ಬಸವತತ್ವ ತಿಳಿದವರು ಬಿಜೆಪಿ ಬೆಂಬಲಿಸಲ್ಲ: ಮನು ಧರ್ಮ ವಿರೋಧಿಸಿಯೇ ಬಸವಧರ್ಮ ಹುಟ್ಟಿದೆ ಎಂದ ಸಿದ್ದರಾಮಯ್ಯ
ಬಸವ ತತ್ವವನ್ನು ಅರ್ಥ ಮಾಡಿಕೊಂಡಿರುವ ಯಾವೊಬ್ಬ ವ್ಯಕ್ತಿ ಕೂಡ ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಸವಣ್ಣ, ಬಸವ ತತ್ವದ ಬಗೆಗಿನ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಸಿದ್ದರಾಮಯ್ಯ, ಬಸವಣ್ಣನವರನ್ನು ತಮ್ಮ ಆಧ್ಯಾತ್ಮಿಕ ಗುರು, ಸೈದ್ಧಾಂತಿಕ ಸಂಗಾತಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ತಮ್ಮ ಬಸವಣ್ಣನ ಮೇಲಿನ ಅಭಿಮಾನವನ್ನು ಸರಣಿ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. "ಬಸವಣ್ಣ ನನ್ನ ಪಾಲಿನ ಆಧ್ಯಾತ್ಮಿಕ ಗುರು ಮಾತ್ರವಲ್ಲದೆ ಸೈದ್ಧಾಂತಿಕ ಸಂಗಾತಿಯೂ ಹೌದು. ನಾನು ಸೈದ್ಧಾಂತಿಕ ಸ್ಪಷ್ಟತೆಯನ್ನು ಬಸವತತ್ವದಿಂದಲೇ ಪಡೆದುಕೊಂಡಿದ್ದೇನೆ ಎನ್ನುವುದನ್ನು ವಿನಮ್ರವಾಗಿ ಹೇಳಬಯಸುತ್ತೇನೆ" ಎಂದಿದ್ದಾರೆ.

2013ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ ಮುಹೂರ್ತ ನೋಡಿರಲಿಲ್ಲ, ಉದ್ದೇಶಪೂರ್ವಕವಾಗಿಯೇ ಬಸವಜಯಂತಿಯನ್ನು ಆರಿಸಿಕೊಂಡಿದ್ದೆ. ನಮ್ಮ ಸರ್ಕಾರ ಘೋಷಿಸಿದ ಮೊದಲ ಕಾರ್ಯಕ್ರಮ ಅನ್ನಭಾಗ್ಯ ಯೋಜನೆಗೆ ಕೂಡ ಬಸವಣ್ಣನವರ ಅನ್ನದಾಸೋಹ ಪ್ರೇರಣೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದ ಬಗ್ಗೆ ಕೂಡ ಮಾತನಾಡಿದ್ದು, ಎಲ್ಲಾ ಸರ್ಕಾರಿ ನೌಕರರು ಬಸವ ತತ್ವದ ನೆನಪು ಮಾಡಿಕೊಳ್ಳಲಿ ಎನ್ನುವ ಕಾರಣಕ್ಕೆ ನಿಯಮ ರೂಪಿಸಿದ್ದು, ಇದು ನನ್ನ ಮತ್ತು ನಮ್ಮ ಪಕ್ಷದ ಬದ್ಧತೆ ಎಂದರು.
ಬಸವತತ್ವ ಅರ್ಥ ಮಾಡಿಕೊಂಡವರು ಬಿಜೆಪಿ ಬೆಂಬಲಿಸಲ್ಲ
ಬಸವ ತತ್ವವನ್ನು ಸರಿಯಾಗಿ ಅರ್ಥಮಾಡಿಕೊಂಡ ಯಾರೇ ಆದರೂ ಸಹ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಸಿದ್ದಾಂತ ಮತ್ತು ಬಸವಣ್ಣನವರ ಸಿದ್ಧಾಂತ ಸಂಪೂರ್ಣವಾಗಿ ವಿಭಿನ್ನವಾದುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷ ಮತ್ತು ಅದರ ಮಾತೃ ಸಂಸ್ಥೆಯಾದ ಆರ್ ಎಸ್ ಎಸ್ ಪ್ರತಿನಿಧಿಸುತ್ತಿರುವ ಮನುಧರ್ಮವನ್ನು ವಿರೋಧಿಸಿಯೇ ಬಸವಧರ್ಮ ಹುಟ್ಟಿಕೊಂಡಿರುವುದು. ಬಿಜೆಪಿ ಬಹಿರಂಗವಾಗಿ ಏನೇ ಹೇಳಿಕೆಗಳನ್ನು ನೀಡಿದರೂ, ಆ ಪಕ್ಷ ಮತ್ತು ಸಂಘ ಪರಿವಾರದ ಗುಪ್ತ ಅಜೆಂಡಾ ಬಸವಧರ್ಮಕ್ಕೆ ವಿರುದ್ಧದವಾದುದು ಎಂದು ಮೇಲ್ನೋಟಕ್ಕೆ ಎಲ್ಲರಿಗೂ ತಿಳಿಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಜರಂಗದಳ ಸೇರಿ ಹಲವು ಸಂಘಟನೆಗಳ ನಿಷೇಧ; ವಿವಾದ
ಕಾಂಗ್ರೆಸ್ ಬಿಡುಗಡೆಮಾಡಿರುವ ಪ್ರಣಾಳಿಕೆಯಲ್ಲಿ ಸಮಾಜದಲ್ಲಿ ಶಾಂತಿಯನ್ನು ಕದಡುವ ಯಾವುದೇ ಸಂಘಟನೆಯನ್ನು ನಿಷೇಧಿಸಲಾಗುವುದು ಎಂದು ಭರವಸೆ ನೀಡಿದೆ. ಪಿಎಫ್‌ಐ, ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಬಿಜೆಪಿ ನಾಯಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications