತ್ತದೆ. ರೈತರಿಗೆ ಉಚಿತ ವಿದ್ಯುತ್, ಗೋಧಿ ಮತ್ತು ಅಕ್ಕಿಗೆ ಕನಿಷ್ಠ ಬೆಂಬಲ ಬೆಲೆ, ಕಬ್ಬಿನ ಗಿರಣಿ ಆಧುನೀಕರಣದಂತಹ ಯೋಜನೆಗಳನ್ನು ಪಕ್ಷವು ಭರವಸೆ ನೀಡಿದೆ. ಅಖಿಲೇಶ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, ರಾಜ್ಯದಲ್ಲಿ ಬಿಜೆಪಿ ಹೆಣ್ಣು ಮಕ್ಕಳಿಗೆ ಸ್ಕೂಟಿ ನೀಡಿದರೆ ಇಂಧನ ನೀಡುವುದಾಗಿ ಎಸ್‌ಪಿ ಅಧ್ಯಕ್ಷರು ಹೇಳಿದ್ದಾರೆ. ಆದರೆ ಎಸ್‌ಪಿ ಅಧಿಕಾರಕ್ಕೆ ಬಂದರೆ ಸ್ಕೂಟಿ ಅಥವಾ ಇಂಧನ ಇರುವುದಿಲ್ಲ ಎಂದು ತಿರುಗೇಟು ನೀಡಿದರು.












Click it and Unblock the Notifications