ಉ.ಕನ್ನಡ ಜಿಲ್ಲೆಯನ್ನೇ ನಡುಗಿಸಿದ್ದ ಭೀಕರ ಭೂಕುಸಿತ: 2 ವರ್ಷ ಕಳೆದರೂ ಮರಿಚಿಕೆಯಾದ ಪರಿಹಾರ
ಕಾರವಾರ, ಅಕ್ಟೋಬರ್ 13: ಅಂದು ರಾತ್ರಿ ಬೆಳಗಾಗುವುದರೊಳಗೆ ಸುರಿದ ಭಾರೀ ಮಳೆಗೆ ಊರಿನ ಬಳಿ ಬೃಹತ್ ಗುಡ್ಡವೇ ಕುಸಿದು ಜಮೀನು ಕೊಚ್ಚಿ ಹೋಗಿತ್ತು. ಊರಿನ ಸಂಪರ್ಕವೇ ಕಡಿತಗೊಂಡು ಭಾರಿ ಮಳೆಯಲ್ಲಿ ಜನ ಕಂಗಾಲಾಗಿದ್ದರು. ಈ ಭೀಕರ ಘಟನೆ ನಡೆದು ಎರಡು ವರ್ಷ ಕಳೆದಿದ್ದು, ಸ್ವತಃ ಮುಖ್ಯಮಂತ್ರಿಯೇ ಬಂದು ಪರಿಹಾರದ ಭರವಸೆ ನೀಡಿದ್ದರೂ ಸಮರ್ಪಕ ಪರಿಹಾರ ಸಿಗದೆ ಜನರು ಅತಂತ್ರರಾಗಿದ್ದಾರೆ.
ಕಳೆದ 2021ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಯಲ್ಲಾಪುರ ತಾಲೂಕಿನ ಕಳಚೆ ಬಳಿ ಭೀಕರ ಗುಡ್ಡ ಕುಸಿತ ಸಂಭವಿಸಿತ್ತು. ಅಲ್ಲದೆ ವಾರಗಳ ಕಾಲ ವರುಣ ಅಬ್ಬರಿಸಿದ್ದ ಕಾರಣ ಜಿಲ್ಲೆಯ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನೆರೆ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕಳಚೆ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ಗ್ರಾಮದ ಹಲವು ಮನೆ, ತೋಟ, ಗದ್ದೆಗಳಿಗೆ ಹಾನಿಯುಂಟಾಗಿ ಓರ್ವ ಮಹಿಳೆ ಕೂಡ ಸಾವನ್ನಪ್ಪಿದ್ದರು. ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಬಸವರಾಜ ಬೊಮ್ಮಾಯಿ ಕಳಚೆ ಪ್ರದೇಶಕ್ಕೆ ಭೇಟಿ ನೀಡಿದ್ದರು.
ಜೊತೆಗೆ ಲೋಕೋಪಯೋಗಿ ಸಚಿವರಾಗಿದ್ದ ಸಿಸಿ ಪಾಟೀಲ್, ಶಿವರಾಮ ಹೆಬ್ಬಾರ್ ಸಹ ಭೇಟಿ ನೀಡಿ ಇಡೀ ಗ್ರಾಮವನ್ನ ಬೇರೆಡೆಗೆ ಸ್ಥಳಾಂತರಿಸುವ ಭರವಸೆ ನೀಡಿದ್ದರು. ಆದರೆ ಅವಘಡ ಸಂಭವಿಸಿ 2 ವರ್ಷ ಕಳೆದರೂ ಸಹ ಇದುವರೆಗೂ ಭೂ ಕುಸಿತದಿಂದ ಹಾನಿಗೊಳಗಾದ ಮನೆಯವರಿಗೆ ಸಿಗಬೇಕಾದ ಸೌಲಭ್ಯ ಹಾಗೂ ಮೂಲಭೂತ ಸೌಕರ್ಯಗಳು ವಂಚಿತವಾಗುವಂತಾಗಿದೆ.
ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ತೀರ ತೊಂದರೆಗೊಳಗಾದವರಿಗೆ ಬೇರೆ ಸ್ಥಳದಲ್ಲಿ ನಿವೇಶನ ನೀಡುವ ಭರವಸೆ ನೀಡಿದ್ದರು. ಬೆಳೆ ಹಾನಿ ಹಾಗೂ ಭೂಮಿ ಕಳೆದುಕೊಂಡವರ ಸರ್ವೆ ನಡೆಸಿ ಪರಿಹಾರ ನೀಡಲು ಸೂಚಿಸಿದ್ದರು. ಆದರೆ ಈವರೆಗೂ ಮನೆ ಕಳೆದುಕೊಂಡ ಕೆಲವರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಭೂಮಿ ಯಾವ ಪ್ರಮಾಣದಲ್ಲಿ ಕೊಚ್ಚಿಹೋಗಿದೆ ಎಂಬ ಬಗ್ಗೆ ಈವರೆಗೂ ಸರ್ವೆ ನಡೆದಿಲ್ಲ. ಬೆಳೆ ಹಾನಿಯ ಕುರಿತು ಸರ್ವೆ ನಡೆದಿದೆಯಾದರೂ ಯಾವುದೇ ಪರಿಹಾರ ನೀಡಿಲ್ಲ ಎಂದು ಗ್ರಾಮದ ಮುಖಂಡರಾದ ಉಮೇಶ ಭಾಗ್ವತ್ ಆರೋಪಿಸಿದ್ದಾರೆ.

ಇನ್ನು ಭೂಕುಸಿತ ಪ್ರದೇಶ ಸದ್ಯ ಯಾವ ಸ್ಥಿತಿಯಲ್ಲಿದೆ ಎನ್ನುವುದು ನಿಖರವಾಗಿ ತಿಳಿದಿಲ್ಲ. ಗ್ರಾಮದ ಬಹುತೇಕರು ಮೊದಲಿನಂತೆ ಕೃಷಿ ಮಾಡುತ್ತಿದ್ದು ಸರ್ಕಾರ ಗ್ರಾಮಸ್ಥರಿಗೆ ಪುನರ್ವಸತಿ ಪರಿಹಾರ ಕೊಟ್ಟು ಸ್ಥಳಾಂತರ ಮಾಡುವ ಯೋಚನೆಯಲ್ಲಿದ್ದರೆ ಈ ಬಗ್ಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಮೊದಲಿನಂತೆ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರಾವರಿ ಬಾಂದಾರು, ಕಾಲುಸಂಕಗಳನ್ನು ನಿರ್ಮಿಸಿಕೊಡಿ ಎಂದು ಗ್ರಾಮಸ್ಥರಾದ ರಾಮಕೃಷ್ಣ ಹೆಗಡೆ ಒತ್ತಾಯಿಸಿದ್ದಾರೆ.
ಒಟ್ಟಾರೆ ಭೂಕುಸಿತದಿಂದ ಹಾನಿ ಅನುಭವಿಸಿದ್ದ ಗ್ರಾಮಸ್ಥರಿಗೆ ಸರ್ಕಾರ ನೀಡಿದ್ದ ಸ್ಥಳಾಂತರ ಭರವಸೆ ಮರೀಚಿಕೆಯಾಗಿದ್ದು ಜಿಲ್ಲಾಡಳಿತವಾದ್ರೂ ಇತ್ತ ಗಮನಹರಿಸಿ ಗ್ರಾಮಸ್ಥರಿಗೆ ಸೂಕ್ತ ಪರಿಹಾರ ಒದಗಿಸಿಕೊಡುತ್ತಾ ಅನ್ನೋದನ್ನ ಕಾದುನೋಡಬೇಕು.












Click it and Unblock the Notifications