ಕಾಂಗ್ರೆಸ್ ಆಡಳಿತದ ವೈಖರಿ ನೋಡಿ; ಮಾಜಿ ಸಚಿವರ ಟ್ವೀಟ್ ಬಾಣ

ಬೆಂಗಳೂರು, ಜೂನ್ 06: 'ಕಾಂಗ್ರೆಸ್ ಯಾವತ್ತೂ ಈ ದೇಶವನ್ನು ಪ್ರೀತಿಸಲಿಲ್ಲ, ಗೋ ಮಾತೆಯನ್ನು ಪ್ರೀತಿಸಲಿಲ್ಲ' ಎಂದು ಮಾಜಿ ಸಚಿವ, ಬಿಜೆಪಿ ನಾಯಕ ವಿ. ಸುನಿಲ್ ಕುಮಾರ್ ಟ್ವೀಟ್ ಮಾಡುವ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ.

ಮಾಜಿ ಸಚಿವರು ತಮ್ಮ ಟ್ವೀಟ್‌ನಲ್ಲಿ, 'ನಮ್ಮ ಸರ್ಕಾರ ಜಾರಿಗೆ ತಂದಿದ್ದ ಕಾಯಿದೆಗಳನ್ನು ವಾಪಸ್ ಪಡೆಯುತ್ತೇವೆ ಎನ್ನುವ ಅಜೆಂಡಾದೊಂದಿಗೆ ಕಾಂಗ್ರೆಸ್ ಚುನಾವಣೆಗೆ ಬಂದಿತ್ತು. ಜನಾಭಿಪ್ರಾಯಕ್ಕೆ ಉದ್ಧಟತನ ತೋರಿದ್ರೆ ಜನಾಕ್ರೋಶವನ್ನು ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದ್ದಾರೆ.

V Sunil Kumar Tweet Against Karnataka Government

ಮತ್ತೊಂದು ಟ್ವೀಟ್‌ನಲ್ಲಿ ಅವರು, 'ಮುಂಗಾರು ದುರ್ಬಲವಾಗಿದೆ, ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಮೊದಲು ಈ ಬಗ್ಗೆ ಗಮನ ಹರಿಸಿ. ಪ್ರೀತಿಯ ಅಂಗಡಿ ತೆರೆಯುತ್ತೇನೆಂದು ಘೋಷಿಸಿ ದ್ವೇಷದ ದುಖಾನು ಸ್ಥಾಪಿಸಬೇಡಿ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪೂರ್ಣಗೊಂಡು ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಸರ್ಕಾರ ಮುನ್ನಡೆಸುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ವಿವಿಧ ಕಾಯ್ದೆಗಳ ಬಗ್ಗೆ ಕಾನೂನು ಬದ್ಧ ಪರಿಶೀಲನೆ ನಡೆಯಲಿದೆ ಎಂದು ಹೇಳುವ ಮೂಲಕ ಚರ್ಚೆ ಹುಟ್ಟು ಹಾಕಿತ್ತು.

V Sunil Kumar Tweet Against Karnataka Government

ಈಗ ಜಾನುವಾರು ಹತ್ಯೆ ಪ್ರತಿಬಂಧಕ (ನಿಷೇಧ) ಕಾಯ್ದೆ ಬಗ್ಗೆ ಚರ್ಚೆಗಳು ಆರಂಭವಾಗಿವೆ. ವಿವಿಧ ಸಚಿವರು, ಶಾಸಕರು ಈ ಕಾಯ್ದೆಯ ಬಗ್ಗೆ ಮಾತನಾಡುತ್ತಿದ್ದಾರೆ. ಆದ್ದರಿಂದ ಪ್ರತಿಪಕ್ಷವಾಗಿರುವ ಬಿಜೆಪಿ ಈ ಕುರಿತು ಪತಿಕ್ರಿಯೆ ನೀಡಿದೆ. ಮಸೂದೆಗೆ ಅನುಮೋದನೆ ಪಡೆಯುವಾಗ ಕಾಂಗ್ರೆಸ್ ಪ್ರತಿಪಕ್ಷದಲ್ಲಿತ್ತು.

ವಿಧಾನ ಪರಿಷತ್‌ನಲ್ಲಿ ಮಸೂದೆಗೆ ಅಂಗೀಕಾರ ದೊರೆತಾಗ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಿದ್ದರು. ಬಿಜೆಪಿ ಸರ್ಕಾರ ಪರಿಷತ್‌ನಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ 2020ಕ್ಕೆ ಗೂಂಡಾಗಿರಿ ಪ್ರದರ್ಶನ ಮಾಡಿ ಅಂಗೀಕಾರ ಪಡೆದಿದೆ. ಸಭಾಪತಿಯವರ ಪೀಠದಲ್ಲಿದ್ದ ಉಪಸಭಾಪತಿ ಅವರು ಕೂಡಾ ಪಕ್ಷಪಾತಿಯಾಗಿ ವರ್ತಿಸಿದ್ದಾರೆ ಎಂದು ಆರೋಪ ಮಾಡಿತ್ತು.

ಸಚಿವರ ಹೇಳಿಕೆ ವಿವಾದ; ಪ್ರತಿಪಕ್ಷ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮಾಡಲು ಕಾರಣವಾಗಿದ್ದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ್ ಹೇಳಿಕೆ. ಶನಿವಾರ ಮೈಸೂರಿನಲ್ಲಿ ಮಾತನಾಡಿದ್ದ ಸಚಿವರು, "ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ" ಎಂದು ಹೇಳಿದ್ದರು.

"ಈಗ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಕೋಣ, ಎಮ್ಮೆಗಳ ವಧೆಗೆ ಅವಕಾಶವಿದೆ. ಆದರೆ ಹಸುವನ್ನು ಕಡಿಯಲು ಅವಕಾಶವಿಲ್ಲ. ಹಸುವನ್ನು ಯಾಕೆ ಕಡಿಯಬಾರದು?. ಈ ಕಾಯ್ದೆಯಿಂದಾಗಿ ರೈತರಿಗೆ ಬಹಳ ತೊಂದರೆಯಾಗುತ್ತಿದೆ" ಎಂದು ಸಚಿವರು ಹೇಳಿಕೆ ಕೊಟ್ಟಿದ್ದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. 'ಸಚಿವ ಕೆ. ವೆಂಕಟೇಶ್ ಅವರು ಯಾರ ಓಲೈಕೆಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ, ತಮಗೆ ನೀಡಿರುವ ಖಾತೆಯನ್ನು ಬದಲಾಯಿಸಲಿ ಎಂದೊ, ಹೈ ಕಮಾಂಡ್ ಮೆಚ್ಚಿಸಲೊ?' ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದರು.

'ಸಚಿವರ ಹೇಳಿಕೆಯಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋವುಗಳ ಕಳ್ಳ ಸಾಗಾಣಿಕೆ, ಸಾಮೂಹಿಕ ಗೋ ಹತ್ಯೆ ಮಾಡುವ ಕಾರ್ಖಾನೆಗಳು ತಲೆ ಎತ್ತಲಿವೆ. ನಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಬಾಹಿರ ಕಸಾಯಿ ಖಾನೆಗಳನ್ನು ತಡೆಗಟ್ಟಲು ಕಾನೂನು ತರಲಾಗಿದೆ. ಕರ್ನಾಟಕದಲ್ಲಿ ಹೊಸ ಕಾಯಿದೆ ತಂದಿಲ್ಲ. ಇರುವ ಕಾನೂನಿಗೆ ಬಲ ತುಂಬಿದ್ದೇವೆ‌' ಎಂದು ಹೇಳಿದ್ದರು.

'ಗೋವುಗಳನ್ನು ಏಕೆ ಕಡಿಯಬಾರದು ಎಂದು ಪ್ರಶ್ನಿಸಿರುವ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರ ಹೇಳಿಕೆ ಆಶ್ಚರ್ಯ ತಂದಿದ್ದು, ಅವರ ಹೇಳಿಕೆ ಖಂಡನೀಯ ಗೋವಿನೊಂದಿಗೆ ಭಾರತೀಯರಾದ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದು, ತಾಯಿ ಸ್ಥಾನದಲ್ಲಿ ಗೋವನ್ನು ಪೂಜಿಸುತ್ತೇವೆ' ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+