ಮುದ್ದಿನ ಮಗನನ್ನ ನೋಡಲು ಭವಾನಿ, ರೇವಣ್ಣ ಕೋರ್ಟ್‌ಗೆ ಬರಲಿಲ್ಲ ಏಕೆ? Prajwal Revanna
ತಮ್ಮ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ನಿನ್ನೆಯಷ್ಟೇ ಇದೇ ಕೇಸ್‌ನಲ್ಲಿ ಪ್ರಜ್ವಲ್ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿತ್ತು. ಇಂದು ಅಂತಿಮ ತೀರ್ಪು ಪ್ರಕಟಿಸಿ, ಜೀವಾವಧಿ ಶಿಕ್ಷೆಗೆ ಗುರಿ ಮಾಡಿತು. ಅಚ್ಚರಿ ಎಂದರೆ ಇಂದು ವಿಚಾರಣೆ ಇದ್ದರೂ ಪ್ರಜ್ವಲ್ ಪೋಷಕರಾದ ಭವಾನಿ & ರೇವಣ್ಣ ಅಥವಾ ಸಹೋದರ್ ಸೂರಜ್ ಯಾರೂ ಹಾಜರಿರಲಿಲ್ಲ.
ಸಾಮಾನ್ಯವಾಗಿ ತಮ್ಮ ಕುಟುಂಬದ ಯಾರಾದರೂ ಜೈಲಿನಲ್ಲಿದ್ದು, ವಿಚಾರಣೆ ನಡೆದರೆ ಆ ದಿನ ಕುಟುಂಬಸ್ಥರು ಕೋರ್ಟ್‌ನಲ್ಲಿ ಹಾಜರಿರುತ್ತಾರೆ. ಆದರೆ ಭವಾನಿ ರೇವಣ್ಣ ಆಗಲಿ, ಸೂರಜ್, ಹೆಚ್.ಡಿ.ರೇವಣ್ಣ ಸೇರಿ ಕುಟುಂಬಸ್ಥರು ಪ್ರಜ್ವಲ್‌ರನ್ನ ನೋಡಲು ಕೋರ್ಟ್‌ಗೆ ಬರಲೇ ಇಲ್ಲ. ಪ್ರಜ್ವಲ್ ಕೂಡ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದರು. ಆರು ತಿಂಗಳಿನಿಂದ ತಂದೆ-ತಾಯಿಯನ್ನ ನೋಡಿಲ್ಲ ಎಂದು ಗಳಗಳನೆ ಅತ್ತಿದ್ದರು.

ನಿನ್ನೆಯೇ ಪ್ರಜ್ವಲ್ ದೋಷಿ ಎಂದು ತೀರ್ಪು ಬಂದ ಕಾರಣ ಕುಟುಂಬಸ್ಥರೆಲ್ಲ ಆತಂಕಕ್ಕೆ ಒಳಗಾಗಿದ್ದರು. ಆದರೆ ಶಿಕ್ಷೆಯ ಪ್ರಮಾಣ ಎಷ್ಟು ಎಂದು ಕೋರ್ಟ್ ಹೇಳಿರಲಿಲ್ಲ. ಹೀಗಾಗಿ ಭವಾನಿ ಹಾಗೂ ರೇವಣ್ಣ ಪುತ್ರನಿಗಾಗಿ ದೇವರಲ್ಲಿ ಪ್ರಾರ್ಥಿಸಿದ್ದರು. ಶಿಕ್ಷೆಯ ಪ್ರಮಾಣವಾದರೂ ಕಡಿಮೆಯಾಗಿ ಮಗ ಬೇಗ ಜೈಲಿನಿಂದ ಹೊರಬರಲಿ ಎಂದು ಬೇಡಿಕೊಂಡಿದ್ದರು. ಇನ್ನು ರೇವಣ್ಣ ಅವರು ದೈವಭಕ್ತರು. ಮಗನಿಗಾಗಿ ಇಂದು ಬೆಳಿಗ್ಗೆಯಿಂದ ವಿಶೇಷ ಪೂಜೆ ನಡೆಸಿದ್ದರು. ಬಳಿಕ ಅವರು ಪ್ರಜ್ವಲ್‌ನ ನೋಡಲು ಕೋರ್ಟ್‌ಗೆ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ರೇವಣ್ಣ, ಭವಾನಿ ಯಾರೂ ಕೋರ್ಟ್‌ನತ್ತ ಸುಳಿಯಲಿಲ್ಲ. ದೇವರ ಪ್ರಾರ್ಥನೆ ಫಲಿಸಲಿಲ್ಲ.
ಇಲ್ಲಿವರೆಗೆ ಪ್ರಜ್ವಲ್ ಯಾವುದೇ ತಪ್ಪು ಮಾಡಿಲ್ಲ, ಆದಷ್ಟು ಬೇಗ ಜೈಲಿನಿಂದ ರಿಲೀಸ್ ಆಗುತ್ತಾನೆ ಎಂದೇ ಅವರ ಕುಟುಂಬಸ್ಥರು ಹೇಳಿಕೊಳ್ಳುತ್ತಿದ್ದರು. ಇನ್ನು ಸಹೋದರ ಸೂರಜ್ ಕೂಡ ಹಲವು ವೇದಿಕೆಗಳಲ್ಲಿ ಪ್ರಜ್ವಲ್ ಬೇಗ ಜೈಲಿಂದ ರಿಲೀಸ್ ಆಗಿ ಬರ್ತಾರೆ ಎಂದು ವಿರೋಧಿಗಳಿಗೆ ಎಚ್ಚರಿಕೆಯ ಮಾತುಗಳನ್ನಾಡಿದ್ದರು. ಆದರೆ ಕುಟುಂಬಸ್ಥರ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ. ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ಸಿಗುವ ಮೂಲಕ ಕುಟುಂಬದವರ ನಿರೀಕ್ಷೆಗಳೆಲ್ಲ ಹುಸಿಯಾಗಿವೆ.

ದೇವೇಗೌಡರ ಕುಟುಂಬ ಕರ್ನಾಟಕ ಮಾತ್ರವಲ್ಲದೆ, ಇಡೀ ರಾಷ್ಟ್ರರಾಜಕಾರಣದಲ್ಲೇ ಹೆಸರುವಾಸಿಯಾಗಿದೆ. ಮಾಜಿ ಪ್ರಧಾನಿ ಆಗಿರುವ ಕಾರಣ ಪ್ರಜ್ವಲ್ ಕೇಸ್‌ನಿಂದಾಗಿ ಅವರ ಕುಟುಂಬಕ್ಕೆ ಮುಜುಗರವೂ ಆಗಿದೆ. ಇದೇ ಕಾರಣಕ್ಕೆ ಕುಟುಂಬಸ್ಥರು ಪ್ರಜ್ವಲ್ ವಿಚಾರಣೆಗೆ ಕೋರ್ಟ್‌ಗೆ ಹಾಜರಾಗಲಿಲ್ಲ ಎಂದು ಹೇಳಲಾಗುತ್ತಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ನೀಡಿರುವುದರಿಂದ ಇದನ್ನು ಪ್ರಶ್ನಿಸಿ, ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಈ ಸಂಬಂಧ ಪ್ರಜ್ವಲ್ ಕುಟುಂಬಸ್ಥರು ವಕೀಲರ ಬಳಿ ಚರ್ಚೆ ನಡೆಸಿ ಮುಂದಿನ ಹೆಜ್ಜೆ ಇಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೋರ್ಟ್ ನೀಡಿರುವ ಆದೇಶ ರದ್ದು ಮಾಡುವಂತೆ, ಅಥವಾ ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಪ್ರಜ್ವಲ್ ವಕೀಲರು ಕೋರಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಪ್ರಜ್ವಲ್ ಹಾಗೂ ಅವರ ಕುಟುಂಬಸ್ಥರಿಗೆ ಇದೊಂದೇ ಕೊನೆಯ ದಾರಿಯಾಗಿದೆ.












Click it and Unblock the Notifications