ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ 2023; ಹೆಚ್ಚುವರಿ ಬಸ್ ಓಡಿಸಲಿದೆ KSRTC
ಕೊಪ್ಪಳ, ಜನವರಿ 08; ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ 2023ರಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜನವರಿ 8, 9 ಮತ್ತು 10ರಂದು ಗವಿಸಿದ್ದೇಶ್ವರ ಜಾತ್ರೆ ನಡೆಯಲಿದೆ.
ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ2023ರ ಅಂಗವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದಿಂದ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜನವರಿ 8 ರ ಭಾನುವಾರ ನಡೆಯಲಿರುವ ಶ್ರೀ ಗವಿಸಿದ್ಧೇಶ್ವರ ಜಾತ್ರೆಗೆ ಹೆಚ್ಚಿನ ಜನಸಂದಣಿಯನ್ನು ನಿರೀಕ್ಷಿಸಿ ಕೊಪ್ಪಳ ಕೇಂದ್ರ ಬಸ್ ನಿಲ್ದಾಣ ಹಾಗೂ ಕೊಪ್ಪಳದ ಇತರೆ ಕಡೆಗಳಿಂದ ಭಕ್ತಾಧಿಗಳ ಅನುಕೂಲಕ್ಕಾಗಿ ಹೆಚ್ಚಿನ ಬಸ್ ಓಡಿಸಲಾಗುತ್ತಿದೆ.

ಬಸ್ ಮಾರ್ಗ; ಹೆಚ್ಚುವರಿ ಬಸ್‌ಗಳು ಗದಗ, ಯಲಬುರ್ಗಾ, ಕುಕನೂರ ಕಡೆಗೆ ಮತ್ತು ಅಳವಂಡಿ, ಮುಂಡರಗಿ ಕಡೆಗೆ ಕೊಪ್ಪಳ ಕೇಂದ್ರೀಯ ಬಸ್‌ನಿಲ್ದಾಣದಿಂದ ಹೊರಡಲಿವೆ.
ಹೊಸಪೇಟೆ, ಗಂಗಾವತಿ ಮಾರ್ಗಗಳಿಗೆ ನಗರದ ಹೊಸಪೇಟೆ ರಸ್ತೆಯ ಮಾತಾ ಹೋಟೆಲ್ ಹತ್ತಿರ ಬಸ್ ಹೊರಡುವ ವ್ಯವಸ್ಥೆ ಮಾಡಲಾಗಿದೆ. ಕುಷ್ಟಗಿ ಮಾರ್ಗಕ್ಕೆ ನಗರದ ಕಾಳಿದಾಸ ನಗರದ ಹತ್ತಿರದಲ್ಲಿ ಬಸ್ ಹೊರಡಲಿದೆ. ಅಲ್ಲದೇ ಹ್ಯಾಟಿ, ಗೊಂಡಬಾಳ, ಕರ್ಕಿಹಳ್ಳಿ ಕಡೆಗೆ ಹೋಗುವ ಮಾರ್ಗಗಳಿಗೆ ನಗರದ ಗಡಿಯಾರ ಕಂಬದ ಹತ್ತಿರದಲ್ಲಿ ವ್ಯವಸ್ಥೆ ಇದೆ.
ಜಿಲ್ಲೆಯ ಜನರು ವಿಶೇಷವಾಗಿ ಜಾತ್ರೆಗೆ ಆಗಮಿಸಲಿರುವ ಭಕ್ತರು ಈ ಬಸ್ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗ ಮನವಿ ಮಾಡಿದೆ.
ಮಾಧ್ಯಮ ಕೇಂದ್ರ ಉದ್ಘಾಟನೆ; ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ 2023ರ ಅಂಗವಾಗಿ ಎಸ್. ಜಿ. ಕಾಲೇಜಿನಲ್ಲಿ ಮಾಧ್ಯಮ ಕೇಂದ್ರವನ್ನು ಆರಂಭಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿದ್ದಾರೆ. ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದವರಿಗೆ ಸುದ್ದಿ ಬಿಡುಗಡೆ ಹಾಗೂ ನೇರಪ್ರಸಾರಕ್ಕೆ ಅನುಕೂಲವಾಗಲು ಶ್ರೀ ಗವಿಮಠದಿಂದ ಮೀಡಿಯಾ ಸೆಂಟರ್ ಪ್ರಾರಂಭಿಸಲಾಗಿದೆ.

ಅಂಗಾಗ ದಾನ ಜಾಗೃತಿ ಅಭಿಯಾನ; ಗವಿಸಿದ್ದೇಶ್ವರ ಶ್ರೀಗಳು ಪ್ರತಿ ವರ್ಷವೂ ಜಾತ್ರೆಯಲ್ಲಿ ವಿಶೇಷ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಸುತ್ತಾರೆ. ಈ ಬಾರಿಯ ಜಾತ್ರೋತ್ಸವ ಅಂಗವಾಗಿ ಅಂಗಾಂಗ ದಾನ ಜಾಗೃತಿ ಜಾಥಾ ಆರೋಗ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗವಿಸಿದ್ದೇಶ್ವರ ಜಾತ್ರೋತ್ಸವ ಮುಗಿಯುವವರೆಗೂ ಒಂದು ಸ್ಟಾಲ್ ಹಾಕಿ ಜಾಗೃತಿಗೆ ಮತ್ತು ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಖಾಸಗಿ ಆಸ್ಪತ್ರೆಗಳ ಸಹಯೋಗ ಕೂಡ ಪಡೆದುಕೊಳ್ಳಲಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಗವಿ ಮಠದ ಜಾತ್ರೆ ಭಾರೀ ಪ್ರಸಿದ್ಧಿ ಪಡೆದಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಈ ಬಾರಿಯ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸುಮಾರು 5 ಲಕ್ಷ ಭಕ್ತರು ಸೇರುವ ನಿರೀಕ್ಷೆ ಇದೆ. ಜಾತ್ರೆಗಾಗಿ 4 ಲಕ್ಷ ಹೋಳಿಗೆ, 275 ಕ್ವಿಂಟಾಲ್ ಮಾದಲಿ ಸಿದ್ಧಪಡಿಸಲಾಗಿದೆ.
ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಕಾರಣದಿಂದ ಗವಿ ಮಠದ ಜಾತ್ರೆ ಸರಳವಾಗಿ ನಡೆದಿತ್ತು. ಈ ಬಾರಿ ಅದ್ದೂರಿಯಾಗಿ ನಡೆಸಲಾಗುತ್ತಿದೆ. ಭಾನುವಾರ ಸಂಜೆ 5 ಗಂಟೆಗೆ ನಡೆಯುವ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಗವಿ ಸಿದ್ದೇಶ್ವರ ಗೆಳೆಯರ ಬಳಗ, 15ಕ್ಕೂ ಹೆಚ್ಚು ಗ್ರಾಮಗಳ ಜನರ ಸಹಾಯದಿಂದ ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಸಿಹಿತಿಂಡಿ ಮಾದಲಿ ತಯಾರು ಮಾಡಲಾಗಿದೆ. ಇದರ ಜೊತೆಗೆ 4 ಲಕ್ಷ ಶೇಂಗಾ ಹೋಳಿಗೆ ತಯಾರು ಮಾಡಲಾಗಿದೆ.
ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಇದಕ್ಕಾಗಿಯೇ ದಾಸೋಹ ವ್ಯವಸ್ಥೆ ಮಾಡಲಾಗುತ್ತದೆ. ಸುತ್ತಮುತ್ತಲಿನ ಗ್ರಾಮಸ್ಥರು, ಮಠದ ಭಕ್ತರು ದಾಸೋಹ ಸೇವೆಗಾಗಿಯೇ ಧಾನ್ಯಗಳನ್ನು ಮಠಕ್ಕೆ ನೀಡುತ್ತಾರೆ.
ಪ್ರತಿ ವರ್ಷವೂ ವಿಶೇಷ ಅತಿಥಿಯೊಬ್ಬರು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಬಾರಿಯ ಜಾತ್ರೆಯಲ್ಲಿ ಇಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications