ಜಿಲ್ಲಾ ಪಂಚಾಯಿತಿ ಚುನಾವಣೆ : ಪ್ರಜ್ವಲ್ ರೇವಣ್ಣ ವಿರುದ್ಧ ದೂರು
ಹಾಸನ, ಫೆಬ್ರವರಿ 20 : ಹಾಸನದಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಕಾರಿನ ಮೇಲೆ ಪ್ರಜ್ವಲ್ ರೇವಣ್ಣ ಬೆಂಬಲಿಗರು ದಾಳಿ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಪ್ರಜ್ವಲ್ ರೇವಣ್ಣ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಹೊಳೆನರಸೀಪುರದ ಹಳೇಕೋಟೆ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಅವರ ಕಾರನ್ನು ಗುರುವಾರ ರಾತ್ರಿ ಜಖಂಗೊಳಿಸಲಾಗಿದೆ. [ದೇವೇಗೌಡರ ಸೊಸೆ ಭವಾನಿ ಸಕ್ರಿಯ ರಾಜಕೀಯಕ್ಕೆ ಎಂಟ್ರಿ]

ಭವಾನಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ಬೆಂಬಲಿಗರು ಕಾರನ್ನು ಜಖಂಗೊಳಿಸಿದ್ದಾರೆ ಎಂದು ಸುನೀಲ್ ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಶನಿವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದೆ. [ಪಂಚಾಯಿತಿ ಚುನಾವಣೆ ಕ್ಷಣ-ಕ್ಷಣದ ಮಾಹಿತಿ]
ಆರೋಪ ತಳ್ಳಿ ಹಾಕಿದ ಪ್ರಜ್ವಲ್ : ಭವಾನಿ ರೇವಣ್ಣ ಅವರು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಜಯಗಳಿಸಲಿ ಎಂದು ಹೊಳೆನರಸೀಪುರದ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಸೂರಜ್ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರು ಶನಿವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದರು. [ಬ್ರಿಟಿಷರ ಆಡಳಿತ ವೈಖರಿ ಕಂಡು ಬೆರಗಾದ ಪ್ರಜ್ವಲ್ ರೇವಣ್ಣ]
ನಂತರ ಮಾತನಾಡಿದ ಪ್ರಜ್ವಲ್ ರೇವಣ್ಣ ಅವರು, 'ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ. ನಾನು ಮತ್ತು ನನ್ನ ಬೆಂಬಲಿಗರು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ. ಈ ಘಟನೆಗೂ ನಮಗೂ ಸಂಬಂಧವಿಲ್ಲ' ಎಂದು ಸ್ಪಷ್ಟನೆ ನೀಡಿದರು.












Click it and Unblock the Notifications