ಜೀವಾವಧಿ ಶಿಕ್ಷೆಗೆ ಗುರಿಯಾದ ಪ್ರಜ್ವಲ್ ಮುಂದಿನ ನಡೆಯೇನು? ಭವಾನಿ ಬೇಡಿಕೊಂಡಿದ್ದೇನು, ಈಗ ಎಲ್ಲಿದ್ದಾರೆ ರೇವಣ್ಣ?
ಮನೆ ಕೆಲಸ ಮಾಡುವ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈ ಕೇಸ್‌ನಲ್ಲಿ ಪ್ರಜ್ವಲ್ ದೋಷಿ ಎಂದು ತೀರ್ಪು ನೀಡಿದೆ. ಇದರ ಪ್ರಕಾರ ಜೀವನಪರ್ಯಂತ ಪ್ರಜ್ವಲ್ ಜೈಲಿನಲ್ಲೇ ಮುಂದುವರಿಯಬೇಕಿದೆ. ಈಗ ಪ್ರಜ್ವಲ್ ಮುಂದೆ ಇರುವ ಅವಕಾಶಗಳೇನು? ಎಂಬ ವಿವರ ಇಲ್ಲಿದೆ.
ಈ ಕೇಸ್‌ನಲ್ಲಿ ದೋಷಿಯಾಗಿರುವ ಪ್ರಜ್ವಲ್ ರೇವಣ್ಣನವರ ಮುಂದಿನ ನಡೆ ಏನು ಎಂದು ನೋಡುವುದಾದರೆ, ಜನಪ್ರತಿನಿಧಿಗಳ ಕೋರ್ಟ್ ನೀಡಿದ ಶಿಕ್ಷೆ ಪ್ರಮಾಣ ಉಲ್ಲೇಖಿಸಿ, ಪ್ರಜ್ವಲ್ ರೇವಣ್ಣ ಪರ ವಕೀಲರು ಹೈಕೋರ್ಟ್ ಮೊರೆ ಹೋಗುವ ಅವಕಾಶಗಳು ಇವೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನೀಡಿರುವ ಶಿಕ್ಷೆಗೆ ತಡೆ ನೀಡುವಂತೆ ಅಥವಾ ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿಯೂ ಸಲ್ಲಿಸಬಹುದು. ಇದಲ್ಲದೆ ಕೋರ್ಟ್ ನೀಡಿರುವ ಶಿಕ್ಷೆಯನ್ನ ಅಮಾನತಿನಲ್ಲಿಟ್ಟು, ಜಾಮೀನು ನೀಡುವಂತೆ ಹೈಕೋರ್ಟ್ ಮೊರೆ ಹೋಗುವ ಅವಕಾಶ ಇದೆ.

ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನ ತೀರ್ಪು ರದ್ದು ಮಾಡುವಂತೆ ಪ್ರಜ್ವಲ್ ಅರ್ಜಿ ಸಲ್ಲಿಸುವ ಅವಕಾಶ ಇದೆ. ಒಂದು ವೇಳೆ ಪ್ರಜ್ವಲ್ ಪರ ವಕೀಲರು ಸಲ್ಲಿಸುವ ಅರ್ಜಿಗೆ ಹೈಕೋರ್ಟ್ ತಡೆ ನೀಡಬಹುದು. ಅಥವಾ ಜನಪ್ರತಿನಿಧಿಗಳ ಕೋರ್ಟ್ ನೀಡಿರುವ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಒಂದು ವೇಳೆ ಹೈಕೋರ್ಟ್‌ನಲ್ಲೂ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶವನ್ನೇ ಎತ್ತಿ ಹಿಡಿದರೆ, ಪ್ರಜ್ವಲ್ ರೇವಣ್ಣ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿಯೂ ಸಲ್ಲಿಸಹುದು. ಹಾಗಾಗಿ ಪ್ರಜ್ವಲ್ ರೇವಣ್ಣ ಪರ ವಕೀಲರು ಈಗ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವುದು ಸದ್ಯದಲ್ಲೇ ತಿಳಿಯಲಿದೆ.
ನಿನ್ನೆ ಪ್ರಜ್ವಲ್ ದೋಷಿ ಎಂದು ತೀರ್ಪು ಬಂದ ಹಿನ್ನೆಲೆ ಅವರ ತಾಯಿ ಭವಾನಿ ರೇವಣ್ಣ ಅವರು ಬಿಕ್ಕಿಬಿಕ್ಕಿ ಅತ್ತಿದ್ದರು. ಅಲ್ಲದೆ ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗುವ ಹಿನ್ನೆಲೆ ನಿನ್ನೆಯಿಂದಲೇ ಭವಾನಿ ರೇವಣ್ಣ ಅವರ ಮಗನಿಗೆ ಶಿಕ್ಷೆ ಕಡಿಮೆಯಾಗುವಂತೆ ದೇವರಲ್ಲಿ ಪ್ರಾರ್ಥಿಸಿದ್ದರು ಎನ್ನಲಾಗಿದೆ. ಇಂದು ತೀರ್ಪು ಪ್ರಕಟವಾಗುವುದರಿಂದ ಪ್ರಜ್ವಲ್ ಕುಟುಂಬಸ್ಥರು ಕೂಡ ಕೋರ್ಟ್‌ನಲ್ಲಿ ಹಾಜರಿರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೋರ್ಟ್‌ನಲ್ಲಿ ತೀರ್ಪು ಬರುವಾಗ ಪ್ರಜ್ವಲ್ ಕುಟುಂಬಸ್ಥರು ಯಾರೂ ಹಾಜರಿರಲಿಲ್ಲ ಎಂದು ತಿಳಿದುಬಂದಿದೆ.

ನಿನ್ನೆ ಭವಾನಿ ರೇವಣ್ಣ ಅವರು ಬಸವನಗುಡಿಯಲ್ಲಿರುವ ನಿವಾಸದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇಂದು ಬೆಳಿಗ್ಗೆಯಿಂದಲೂ ಭವಾನಿ ಅವರು ಮನೆಯಿಂದ ಹೊರಗೆ ಬರಲಿಲ್ಲ. ಮನೆ ಬಳಿಯೂ ಪಕ್ಷದ ಯಾರೂ ಸುಳಿಯಲಿಲ್ಲ ಎನ್ನಲಾಗಿದೆ. ಇನ್ನು ಪ್ರಜ್ವಲ್ ತಂದೆ, ಶಾಸಕ ಹೆಚ್.ಡಿ.ರೇವಣ್ಣ ಅವರು ಹಾಸನದ ಹೊಳೆನರಸೀಪುರದಲ್ಲಿ ಬೆಳಿಗ್ಗೆಯಿಂದಲೂ ವಿಶೇಷ ಪೂಜೆ ನಡೆಸಿದ್ದರು. ಮಗ ಪ್ರಜ್ವಲ್ ಜೈಲಿನಿಂದ ರಿಲೀಸ್ ಆಗಬೇಕು. ಕಠಿಣ ಶಿಕ್ಷೆ ಆಗಬಾರದು ಎಂದು ದೇವರಲ್ಲಿ ಪ್ರಾರ್ಥಿಸಿ, ಬೆಂಗಳೂರಿನ ಕಡೆಗೆ ಪ್ರಯಾಣ ಆರಂಭಿಸಿದ್ದರು. ಆದರೆ ಕೋರ್ಟ್ ಅಂತಿಮ ತೀರ್ಪು ನೀಡುವಾಗ ಭವಾನಿ ರೇವಣ್ಣ, ಹೆಚ್.ಡಿ.ರೇವಣ್ಣ ಅಥವಾ ಸಹೋದರ ಸೂರಜ್ ರೇವಣ್ಣ ಯಾರೂ ಇರಲಿಲ್ಲ.












Click it and Unblock the Notifications