Get Updates
Get notified of breaking news, exclusive insights, and must-see stories!

D.K.Shivakumar: ಡಿಕೆಶಿಯ "ಆ" ಕನಸು ನನಸಾಗುವುದು ಯಾವಾಗ?, ಕಾಂಗ್ರೆಸ್‌ ಹೈಕಮಾಂಡ್‌ ನಿಲುವೇನು?, ಇಲ್ಲಿದೆ ವರದಿ

ಬೆಂಗಳೂರು, ನವೆಂಬರ್‌, 01: ಕಳೆದ ವರ್ಷ ಇದೇ ಹೊತ್ತಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ವಿಧಾನಸಭಾ ಚುನಾವಣೆಯ ತಯಾರಿಯಲ್ಲಿತ್ತು. ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲೇಬೇಕೆಂಬ ಹಠಕ್ಕೆ ಬಿದ್ದಿದ್ದರು. ಅದಕ್ಕಾಗಿ ಹಗಲಿರುಳೆನ್ನದೆ ಶ್ರಮಪಡುತ್ತಾ ಕಾಂಗ್ರೆಸ್ ಮರುಸ್ಥಾಪನೆಯ ಕನಸು ಹೊತ್ತಿದ್ದರು. ಅದು ಸಕಾರವಾಗಿದೆ ಆದರೆ ಸಿಎಂ ಆಗುವ ಕನಸು ಮಾತ್ರ ಹಾಗೆಯೇ ಉಳಿದು ಹೋಗಿದೆ.

ವರುಷ ಕಳೆದಿದೆ. ಡಿ.ಕೆ.ಶಿವಕುಮಾರ್ ಕನಸಿನಂತೆ ಕಾಂಗ್ರೆಸ್ ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಅವರ ತಂತ್ರಗಾರಿಕೆ, ಶ್ರಮ, ಪಕ್ಷ ಸಂಘಟನೆ ಎಲ್ಲವೂ ಹೈಕಮಾಂಡ್‌ನ ಮೆಚ್ಚುಗೆಗೆ ಪಾತ್ರವಾಗಿದೆ. ಇವತ್ತು ಡಿ.ಕೆ.ಶಿವಕುಮಾರ್‌ ಕೇವಲ ರಾಜ್ಯ ನಾಯಕ ಮಾತ್ರವಲ್ಲದೆ, ರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ್ದು, ಮುಂದೆ ಬರಲಿರುವ ಪಂಚರಾಜ್ಯ ಚುನಾವಣೆಯಲ್ಲಿಯೂ ಅವರ ಪಾತ್ರವನ್ನು ಹೈಕಮಾಂಡ್ ಬಯಸಿದೆ.

dk-shivakumars-dream-of-becoming-chief-minister

ಈಗಾಗಲೇ ಕಾಂಗ್ರೆಸ್ ಪರವಾಗಿ ರಾಜ್ಯದಿಂದ ತೆಲಂಗಾಣಕ್ಕೂ ಹೋಗಿರುವ ಅವರು ಅಲ್ಲಿನ ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸುತ್ತಿದ್ದಾರೆ. ಕಾಂಗ್ರೆಸ್‌ನ ಲೆಕ್ಕಾಚಾರದಲ್ಲಿ ಪಂಚರಾಜ್ಯ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ. ಈ ಚುನಾವಣೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೆಲುವು ಸಾಧಿಸಿದರೆ ಅದು ಲೋಕಸಭಾ ಚುನಾವಣೆಗೆ ಪುಷ್ಠಿ ನೀಡಿದಂತೆ. ಹೀಗಾಗಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

20 ಲೋಕಸಭಾ ಸ್ಥಾನ ಗೆಲ್ಲುವ ಟಾರ್ಗೆಟ್

5 ರಾಜ್ಯಗಳಲ್ಲಿ ಡಿ.ಕೆ.ಶಿವಕುಮಾರ್‌ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದರೂ ಅಚ್ಚರಿಯಿಲ್ಲ. ಆ ರಾಜ್ಯಗಳಲ್ಲಿ ಡಿಕೆಶಿ ಅವರ ಪ್ರಭಾವ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೋ ಗೊತ್ತಿಲ್ಲ. ಆದರೀಗ ಅವರ ಮುಂದೆ ಇರುವುದು ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಹೆಚ್ಚಿನ ಸ್ಥಾನದಲ್ಲಿ ಗೆಲ್ಲಿಸುವುದಾಗಿದೆ.

ಕೇವಲ ಒಂದು ಸ್ಥಾನಕ್ಕೆ ಸೀಮಿತವಾಗಿರುವ ಕಾಂಗ್ರೆಸ್ ಅನ್ನು ಕನಿಷ್ಠ 20 ಸ್ಥಾನಕ್ಕೆ ಕೊಂಡೊಯ್ದು ಹೈಕಮಾಂಡ್ ಕೈ ಭದ್ರಪಡಿಸುವುದು. ಆ ಮೂಲಕ ತಮ್ಮ ನಾಯಕತ್ವದ ಬಲವನ್ನು ವೃದ್ಧಿಗೊಳಿಸುವುದಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ‍್ಥಾನವನ್ನು ಗೆದ್ದಷ್ಟೂ ಡಿಕೆಶಿಯ ಪ್ರಾಬಲ್ಯವೂ ಹೆಚ್ಚಾಗಲಿದ್ದು, ಆ ಮೂಲಕ ಸಿಎಂ ಆಗುವ ಅವರ ಕನಸು ನನಸಾದರೂ ಅಚ್ಚರಿಯಿಲ್ಲ.

ಸಿಎಂ ಆಗುವ ಕನಸು ಇವತ್ತಿನದಲ್ಲ

ಹಾಗೆನೋಡಿದರೆ ಸಿಎಂ ಆಗುವ ಡಿ.ಕೆ.ಶಿವಕುಮಾರ್ ಅವರ ಕನಸು ಇವತ್ತು ನಿನ್ನೆಯದಲ್ಲ. 2018ರ ಚುನಾವಣೆಯಲ್ಲಿಯೇ ಇತ್ತು. ಅವತ್ತು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ಚುನಾವಣೆಗೆ ಹೋಗಿದ್ದರಾದರೂ ಅವರಿಗೆ ಮತ್ತೊಮ್ಮೆ ಆಡಳಿತ ನಡೆಸುವ ಅವಕಾಶವನ್ನು ರಾಜ್ಯದ ಜನ ನೀಡಲಿಲ್ಲ.

ಆದರೆ ಅವತ್ತಿನ ಚುನಾವಣೆ ಸಂದರ್ಭದಲ್ಲಿಯೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಶೀತಲ ಸಮರವಿತ್ತು. ಎರಡು ಬಣಗಳ ನಡುವಿನ ಕಿತ್ತಾಟವೂ ಇತ್ತು. ಆಗ ಅವರು ಇಂಧನ ಸಚಿವರಾಗಿದ್ದರು. ಆದರೂ ನಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎಂಬುದನ್ನು ಸಮಯ ಸಿಕ್ಕಾಗ ಹೇಳುತ್ತಾ ಬಂದಿದ್ದರು.

ಸಿಎಂ ಅಧಿಕಾರ ಹಸ್ತಾಂತರದ ಕೂಗು

ಅಷ್ಟೇ ಅಲ್ಲದೆ, ತಮ್ಮಲ್ಲಿರುವ ಸಿಎಂ ಹುದ್ದೆ ಆಕಾಂಕ್ಷೆಯನ್ನು ಅವತ್ತು (2018) ಮಂಡ್ಯದ ಮದ್ದೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧುಮಾದೇಗೌಡರ ಪರ ನಡೆದ ರೋಡ್ ಶೋ ವೇಳೆ ತಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎಂದಿದ್ದರು. ಕುಮಾರಣ್ಣ ಮುಖ್ಯಮಂತ್ರಿ ಆಗುತ್ತಾರೆ ವೋಟ್‌ ಹಾಕಿ ಅಂತಾರೆ. ಹಾಗಾದ್ರೆ ನಾನೇನಿಲ್ವಾ? ನನಗೇನು ಸಿಎಂ ಆಗುವ ಸಾಮರ್ಥ್ಯವಿಲ್ಲವೇ? ಎಂದು ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಡುತ್ತಲೇ ತಮ್ಮ ಮನದಾಳದ ಬಯಕೆಯನ್ನು ಹೊರಗೆಡವಿದ್ದರು.

ಆ ನಂತರ ಏನೇನು ಆಯಿತು ಎಂಬುದು ನಮ್ಮೆಲ್ಲರ ಮುಂದಿದೆ. ಆದರೆ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪಕ್ಷವನ್ನು ರಾಜ್ಯದಲ್ಲಿ ಸದೃಢಗೊಳಿಸಿ 2023ರ ಚುನಾವಣೆಯಲ್ಲಿ 135 ಸ್ಥಾನ ಗೆದ್ದಾಗ ತಾನು ಸಿಎಂ ಆಗೆಯೇ ಬಿಡುತ್ತೇನೆ ಎಂದು ನಂಬಿದ್ದರು. ಆದರೆ ಅದೂ ಆಗಲಿಲ್ಲ. ಈಗ ಲೋಕಸಭಾ ಚುನಾವಣೆ ಎದುರಾಗಿದೆ. ಇದೇ ಸಂದರ್ಭದಲ್ಲಿ ಸಿಎಂ ಅಧಿಕಾರದ ಕೂಗು ಎದ್ದಿದೆ.

ಲೋಕಸಭಾ ಚುನಾವಣೆ ಬಳಿಕ ಏನಾಗಬಹುದು?

ಡಿ.ಕೆ.ಶಿವಕುಮಾರ್ ಬಣದ ಶಾಸಕರು ಡಿಕೆಶಿ ಸಿಎಂ ಆಗುತ್ತಾರೆ ಎಂಬ ಮಾತುಗಳನ್ನಾಡಿದರೆ, ಸಿದ್ದರಾಮಯ್ಯ ಬಣದ ಸಚಿವ ಶಾಸಕರು ಇನ್ನೈದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ. ಶಾಸಕರು ಸಿಎಂ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂಬ ಖಡಕ್ ಸೂಚನೆಗಳು ಒಂದೆಡೆಯಿಂದ ಬಂದರೆ, ಮತ್ತೊಂದೆಡೆ ಅದಕ್ಕೆ ಸೊಪ್ಪು ಹಾಕದೆ ಅಭಿಪ್ರಾಯಗಳು ಹೊರಬರುತ್ತಿರುವುದು ಕಂಡು ಬರುತ್ತಿದೆ.

ಒಂದು ವೇಳೆ ಡಿ.ಕೆ.ಶಿವಕುಮಾರ್‌ ಸಿಎಂ ಆಗಲೇಬೇಕೆಂಬ ಪಟ್ಟು ಹಿಡಿದರೆ ಅವರ ವಿರೋಧಿಗಳು ಬೇರೆಯದ್ದೇ ಆದ ತಂತ್ರಗಳನ್ನು ಹೂಡಬಹುದು. ಇತ್ತೀಚೆಗೆ ಸಿಎಂ ಮನೆಯಲ್ಲಿ ಡಿಕೆಶಿಯನ್ನು ಹೊರಗಿಟ್ಟು ಔತಣಕೂಟದ ನೆಪದಲ್ಲಿ ಸಭೆ ನಡೆದಿದೆ. ಇದಾದ ಬಳಿಕ ಒಂದಷ್ಟು ನಾಯಕರು ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೇಳುತ್ತಿರುವುದು ಡಿಕೆಶಿ ಅವರ ಸಿಎಂ ಕನಸಿಗೆ ತಣ್ಣೀರು ಎರಚಿದಂತಾಗಿದೆ. ಮುಂದೇನು ಎಂದು ಕಾಲವೇ ಹೇಳಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+