ಜ್ವರದ ಬಗ್ಗೆ ಬೇಡ ನಿರ್ಲಕ್ಷ್ಯ: ನಿಫಾ ವೈರಸ್‌ನ ಪ್ರಮುಖ ಲಕ್ಷಣಗಳೇನು..?
ಅದೇನೋ ಗೊತ್ತಿಲ್ಲ ಯಾವುದೇ ವೈರಸ್‌ಗಳು ಮೊದಲಿಗೆ ಕೇರಳದಲ್ಲಿ ಕಾಣಿಸುತ್ತವೆ ಮತ್ತು ಅವು ಬೇರೆಡೆಗೆ ಹರಡುತ್ತವೆ. ಇದೀಗ ನಿಫಾ ವೈರಸ್ ಮತ್ತೆ ಕೇರಳದಲ್ಲಿ ಕಂಡು ಬಂದಿದೆ ಅಷ್ಟೇ ಅಲ್ಲದೆ ಸಾವಿಗೂ ಕಾರಣವಾಗಿದೆ. ಇದರ ಪರಿಣಾಮ ಕೇರಳ ಮಾತ್ರವಲ್ಲದೆ, ಕೇರಳದೊಂದಿಗೆ ಗಡಿಹಂಚಿಕೊಂಡಿರುವ ಕರ್ನಾಟಕದಲ್ಲಿಯೂ ಆತಂಕ ಶುರುವಾಗಿದೆ.
ಈಗಾಗಲೇ ಕೊರೊನಾ ಹೊಡೆತದಿಂದ ಚೇತರಿಸಲಾಗದ ಪರಿಸ್ಥಿತಿಗೆ ತಲುಪಿ ನಿಧಾನವಾಗಿ ಎಲ್ಲ ಸರಿಹೋಯಿತು ಎನ್ನುವಾಗಲೇ ನಿಫಾ ವೈರಸ್ ಕೇರಳದ ಇಬ್ಬರಲ್ಲಿ ಕಾಣಿಸಿಕೊಂಡಿರುವುದು ಒಂದು ರೀತಿಯಲ್ಲಿ ಭಯ ಹುಟ್ಟಿಸಿದೆ. ಇಷ್ಟರಲ್ಲೇ ಹಕ್ಕಿ ಜ್ವರದಿಂದ ಕೇರಳ ನಲುಗಿತ್ತು. ಈ ಜ್ವರ ಕರ್ನಾಟಕಕ್ಕೆ ಹರಡದಂತೆ ಗಡಿಭಾಗದ ಚೆಕ್ ಪೋಸ್ಟ್‌ಗಳಲ್ಲಿ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಇದೀಗ ನಿಫಾ ಜ್ವರ ಕಾಣಿಸಿಕೊಂಡಿರುವುದರಿಂದ ಎಲ್ಲರೂ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ಸಾಮಾನ್ಯವಾಗಿ ಈ ವೇಳೆಯಲ್ಲಿ ಜ್ವರಗಳು ಕಾಡುವುದು ಇದ್ದದ್ದೇ ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಯಾವುದೇ ಜ್ವರವನ್ನು ಸಾಂಕ್ರಾಮಿಕ ಜ್ವರವೆಂದು ಸುಲಭವಾಗಿ ಪರಿಗಣಿಸಲಾಗದ ಪರಿಸ್ಥಿತಿಗೆ ನಾವು ಬಂದು ನಿಂತಿದ್ದೇವೆ. ಅದಕ್ಕೆ ಕಾರಣ ನಮ್ಮನ್ನು ಇನ್ನಿಲ್ಲದಂತೆ ಕಾಡಿದ ಕೊರೊನಾ, ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ ಹಲವರ ಪ್ರಾಣಕ್ಕೂ ಸಂಚಕಾರ ತಂದೊಡ್ಡಿದ್ದು ನಮ್ಮ ಮುಂದೆಯೇ ಇದೆ. ಹೀಗಿರುವಾಗಲೇ ಈಗ ನಿಫಾ ಕಾಣಿಸಿಕೊಳ್ಳಲಾರಂಭಿಸಿದ್ದು ಜನ ಎಚ್ಚರಿಕೆಯಿಂದ ಇರಬೇಕಾಗಿದೆ.
ಜ್ವರದ ಬಗ್ಗೆ ಉದಾಸೀನತೆ ತೋರಬೇಡಿ
ಮೊದಲೆಲ್ಲ ಜ್ವರವೆಂದರೆ ಜನ ಅಷ್ಟೊಂದಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಜ್ವರವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ನಮಗೆ ಬಾಧಿಸಿರುವ ಜ್ವರ ಯಾವುದು ಎಂಬುದನ್ನು ಪರೀಕ್ಷಿಸಿ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ. ಮತ್ತು ಅದುವೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವ ಮಾರ್ಗವೂ ಆಗಿದೆ. ಏಕೆಂದರೆ ಜ್ವರದ ಬಗ್ಗೆ ಉದಾಸೀನತೆ ತೋರಿದರೆ ಅದು ಜೀವಕ್ಕೆ ಆಪತ್ತಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.
ಇದೆಲ್ಲದರ ನಡುವೆ ನಿಫಾ ಜ್ವರ ಕೇರಳದಲ್ಲಿ ಕಾಣಿಸಿದೆ ಎನ್ನುವಾಗಲೇ ಎಲ್ಲರಲ್ಲೂ ಸಣ್ಣಗಿನ ಆತಂಕ ಶುರುವಾಗುತ್ತದೆ. ಏಕೆಂದರೆ ಕೇರಳಕ್ಕೆ ಬರುವ ವೈರಸ್ ಸುತ್ತಮುತ್ತಲಿನ ರಾಜ್ಯಗಳಿಗೆ ಹರಡಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಕಾರಣ ಕೇರಳ ಎಲ್ಲ ರಾಜ್ಯಗಳೊಂದಿಗೆ ಹೆಚ್ಚಿನ ಸಂಪರ್ಕದಲ್ಲಿದೆ. ಕೇರಳದವರು ದೇಶವಿದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವುದರಿಂದ ಬಹುಬೇಗ ಇತರೆಡೆಗೂ ಹರಡಬಹುದು ಎಂಬ ಆತಂಕ ಇದ್ದೇ ಇರುತ್ತದೆ. ಹೀಗಾಗಿಯೇ ಗಡಿಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆ, ವಾಹನಗಳಿಗೆ ರಾಸಾಯನಿಕ ಸಿಂಪಡಿಸುವುದು ಮೊದಲಾದ ಕ್ರಮಗಳನ್ನು ನಡೆಸಲಾಗುತ್ತದೆ.

ಮೊದಲಿಗೆ ಮಲೇಷಿಯಾದಲ್ಲಿ ನಿಫಾ ಪತ್ತೆ
ಅದು ಏನೇ ಇರಲಿ ಈಗ ಕೇರಳದಲ್ಲಿ ಕಾಣಿಸಿರುವ ನಿಫಾ ಜ್ವರವು ಹಿಂದೆಯೂ ಕೇರಳದಲ್ಲಿ ಕಂಡು ಬಂದಿತ್ತು. ಇದರ ಬಗ್ಗೆ ಹೇಳಬೇಕೆಂದರೆ ಈ ಜ್ವರದಲ್ಲಿ ವೈರಸ್ ಗಳು ಮೆದುಳು ಮತ್ತು ಹೃದಯವನ್ನು ಘಾಸಿಗೊಳಿಸಿ ಜೀವಕ್ಕೆ ಕುತ್ತು ತರುತ್ತವೆ. ಈ ಅಪಾಯಕಾರಿ ಸೋಂಕು ಮೊದಲು ಕಾಣಿಸಿಕೊಂಡಿದ್ದು 1998ರಲ್ಲಿ ಮಲೇಷ್ಯಾದ ನಿಫಾ ಎಂಬಲ್ಲಿ ಈ ವೈರಸ್ ಪತ್ತೆಯಾಗಿತ್ತು. ನಿಫಾ ಎಂಬ ಊರಲ್ಲಿ ಪತ್ತೆಯಾದ ವೈರಸ್ ನಿಫಾ ಎಂದೇ ಕರೆಯಲ್ಪಟ್ಟಿತು.
ಆ ನಂತರ 2011ರಲ್ಲಿ ಬಾಂಗ್ಲಾ ದೇಶದಲ್ಲೂ ಈ ಸೋಂಕು ಹರಡಿತ್ತು. ಇದಾದ ನಂತರ ಈ ವೈರಸ್ ಮಲೇಷ್ಯಾ, ಸಿಂಗಾಪುರ, ಭಾರತ ಮತ್ತು ಬಾಂಗ್ಲಾ ದೇಶಗಳಲ್ಲಿ ಕಾಣಿಸಿಕೊಂಡಿದೆ. ಸದ್ಯ ನೆರೆಯ ರಾಜ್ಯ ಕೇರಳದಲ್ಲಿ ಈ ವೈರಸ್ ಸುದ್ದಿ ಮಾಡುತ್ತಿದ್ದು, ಎಲ್ಲರೂ ಅಲರ್ಟ್ ಆಗಿರುವಂತೆ ಮಾಡಿದೆ. ಕೇಂದ್ರವೂ ಈ ಬಗ್ಗೆ ಹೆಚ್ಚಿನ ನಿಗಾವಹಿಸಿದ್ದು, ಕೇರಳಕ್ಕೆ ತಜ್ಞರನ್ನು ಕಳುಹಿಸಿ ಅಗತ್ಯ ಕ್ರಮಗಳಿಗೆ ಸೂಚನೆ ನೀಡಿದೆ.
ನಿಫಾ ಜ್ವರದ ಲಕ್ಷಣಗಳೇನು ಗೊತ್ತಾ?
ಇನ್ನು ನಿಫಾ ಜ್ವರದ ಲಕ್ಷಣಗಳೇನು ಎಂಬುದನ್ನು ನೋಡಿದ್ದೇ ಆದರೆ ತಲೆನೋವು, ಮೈಕೈನೋವು, ವಾಂತಿ, ನಡುಕ, ನಿದ್ರಾಲಸ್ಯ, ತೊದಲುವಿಕೆ, ಪ್ರಜ್ಞಾಹೀನತೆಯಾಗಿದೆ. ಇದಕ್ಕೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಲಭ್ಯವಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆ ಹಾಗೂ ಸೂಕ್ತ ನಿರ್ವಹಣೆಯಿಂದ ಸೋಂಕನ್ನು ಗುಣಪಡಿಸಬೇಕಾಗಿದೆ. ಸಾಕುಪ್ರಾಣಿಗಳಾದ ಹಂದಿ, ಕುದುರೆ, ನಾಯಿ ಮತ್ತು ಬೆಕ್ಕುಗಳಂತಹ ಸೋಂಕಿತ ಜಾನುವಾರಗಳು ಮಧ್ಯಂತರ ಮೂಲಗಳಾಗಿರುವುದರಿಂದ ಇವುಗಳನ್ನು ಪ್ರತ್ಯೇಕವಾಗಿಡಬೇಕಾಗುತ್ತದೆ.
ಸೋಂಕು ತಗುಲಿದ ಅಥವಾ ಶಂಕಿತ ಪ್ರಕರಣಗಳನ್ನು ಪ್ರತ್ಯೇಕವಾಗಿಡಬೇಕು. ರೋಗಿಗಳು ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಸಾಬೂನು ನೀರು ಬಳಸಿ ಶುಚಿಗೊಳಿಸಬೇಕು. ಹಸ್ತಲಾಘವ ಕೊಡವುದನ್ನು ತಪ್ಪಿಸಿ ಹಾಗೂ ಸೋಂಕಿತ ಜನರ ಸಂಪರ್ಕಕ್ಕೆ ಬಂದ ನಂತರ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಬೇಕು. ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು ಗ್ಲೌಸ್ ತಪ್ಪದೇ ಬಳಸುವುದು, ಎಲ್ಲಾ ರೀತಿಯ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ, ಸುಲಿದು ಮತ್ತು ಬೇಯಿಸಿ ತಿನ್ನುವುದು, ಪ್ಲೂ ರೀತಿಯ ಲಕ್ಷಣಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು.
ಜ್ವರ ಕಾಣಿಸಿದರೆ ವೈದ್ಯರ ಭೇಟಿ ಮಾಡಿ
ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ತಿನ್ನಬಾರದು. ಬಾವಲಿಗಳು ಅತಿ ಹೆಚ್ಚಾಗಿ ಕಂಡು ಬರುವ ಪ್ರದೇಶಗಳಿಂದ ಸಂಗ್ರಹಿಸಿದ ನೀರಾ ಕುಡಿಯಬಾರದು. ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯಗಳನ್ನು ಕೈಗೊಳ್ಳುವುದು ಒಳ್ಳೆಯದು. ರೋಗಿಯ ಶರೀರದ ಸ್ರಾವದೊಂದಿಗೆ (ಜೊಲ್ಲು, ಬೇವರು ಮಾತ್ರ) ಸಂಪರ್ಕ ತಪ್ಪಿಸಬೇಕು. ಹೀಗೆ ಮಾಡುವುದರಿಂದ ನಿಫಾದಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.
ಅದು ಏನೇ ಇರಲಿ ಜ್ವರ ಬಂದ ಬಳಿಕ ಕಷ್ಟ ಪಡುವುದಕ್ಕಿಂತ ಅದು ಬರದಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ. ಜ್ವರದ ಲಕ್ಷಣಗಳು ಕಂಡು ಬಂದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳುವುದು ಬಹು ಮುಖ್ಯವಾಗಿದೆ. ಜ್ವರವಿದ್ದ ತಕ್ಷಣಕ್ಕೆ ಅದು ನಿಫಾವೇ ಆಗಿರಬಹುದೆಂದು ಭಯಪಡಬೇಕಾದ ಯಾವುದೇ ಅಗತ್ಯವಿಲ್ಲ. ಆದರೆ ಅಂತಹ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದನ್ನು ಮರೆಯಬಾರದು.












Click it and Unblock the Notifications