ಲವ್ ಬ್ರೇಕಪ್; ಕೋಲಾರದ ಲಾಡ್ಜ್ ನಲ್ಲಿ ಪಶುವೈದ್ಯ ನೇಣಿಗೆ ಶರಣು
ಕೋಲಾರ, ಜೂನ್ 23: ಪ್ರೀತಿಸಿದ ಹುಡುಗಿ ತನಗೆ ಸಿಗಲಿಲ್ಲ ಎಂದು ನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಲಾಡ್ಜ್‌ನಲ್ಲಿ ನಡೆದಿದೆ.
Recommended Video
ಪಶುವೈದ್ಯನಾಗಿದ್ದ ದರ್ಶನ್ ಆತ್ಮಹತ್ಯೆ ಮಾಡಿಕೊಂಡಾತ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದವರಾದ ದರ್ಶನ್ ಕೋಲಾರ ಹಾಲು ಒಕ್ಕೂಟದಲ್ಲಿ ಪಶುವೈದ್ಯನಾಗಿ ಕೆಲಸ ಮಾಡುತ್ತಿದ್ದ. ಜೂನ್ 20ರಂದು ಕೋಲಾರದ ಲಾಡ್ಜ್ ಒಂದರಲ್ಲಿ ರೂಂ ಬುಕ್ ಮಾಡಿದ್ದು, ನಿನ್ನೆ ಸಂಜೆ ವೇಳೆಗೆ ನೇಣಿಗೆ ಶರಣಾಗಿದ್ದಾನೆ.
ಲಾಡ್ಜ್ ಮಾಲೀಕರ ಗಮನಕ್ಕೆ ವಿಷಯ ಬಂದ ಕೂಡಲೇ ಅವರು ಕೋಲಾರ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಎಂದು ಆತ ಬರೆದಿದ್ದ ಡೆತ್ ನೋಟ್ ಕೂಡ ಪತ್ತೆಯಾಗಿದೆ.

ಒಂದೂವರೆ ವರ್ಷದ ಹಿಂದೆ ಕೋಚಿಮುಲ್ ಹಾಲು ಒಕ್ಕೂಟಕ್ಕೆ ಸಹಾಯಕ ವ್ಯವಸ್ಥಾಪಕನಾಗಿ ಸೇರಿದ್ದ ದರ್ಶನ್, ಇದಕ್ಕೂ ಮೊದಲು ಬೆಳಗಾವಿ ಹಾಲು ಒಕ್ಕೂಟದಲ್ಲಿ ಕೆಲಸ ಮಾಡುತ್ತಿದ್ದ. ಕೋಲಾರ ಹೊರವಲಯದಲ್ಲಿರುವ ಗದ್ದೆಕಣ್ಣೂರಿನಲ್ಲಿ ಸ್ನೇಹಿತನ ಜೊತೆ ರೂಂ ಮಾಡಿಕೊಂಡಿದ್ದ.
ಕಾಲೇಜು ಸಮಯದಿಂದ, ಸುಮಾರು ಎಂಟು ವರ್ಷಗಳ ಕಾಲ ಮಂಡ್ಯ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದು, ಈಚೆಗೆ ಇಬ್ಬರ ನಡುವೆ ಮನಸ್ತಾಪವಾಗಿತ್ತು. ಈ ವಿಷಯದ ಕುರಿತು ಸಾಕಷ್ಟು ಖಿನ್ನನಾಗಿದ್ದ ಎಂದು ತಿಳಿದುಬಂದಿದೆ. ಭಾನುವಾರ ಗ್ರಹಣವಿದೆ, ನಾನು ಸೋಮವಾರ ಬರುತ್ತೇನೆ ಎಂದು ಸ್ನೇಹಿತನಿಗೆ ತಿಳಿಸಿ ಹೋದವನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಲಾಡ್ಜ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ವಾರದ ಹಿಂದೆಯಷ್ಟೇ ಊರಿಗೆ ಹೋಗಿ ಕಾಲ ಕಳೆದು ಬಂದಿದ್ದ ದರ್ಶನ್, ಲವ್ ಬ್ರೇಕಪ್ನಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.












Click it and Unblock the Notifications