ಬಸ್‌ಗಳ ಮೇಲಿನ ತಂಬಾಕು ಜಾಹೀರಾತು ತೆರವಿಗೆ ಗಡುವು: ಫೆ.18ರೊಳಗೆ ವರದಿ ಸಲ್ಲಿಕೆಗೆ KSRTC ಸೂಚನೆ
ಬೆಂಗಳೂರು: ಕರ್ನಾಟಕ ಸಾರಿಗೆ ನಿಗಮದ ಬಸ್‌ಗಳ ಹೊರಭಾಗದ ಮೇಲೆ ಪಾನ್ ಮಸಾಲಾ ಹಾಗೂ ಇತರ ತಂಬಾಕು ಉತ್ಪನ್ನಗಳ ಪ್ರಚಾರ ಕುರಿತು ಜಾಹೀರಾತು ಅಳವಡಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕೆಲವೆಡೆ ಕಾಲೇಜು ಯುವಕರು, ಸಾರ್ವಜನಿಕರು ಬಸ್ ಮೇಲಿನ ಜಾಹೀರಾತು ಕಿತ್ತು ಕಿಡಿ ಕಾರಿದ್ದು. ಈ ಆಕ್ಷೇಪ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬಸ್‌ಗಳು ಮತ್ತು ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನ ಪ್ರಚೋದಿಸುವಂತಹ ಜಾಹೀರಾತುಗಳಿಗೆ ನಿರ್ಬಂಧಿಸಿ, ತೆರವಿಗೆ ಆದೇಶಿಸಿದ್ದಾರೆ. ಇದರನ್ವಯ ಎರಡು ವಾರದಲ್ಲಿ ತೆರವು ಮಾಡಿ ವರದಿ ಸಲ್ಲಿಸುವಂತೆ KSRTC ಸೂಚನೆ ನೀಡಿದೆ. ಅಧಿಕಾರಿಗಳು ಯಾವೆಲ್ಲ ಕ್ರಮ ಕೈಗೊಳ್ಳಲಿದ್ದಾರೆ?
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ ಸಂಸ್ಥೆಯ ಬಸ್ಸುಗಳು/ಬಸ್ ನಿಲ್ದಾಣಗಳಲ್ಲಿ ತುಂಬಾಕು ಉತ್ಪನ್ನಗಳು ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹಿರಾತುಗಳನ್ನು ಪ್ರಚಾರ ಮಾಡಬಾರದು. ಸಾಕಷ್ಟು ಉತ್ಪನ್ನಗಳು ಸೇವನೆಗೆ ಪ್ರಚೋದಿಸುವಂತಹ ಜಾಹೀರಾತುಗಳನ್ನು ಬಸ್ಸುಗಳಲ್ಲಿ /ಬಸ್ ನಿಲ್ದಾಣಗಳಲ್ಲಿ ಅಳವಡಿಸಿದ್ದರೆ, ಅವುಗಳಿಗೆ ನಿರ್ದಿಷ್ಟ ಸಮಯ ನಿಗದಿಪಡಿಸಿ, ನಿಗದಿತ ಸಮಯದೊಳಗೆ ತೆರವುಗೊಳಿಸುವಂತೆ ಸಚವರು ನಿರ್ದೇಶಿಸಿದ್ದಾರೆ.

ಅಧಿಕಾರಿಗಳು ಯಾವೆಲ್ಲ ಕ್ರಮ ಕೈಗೊಳ್ಳಬೇಕು?
ನಿಗಮದ ಬಸ್ಸುಗಳ ಮೇಲೆ ಅಳವಡಿಸುತ್ತಿರುವ ಜಾಹೀರಾತುಗಳು ಹಾಗೂ ನಿಗಮದ ಬಸ್ ನಿಲ್ದಾಣದ ಜಾಹೀರಾತು ಹೋರ್ಡಿಂಗ್ಸ್ ಮತ್ತು ಗ್ಲೋಸೈನ್ ಫಲಕಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹೀರಾತುಗಳನ್ನು ಪ್ರಚಾರ ಮಾಡದಂತೆ ಕ್ರಮ ವಹಿಸುವುದು. ಇನ್ನು ಮುಂದೆ ಈ ತರಹದ ಜಾಹೀರಾತುಗಳನ್ನು ಅಳವಡಿಸಬಾರದು/ಪ್ರದರ್ಶಿಸದಂತೆ ನೋಡಿಕೊಳ್ಳಬೇಕು.
ಸಾಕಷ್ಟು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ಹಲವಾರು ಜಾಹೀರಾತು ಬಸ್ಸುಗಳಲ್ಲಿ ಅಥವಾ ಬಸ್ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. ಮುಂದಿನ 15 ದಿನಗಳಲ್ಲಿ (ದಿನಾಂಕ 15.02.2026) ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಚಿಸುವುದು ಹಾಗೂ ಈ ಬಗ್ಗೆ ಅನುಸರಣಾ ಕ್ರಮ ಕೈಗೊಳ್ಳಬೇಕಿದೆ.
ಫೆಬ್ರವರಿ 18 ರಂದು ವರದಿ ಸಲ್ಲಿಕೆ
ವಿಭಾಗಗಳ ನಿರ್ಮಾಣ ಬಸ್ ನಿಲ್ದಾಣದ ಜಾಹೀರಾತು ಹೋರ್ಡಿಂಗ್ಸ್ ಮತ್ತು ಗ್ಲೋಸೈನ್ ಫಲಕಗಳನ್ನು ಅಳವಡಿಸಲು ಆಯ್ಕೆಯಾಗಿದೆ ಪರವಾನಗಿದಾರರಿಗೆ ತುಂಬಾ ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹೀರಾತುಗಳನ್ನು ಪ್ರಚಾರ ಮಾಡದಂತೆ ನೋಟಿಸ್ ಜಾರಿ ಮಾಡುವುದು. ಸದರಿ ವಿಷಯದಲ್ಲಿ ಅಗತ್ಯ ಕ್ರಮ ವಹಿಸುವುದು. ಈ ಎಲ್ಲ ಕ್ರಮ ಕೈಗೊಂಡಿದ್ದರ ಕುರಿತು, ಸಚಿವರ ಆದೇಶ ಪಾಲನೆ ಬಗ್ಗೆ ಕಚೇರಿಗೆ ಮುಂದಿನ ತಿಂಗಳು ಫೆಬ್ರವರಿ 18 ರಂದು ಅನುಸರಣಾ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ.












Click it and Unblock the Notifications