ಕರ್ನಾಟಕ ಸರ್ಕಾರದ ಪತ್ರಕ್ಕೆ ಕ್ಯಾರೇ ಎನ್ನದ ಕೇರಳ ಸರ್ಕಾರ, ಕೇರಳದಲ್ಲೂ ವಿರೋಧ!
ಕರ್ನಾಟಕ ಸರ್ಕಾರವೇ ನಾವು ನೆರವು ನೀಡಲು ಸಿದ್ಧ ಎಂದು ಹೇಳಿದರೂ, ಕೇರಳ ಸರ್ಕಾರವು ಕರ್ನಾಟಕ ಸರ್ಕಾರದ ಪತ್ರಕ್ಕೆ ಪ್ರತಿಕ್ರಿಯೆ ನೀಡದೆ ಇರುವುದು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ವಯನಾಡ್‌ನ ಭೀಕರ ಭೂಕುಸಿತದ ನಂತರ ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಕೇರಳಕ್ಕೆ ನೆರವಿನ ಹಸ್ತಚಾಚಿದ್ದವು. ಭೂಕುಸಿತದಲ್ಲಿ ಎಲ್ಲವನ್ನೂ ಕಳೆದುಕೊಂಡವರಿಗೆ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಕರ್ನಾಟಕ ಸರ್ಕಾರವು ಘೋಷಿಸಿತ್ತು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಇದಕ್ಕೆ ಕೇರಳ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಈಚೆಗೆ ವಯನಾಡ್‌ನಲ್ಲಿ ತೀವ್ರ ಭೂಕುಸಿತವಾಗಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು. ವಯನಾಡ್‌ನಲ್ಲಿ ಎಲ್ಲವೂ ನಾಶವಾಗಿದ್ದು, ಇಲ್ಲಿನ ಜನ ಹೊಸ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾರೆ. ತಮ್ಮ ಕುಟುಂಬದವರು, ನೆರೆಹೊರೆಯವರನ್ನು ಹಾಗೂ ಎಲ್ಲವನ್ನೂ ಕಳೆದುಕೊಂಡು ಜನ ಮಾನಸಿಕವಾಗಿಯೂ, ಆರ್ಥಿಕವಾಗಿಯೂ ಕುಸಿದಿದ್ದಾರೆ. ಇಲ್ಲಿನ ಜನ ಮತ್ತೆ ಬದುಕು ಕಟ್ಟಿಕೊಳ್ಳುವುದಕ್ಕೆ ಇನ್ನಿಲ್ಲದಂತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ನಡುವೆ ಕೇರಳದ ವಯನಾಡ್ ದುರಂತಕ್ಕೆ ಕೇಂದ್ರ ಬಿಜೆಪಿ ಸರ್ಕಾರವು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಹಾಗೂ ಅನುದಾನ ನೀಡುತ್ತಿಲ್ಲ ಎಂದು ಕೇರಳ ಸರ್ಕಾರವೇ ಆರೋಪಿಸಿದೆ. ಆದರೆ, ನೆರವು ನೀಡಲು ಮುಂದಾದ ಕರ್ನಾಟಕ ಸರ್ಕಾರಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡದೆ ಇರುವುದು ಕೇರಳದಲ್ಲೂ ವಿರೋಧಕ್ಕೆ ಕಾರಣವಾಗಿದೆ.

ಅಲ್ಲದೇ ಕೇರಳ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಡೆಗೆ ಕೇರಳದ ವಿರೋಧ ಪಕ್ಷವಾದ ಕಾಂಗ್ರೆಸ್ ಸಹ ತನ್ನ ವಿರೋಧವನ್ನು ದಾಖಲಿಸಿದೆ. ಕೇರಳದ ವಯನಾಡ್‌ನಲ್ಲಿ 100 ಮನೆಗಳನ್ನು ಕರ್ನಾಟಕದಿಂದ ನಿರ್ಮಿಸಿಕೊಡುವ ಪ್ರಸ್ತಾವನೆಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರ ಇನ್ನೂ ಸ್ಪಂದಿಸಿಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಸಿ.ಎಂ ಸಿದ್ದರಾಮಯ್ಯ ಅವರು ಈ ವಿಚಾರವಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಭೂಕುಸಿತ ಸಂತ್ರಸ್ತರ ಪುನರ್ವಸತಿಗೆ ಕೇಂದ್ರ ಸರ್ಕಾರ ಹಣಕೊಡುತ್ತಿಲ್ಲ ಎಂದು ಕೇರಳ ಸರ್ಕಾರವು ಪದೇ ಪದೇ ಆರೋಪ ಮಾಡುತ್ತಿದೆ. ಆದರೆ, ನೆರವು ನೀಡಲು ಮುಂದಾದರೆ ಅದಕ್ಕೆ ಕ್ಯಾರೇ ಅಂತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 9ಕ್ಕೆ ಈ ವಿಷಯವನ್ನು ಪ್ರಸ್ತಾಪಿಸಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ. ವಯನಾಡ್‌ನಲ್ಲಿ ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಾಣ ಮಾಡಿಕೊಡುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಆದರೆ, ಕೇರಳ ಸರ್ಕಾರದಿಂದ ಇಲ್ಲಿಯ ವರೆಗೆ ಯಾವುದೇ ಉತ್ತರ ಬಂದಿಲ್ಲ. ಈ ವಿಚಾರವಾಗಿ ಕೇರಳದ ಕಾಂಗ್ರೆಸ್ ಸಹ ಅಲ್ಲಿನ ಸರ್ಕಾರದ ಮೇಲೆ ಮುಗಿ ಬೀಳುತ್ತಿದೆ.

ಕರ್ನಾಟಕ ಸರ್ಕಾರವು ಈ ವಿಷಯವನ್ನು ಕೇರಳದ ಮುಖ್ಯ ಕಾರ್ಯದರ್ಶಿಗೆ ಈಗಾಗಲೇ ತಿಳಿಸಿದೆ. ಆದರೆ, ಉದ್ದೇಶಿತ ಯೋಜನೆಯನ್ನು ಹೇಗೆ ಕಾರ್ಯ ರೂಪಕ್ಕೆ ತರಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿರುವುದು ವರದಿಯಾಗಿದೆ. ಅಲ್ಲದೇ ವಸತಿ ಯೋಜನೆಯನ್ನು ಜಾರಿ ಮಾಡಲು ಅಗತ್ಯ ಮಾರ್ಗಸೂಚಿಗಳನ್ನು ಕೇರಳ ಸರ್ಕಾರ ನೀಡುತ್ತಿಲ್ಲ.
ಕರ್ನಾಟಕ ಸರ್ಕಾರವು ಮನೆಗಳನ್ನು ನಿರ್ಮಿಸಲು ಅಗತ್ಯವಿರುವ ಭೂಮಿಯನ್ನು ಖರೀದಿ ಮಾಡುವುದಕ್ಕೆ ಸಿದ್ಧವಿದೆ ಎಂದು ಪ್ರತಿಪಾದಿಸಿದೆ. ಇದಕ್ಕೆ ಅಲ್ಲಿನ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ಸಹ ತಮ್ಮ ಅಸಮಾಧಾನವನ್ನು ದಾಖಲಿಸಿದ್ದಾರೆ.












Click it and Unblock the Notifications