ಬ್ರಾಹ್ಮಣ ವಿರೋಧಿ ಹೇಳಿಕೆ ಆರೋಪ: ಗೋಕರ್ಣ ದೇವಾಲಯಕ್ಕೆ ಬಂದ ಕುಮಾರಸ್ವಾಮಿಗೆ ಸ್ಪಷ್ಟನೆ ಕೇಳಿದ ಅರ್ಚಕರು
ಮಾಜಿ ಸಿಎಂ ಕುಮಾರಸ್ವಾಮಿ ಗೋಕರ್ಣ ಮಹಾಬಲೇಶ್ವರ ದೇಸವಸ್ಥಾನಕ್ಕೆ ಭೇಟಿ ನೀಡಿದ ವೇಳೆ ದೇವಸ್ಥಾನದ ಅರ್ಚಕರು, ಬ್ರಾಹ್ಮಣ ವಿರೋಧಿ ಹೇಳಿಕೆ ಆರೋಪದ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ಅರ್ಚಕರ ಪ್ರಶ್ನೆಗೆ ಕುಮಾರಸ್ವಾಮಿ ನೀಡಿರುವ ಉತ್ತರ ಇಲ್ಲಿದೆ.
ಕಾರವಾರ, ಫೆಬ್ರವರಿ 8: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿರುವ ಆರೋಪ ಕೇಳಿ ಬಂದಿದ್ದು, ಈ ಬೆಳವಣಿಗೆಯ ನಡುವೆಯೇ ದೇವಾಯಲಯಕ್ಕೆ ಬಂದ ಕುಮಾರಸ್ವಾಮಿ ಅವರನ್ನು ಅರ್ಚಕರು ಸ್ಪಷ್ಟನೆ ಕೇಳಿದ ಘಟನೆ ನಡೆದಿದೆ.
ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ಕುಮಟಾಗೆ ಆಗಮಿಸಿದ್ದು, ಕುಮಾರಸ್ವಾಮಿ ಗೋಕರ್ಣ ಮಹಾಬಲೇಶ್ವರ ದೇಸವಸ್ಥಾನಕ್ಕೆ ಭೇಟಿ ನೀಡಿದ ವೇಳೆ ದೇವಸ್ಥಾನದ ಅರ್ಚಕರು, ನಿಮ್ಮ ಹೇಳಿಕೆಯಿಂದ ಬೇಸರವಾಗಿದ್ದು ನಿಮ್ಮ ಕುಟುಂಬದ ಮೇಲೆ ನಮಗೆ ಅಭಿಮಾನವಿದೆ. ಗೋಕರ್ಣದಲ್ಲೇ ನಿಮ್ಮ ಸ್ಪಷ್ಟೀಕರಣ ತಿಳಿಸಿ ಎಂದು ಕುಮಾರಸ್ವಾಮಿಗೆ ಕೇಳಿದ್ದಾರೆ.
ಅರ್ಚಕರು ಮಾತಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಬ್ರಾಹ್ಮಣ ಸಮುದಾಯ ಭವನಕ್ಕೆ ಜಾಗ ಕೊಟ್ಟು ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದೇನೆ. ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ಬ್ರಾಹ್ಮಣರು ನಮಗೆ ಬೇಕು. ಹಿಂದೂ ಧರ್ಮವನ್ನು ನಾವು ರಕ್ಷಣೆ ಮಾಡುತ್ತೇವೆ. ಹಿಂದೂ ಹೆಸರಲ್ಲಿ ಅಧಿಕಾರಕ್ಕೆ ಬಂದು ಏನು ಮಾಡಿದ್ದಾರೆ ಗೊತ್ತಿದೆ. ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಏನು ಮಾಡಿದೆ ಹೇಳಿ..? ಎಂದು ಪ್ರಶ್ನೆ ಮಾಡಿದರು. ನಮಗೆ ಸಾವರ್ಕರ್ ಸಂಸ್ಕೃತಿ ಬೇಡ. ಸರ್ವೆ ಜನ ಸುಖಿನೋಭವ ಎನ್ನುವ ಬ್ರಾಹ್ಮಣರು ನಮಗೆ ಬೇಕು ಎಂದರು.

ಆತ್ಮಲಿಂಗಕ್ಕೆ ಪ್ರಾರ್ಥನೆ ಸಲ್ಲಿಸಿದ ಕುಮಾರಸ್ವಾಮಿ
ಪಂಚರತ್ನ ಯಾತ್ರೆಗೆ ಕುಮಟಾದ ಗೋಕರ್ಣಕ್ಕೆ ಆಗಮಿಸಿದ ಕುಮಾರಸ್ವಾಮಿ ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವೇಳೆ ಮಹಾಗಣಪತಿ ತಲೆಯ ಮೇಲಿನಿಂದ ಹೂವು ಬಿದ್ದು ಪ್ರಸಾದವಾಗಿದೆ. ಬಳಿಕ ಕುಮಾರಸ್ವಾಮಿ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದಲ್ಲಿರುವ ಆತ್ಮಲಿಂಗಕ್ಕೆ ಅರ್ಚಕರ ತಂಡದ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಕುಮಾರಸ್ವಾಮಿ, ನಾವು ಎಷ್ಟು ಸ್ಥಾನ ಗೆಲ್ಲುತ್ತೇವೆ ಎನ್ನುವುದು ಜನರು ನಿರ್ಧರಿಸುತ್ತಾರೆ. ಬಿಜೆಪಿ ನಾಯಕರು ನಿರ್ಧರಿಸುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ರಥಯಾತ್ರೆ ಮಾಡಲಾಗುವುದು. ಜನಗಳ ಉತ್ತೇಜನ ಪ್ರೋತ್ಸಾಹ ಯಾತ್ರೆಗೆ ಇದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ. ಚುನಾವಣೆ ವೇಳೆ ಕೆಲವರು ಪಕ್ಷ ಬಿಟ್ಟು ಹೋಗುವುದು ಸಾಮಾನ್ಯ. ಪಕ್ಷ ಬಲವರ್ಧನೆಗೆ ನನ್ನದೇ ರೀತಿಯಲ್ಲಿ ಸಂಘಟಿಸುತ್ತಿದ್ದೇನೆ ಎಂದರು.

ಕಟೀಲ್ ಬದಲು ಪಿಟೀಲು ಎಂದು ಹೆಸರು ಇಟ್ಟುಕೊಳ್ಳಲಿ
ಮಾತು ಮುಂದುವರಿಸಿದ ಕುಮಾರಸ್ವಾಮಿ ರಾಮಕೃಷ್ಣ ಹೆಗಡೆಯವರನ್ನು ಮುಖ್ಯ ಮಂತ್ರಿ ಮಾಡಿರುವುದೇ ದೇವೇ ಗೌಡರು. ನಳೀನ ಕುಮಾರ್ ಕಟೀಲುಗೆ ಸರಿಯಾಗಿ ರಾಜಕೀಯ ಇತಿಹಾಸ ಗೊತ್ತಿಲ್ಲ. ರಾಮಕೃಷ್ಣ ಹೆಗಡೆಯವರನ್ನು ಮುಖ್ಯಮಂತ್ರಿ ಮಾಡಲು ಹೋಗಿ ದೇವೇಗೌಡರು ಬಂಗಾರಪ್ಪ ಮನೆಯಿಂದ ಜುಬ್ಬಾ ಹರಿಸಿಕೊಂಡು ಬಂದಿದ್ದರು. ಹೊಡೆಯುವುದು ಎಲ್ಲಿಂದ ಬಂತು? ಎಂದರು. ಈ ಬಗ್ಗೆ ಗೊತ್ತಿಲ್ಲದ ಅವರು ಕಟೀಲು ಎಂದು ಹೆಸರಿಟ್ಟುವಕೊಳ್ಳುವ ಬದಲು ಪಿಟೀಲು ಎಂದು ಇಟ್ಟುಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವ್ಯಂಗ್ಯವಾಡಿದರು.

ಟೀಕಿಸುವ ಭರದಲ್ಲಿ ಕುಮಾರಸ್ವಾಮಿ ಹೇಳಿದ್ದೇನು..?
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿ ಮಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪ್ರಯತ್ನಿಸುತ್ತಿದೆ. ಜೋಶಿಯವರು ಸಮಾಜವನ್ನು ಒಡೆಯುವ ಅಸಂಸ್ಕೃತ ಬ್ರಾಹ್ಮಣರ ಪಂಗಡಕ್ಕೆ ಸೇರಿದವರು. ಪ್ರಲ್ಹಾದ್ ಜೋಶಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸುವ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಪ್ರಹ್ಲಾದ್ ಜೋಶಿ ಅವರು ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ಪಂಗಡಕ್ಕೆ ಸೇರಿದವರು ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.

ಬ್ರಾಹ್ಮಣ ವಿರೋಧಿ ಹೇಳಿಕೆ ಆರೋಪಕ್ಕೆ ಎಚ್‌ಡಿಕೆಗೆ ಸ್ಪಷ್ಟನೆ
ಕುಮಾರಸ್ವಾಮಿ ಹೇಳಿಕೆಯ ವಿರುದ್ಧ ಬಿಜೆಪಿ ನಾಯಕರು ಹಾಗೂ ಮಠಾಧೀಶರು ಬೇಸರ ಅಸಮಾಧಾನ ಹೊರಹಾಕಿದ್ದರು. ಈ ವಿಚಾರದ ಬಗ್ಗೆ ಚರ್ಚೆಗಳು ತೀವ್ರಗೊಳ್ಳುತ್ತಿದ್ದಂತ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ ನಾನು ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ. ಮೊದಲಿನಿಂದಲೂ ನಮ್ಮ ಕುಟುಂಬ ಎಲ್ಲ ಸಮುದಾಯಗಳನ್ನು ಗೌರವಿಸುತ್ತಿದೆ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನಾನು ಯಾವುದೇ ಸಮುದಾಯವನ್ನು ಅದರಲ್ಲೂ ಬ್ರಾಹ್ಮಣರನ್ನು ಅಥವಾ ದಲಿತರನ್ನು ಅವಮಾನಿಸುವ ಹಿನ್ನೆಲೆ ಹೊಂದಿಲ್ಲ. ನಾನು ಕೆಲವು ವೈಯಕ್ತಿಕ ಟೀಕೆಗಳನ್ನು ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.












Click it and Unblock the Notifications