ಮಹದಾಯಿ ವಿವಾದ : ಸಭೆಯಲ್ಲಿ ಭಾವುಕರಾದ ಯಡಿಯೂರಪ್ಪ
ಬೆಂಗಳೂರು, ಡಿಸೆಂಬರ್ 26 : ಮಹದಾಯಿ ವಿವಾದ ಬಗೆಹರಿಸುವಂತೆ ಒತ್ತಾಯಿಸಿ ಬಿಜೆಪಿ ಕಚೇರಿ ಮುಂದೆ ರೈತರು ಧರಣಿ ಮುಂದುವರೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿವಾದದ ಬಗ್ಗೆ ನೆನಪು ಮಾಡಿಕೊಂಡು ಭಾವುಕರಾಗಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಮಾತನಾಡುವ ವೇಳೆ ಯಡಿಯೂರಪ್ಪ ಅವರು ವಿವಾದದ ಬಗ್ಗೆ ನೆನಪು ಮಾಡಿಕೊಂಡು ಭಾವುಕರಾದರು.

'ರಾಜ್ಯದ ಕಾಂಗ್ರೆಸ್ ನಾಯಕರು ನನ್ನ ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಮ್ಮ ಪಕ್ಷದ ನಾಯಕರೇ ನನ್ನ ಬೆಂಬಲಕ್ಕೆ ನಿಲ್ಲುತ್ತಿಲ್ಲ' ಎಂದು ಯಡಿಯೂರಪ್ಪ ಸಭೆಯಲ್ಲಿ ಹೇಳಿದರು.
'ಮಹದಾಯಿ ವಿವಾದ ಬಗೆಹರಿಸಲು ಸತತವಾಗಿ ಪ್ರಯತ್ನ ನಡೆಸಲಾಗುತ್ತಿದೆ. ನನ್ನ ಹೋರಾಟಕ್ಕೆ ರಾಜಕೀಯ ಬಣ್ಣ ಕಟ್ಟುವ ಪ್ರಯತ್ನ ನಡೆದಿದೆ. ರಾಜಕೀಯ ಹಿತದೃಷ್ಟಿಯಂದ ಹೋರಾಟ ಮಾಡಿಲ್ಲ' ಎಂದು ಯಡಿಯೂರಪ್ಪ ಭಾವುಕರಾದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಕಚೇರಿಗೆ ಮಧ್ಯಾಹ್ನ 2.30ಕ್ಕೆ ಭೇಟಿ ನೀಡಲಿದ್ದಾರೆ. ಕಚೇರಿ ಮುಂದೆ ನೂರಾರು ರೈತರು 4 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಯಡಿಯೂರಪ್ಪ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮಹದಾಯಿ ವಿವಾದದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಲುವು ಖಂಡಿಸಿ ಡಿ.27ರಂದು ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಯಡಿಯೂರಪ್ಪ ಭೇಟಿ ಬಳಿಕ ಬಂದ್ ಕರೆ ವಾಪಸ್ ಪಡೆಯಲಾಗುತ್ತದೆಯೇ? ಕಾದು ನೋಡಬೇಕು.












Click it and Unblock the Notifications