ಕುರುಕ್ಷೇತ್ರವನ್ನೇ ಬರೆದ ವ್ಯಕ್ತಿ ಇವರು; ಮುನಿರತ್ನಗೆ ತಿರುಗೇಟು ಕೊಟ್ಟ ಡಿ ಕೆ ಸುರೇಶ್
ರಾಮನಗರ, ಅಕ್ಟೋಬರ್ 12: ಕುರುಕ್ಷೇತ್ರವನ್ನೇ ಬರೆದ ವ್ಯಕ್ತಿ ಇವರು. ಅವರ ಅನುಕೂಲಕ್ಕೆ ತಕ್ಕಂತೆ ಕುರುಕ್ಷೇತ್ರ ತಿದ್ದಿದವರು, ಹಾಗಾಗಿ ಅವರು ಏನು ಬೇಕಾದರೂ ಮಾಡುತ್ತಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಶಾಸಕ ಮುನಿರತ್ನಗೆ ತಿರುಗೇಟು ನೀಡಿದ್ದಾರೆ.
ಈ ಕುರತು ರಾಮನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಂಗಳೂರಿನ ಆರ್.ಆರ್.ನಗರ ಟಾರ್ಗೆಟ್ ಮಾಡಿಲ್ಲ. ನಮ್ಮ ವಾರ್ಡ್ ಒಂದರಲ್ಲಿ ಅಕ್ರಮ ಆಗಿದೆ ಅಂತ ಅವರೇ ಪತ್ರ ಬರೆದಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ಥರ್ಮಲ್ ಪವರ್ ಜನರೇಷನ್ ಕೈ ಕೊಟ್ಟಿದೆ. ನಾನು ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ, ಆದಷ್ಟು ಬೇಗ ಸಮಸ್ಯೆ ಸರಿಮಾಡುವ ಕೆಲಸ ಆಗುತ್ತೆ. ಕೃಷಿ ಚಟುವಟಿಕೆಗೆ ವಿದ್ಯುತ್ ಕೊಡಬೇಕು, ಜೊತೆಗೆ ರೈತರಿಗೆ ಹಗಲು ಹೊತ್ತಿನಲ್ಲೇ 3ಪೇಸ್ ಕರೆಂಟ್ ಕೊಡಬೇಕು.
ರಾತ್ರಿ ವೇಳೆ ಕಾಡಾನೆಗಳ ಕಾಟದಿಂದ ಅನಾನುಕೂಲ ಆಗುತ್ತೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಗೆ ಓಟ್ ಹಾಕಿದವರಿಗೆ ಮಾತ್ರ ಅಭಿವೃದ್ಧಿ ಎಂಬ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಅನುದಾನವನ್ನ ಎಲ್ಲರಿಗೂ ಕೊಟ್ತೀವಿ. ಹಿಂದೆ ಬಿಜೆಪಿ-ಜೆಡಿಎಸ್ ಏನು ಮಾಡಿತ್ತು ಅದನ್ನ ಅವರು ಹೇಳಿದ್ದಾರೆ. ಅವರು ಒಳಗೊಳಗೆ ಮಾಡ್ತಿದ್ರು, ಆದರೆ ಇವರಿಗೆ ಸ್ವಲ್ಪ ಬಾಯಿ ದೊಡ್ಡದು, ಹಾಗಾಗಿ ಬಾಯ್ಬಿಟ್ಟು ಹೇಳಿದ್ದಾರೆ ಎಂದು ಶಾಸಕ ಬಾಲಕೃಷ್ಣ ಅವರ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಇನ್ನೂ ಈ ವೇಳೆ ರಾಜ್ಯದಲ್ಲಿ ಅನಧಿಕೃತ ವಿದ್ಯುತ್ ಲೋಡ್ ಶೆಡ್ಡಿಂಗ್ ವಿಚಾರವಾಗಿ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಮಳೆ ಕೂಡಾ ಕಡಿಮೆಯಾಗಿದೆ. ಸ್ವಲ್ಪ ಲೋಡ್ ಶೆಡ್ಡಿಂಗ್ ಆಗುತ್ತಿದೆ. ಇಂಧನ ಸಚಿವ ಜಾರ್ಜ್ ಅವರು ಕೂಡ ಕೇಂದ್ರಕ್ಕೆ ಮನವಿ ಮಾಡಿದ್ದಾರೆ, ಮಳೆ ಇದ್ದಿದ್ದರೆ ಈ ರೀತಿ ಸಮಸ್ಯೆ ಆಗ್ತಿರಲಿಲ್ಲ. ರಾಜ್ಯದಲ್ಲಿ ಬರಗಾಲ ಕೂಡ ಇದೆ, ಡ್ಯಾಂಗಳಲ್ಲಿ ನೀರು ಕೂಡ ಕಡಿಮೆ ಇರೋದ್ರಿಂದ ಕರೆಂಟ್ ಉತ್ಪಾದನೆ ಆಗ್ತಿಲ್ಲ. ಹಾಗಾಗಿ ಬೇರೆ ರಾಜ್ಯದ ಮೊರೆ ಹೋಗಲಾಗಿದೆ ಎಂದು ಹೇಳಿದರು.
ಬಿಜೆಪಿ ಶಾಸಕ ಮುನಿರತ್ನ ಕ್ಷೇತ್ರಕ್ಕೆ ಅನುದಾನ ಕಡಿತ ವಿಚಾರವಾಗಿ ರಾಮಲಿಂಗರೆಡ್ಡಿ ಮಾತನಾಡಿ, ಮುನಿರತ್ನ ಅವರ ಕ್ಷೇತ್ರದಿಂದ ಗ್ರ್ಯಾಂಟ್ ತೆಗಿದಿದ್ದಾರೆ ಅಂತಾ ಹೇಳ್ತಿದ್ದಾರೆ. ಅನುದಾನ ತೆಗೆದಿರೋದು ನಿಜ, ಶಾಸಕ ಮುನಿರತ್ನ 5 ವರ್ಷ ಹಿಂದೆ ಹೋಗಿ ನೋಡಲಿ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನನ್ನ ಕ್ಷೇತ್ರಕ್ಕೆ 400 ಕೋಟಿ ಅನುದಾನ ನೀಡಿದ್ರು. ಬಿಜೆಪಿ ಸರ್ಕಾರ ಬಂದ ನಂತರ ಕ್ಷೇತ್ರಕ್ಕೆ ಕೊಟ್ಟಿದ್ದ 260 ಕೋಟಿ ಅನುದಾನ ಕಡಿತ ಮಾಡಿದರು ಎಂದು ಹೇಳಿದರು.












Click it and Unblock the Notifications