ನಾಯಕತ್ವ ಬದಲಾವಣೆ: ಅಕ್ಕಪಕ್ಕದಲ್ಲಿ ಇರುವವರೇ ನಿಮಗೆ ಮೋಸ ಮಾಡುತ್ತಾರೆ, ಎಚ್ಚರ: ಡಿಕೆ ಶಿವಕುಮಾರ್ ಹೇಳಿದ್ದು ಯಾರಿಗೆ?
ಬೆಂಗಳೂರು: ರಾಜಕೀಯ ಮಾಡಿ ನನ್ನನ್ನು ಜೈಲಿಗೆ ಹಾಕಿದಾಗ, ನನಗಾಗಿ ಪ್ರಾರ್ಥನೆ ಮಾಡಿದಿರಿ, ಹರಕೆ ಕಟ್ಟಿಕೊಂಡಿದ್ದೀರಿ. ಈಗಲೂ ಅದನ್ನೇ ಮಾಡುತ್ತಿದ್ದೀರಿ ಎಂಬ ಅರಿವು ನನಗಿದೆ. ಪಕ್ಷತೀತವಾಗಿ, ಸಮುದಾಯತೀತವಾಗಿ ಜನ ನನಗೆ ಒಳ್ಳೆಯದು ಬಯಸುತ್ತಿದ್ದಾರೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ಉದ್ಯಮಿ ಒಕ್ಕಲಿಗ ಎಕ್ಸ್ಪೋ 2026 ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಬಂಗಾರಪ್ಪ ಅವರ ಕಾಲದಲ್ಲಿ ನಾನು ಜೈಲು ಮಂತ್ರಿಯಾಗಿದ್ದಾಗ ನಾಗರತ್ನಮ್ಮ ಅವರು ಸ್ಪೀಕರ್ ಆಗಿದ್ದರು. ಅವರು ಒಮ್ಮೆ ನನ್ನನ್ನು ಪಕ್ಕದಲ್ಲಿ ಕೂರಿಸಿಕೊಂಡು ನೀನು ಜೈಲಿಗೆ ಹೋಗಿ ಬಾ. ಅಲ್ಲಿರುವವರು ಯಾಕೆ ಜೈಲಿಗೆ ಹೋಗಿದ್ದಾರೆ ಎಂದು ತಿಳಿದುಕೊಂಡು ಬಂದು ಹೇಳು ಎಂದರು. ನಾನು ಜೈಲಿಗೆ ಹೋದೆ, ಅಲ್ಲಿದವರು ಒಬ್ಬ ಹಣ ಕಳ್ಳತನಕ್ಕೆ, ಮತ್ತೊಬ್ಬ ಹೆಣ್ಣಿನ ವಿಚಾರಕ್ಕೆ, ಮತ್ತೊಬ್ಬ ಆಸ್ತಿಗಾಗಿ ದಾಯಾದಿ ಜೊತೆ ಜಗಳವಾಡಿ ಬಂದಿದ್ದ. ಅದೇ ರೀತಿ ನಿಮಗೆ ಯಾರಾದರೂ ತೊಂದರೆ ಕೊಡುವವರು, ಮೋಸ ಮಾಡುವವರು ಇದ್ದರೆ, ಅವರು ನಿಮ್ಮ ಅಕ್ಕಪಕ್ಕದಲ್ಲಿ ಇರುವವರೇ ಆಗಿರುತ್ತಾರೆ. ಬೇರೆಯವರು ತೊಂದರೆ ಕೊಡಲ್ಲ. ನೀವು ಜಾಗರೂಕರಾಗಿ ಇರಬೇಕು ಎಂದು ತಿಳಿಸಿದರು.

ನೀವು ಶ್ರಮಪಡಿ, ಶ್ರಮಕ್ಕೆ ಪ್ರತಿಫಲ ಸಿಗುತ್ತೆ. ಟೀಕೆಗಳು ಸಾಯುತ್ತವೆ, ನೀವು ಮಾಡುವ ಕೆಲಸಗಳು ಮಾತ್ರ ಉಳಿಯುತ್ತವೆ. ನಾನು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವನಲ್ಲ. ಆದರೂ ಈ ಮಟ್ಟಕ್ಕೆ ಬಂದಿದ್ದೇನೆ. ಮುಂದೆಯೂ ನನ್ನ ಬಗ್ಗೆ ಪಕ್ಷದವರು ತೀರ್ಮಾನ ಮಾಡುತ್ತಾರೆ ಎಂಬ ನಂಬಿಕೆ, ಆತ್ಮವಿಶ್ವಾಸವಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅಧಿವೇಶನದಲ್ಲಿ ಒಮ್ಮೆ ಯಡಿಯೂರಪ್ಪ ಅವರಿಗೆ ಯಶಸ್ಸಿನ ಬಗ್ಗೆ ಒಂದು ಮಾತು ಹೇಳಿದ್ದೆ. ನಾವು ಬದುಕಿನಲ್ಲಿ ಯಶಸ್ಸು ಸಾಧಿಸಬೇಕಾದರೆ ನಮ್ಮಲ್ಲಿ ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನನ ಗುರಿ, ವಿದುರನ ನೀತಿ, ಭೀಮನ ಬಲ, ಕೃಷ್ಣನ ತಂತ್ರ ಇರಬೇಕು. ಆಗ ಯಶಸ್ಸು ಸಾಧಿಸಲು ಸಾಧ್ಯ. ನಾನು ರಾಜಕೀಯವಾಗಿ ಅನೇಕ ಏಟು ತಿಂದಿದ್ದೇನೆ. ನನ್ನನ್ನು ಬಂಡೆ ಎನ್ನುತ್ತಾರೆ. ಬಂಡೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಚಿನ್ನಕ್ಕೆ ಹೆಚ್ಚು ಶಾಖ ಕೊಟ್ಟು ಕರಗಿಸಿದಾಗ ಮಾತ್ರ ಆಭರಣ ಮಾಡಬಹುದು. ನೀವು ಯಾವತ್ತೂ ನಿಷ್ಪ್ರಯೋಜಕ, ಸಣ್ಣವ ಎಂದು ಭಾವಿಸಬೇಡಿ. ನೀವು ನಿಮ್ಮ ಕರ್ತವ್ಯ ಮಾಡಿ. ಯಾರು ಯಾವಾಗ ಬೇಕಾದರೂ ಏನಾದರೂ ಆಗಬಹುದು. ನಾನು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವನಲ್ಲ. ಆದರೂ ಈ ಮಟ್ಟಕ್ಕೆ ಬಂದಿದ್ದೇನೆ ಎಂದು ಹೇಳಿದರು.
ನನ್ನ ಬಗ್ಗೆ ಬೇರೆಯವರಿಗಿಂತ ನಮ್ಮ ಸಮುದಾಯದ ಕೆಲವರೇ, ನಮ್ಮವರೇ ಅಸೂಯೆಯಿಂದ ಟೀಕೆ ಮಾಡುತ್ತಿದ್ದಾರೆ. ಹಿಂದೆಯಿಂದ, ಮುಂದೆಯಿಂದ ಚಾಕು ಹಾಕುತ್ತಿದ್ದಾರೆ. ರಾಜಕೀಯದಲ್ಲಿ ಇವೆಲ್ಲವೂ ಸಹಜ. ಇದಕ್ಕೆ ತಲೆ ಕೆಡಿಸಿಕೊಳ್ಳಬಾರದು. ನಾವು ಪ್ರಾಮಾಣಿಕವಾಗಿ ಇರಬೇಕು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಾನು ಎಷ್ಟು ಪ್ರಾಮಾಣಿಕವಾಗಿ ಇದ್ದೆ ಎಂಬುದು ನನ್ನ ಆತ್ಮಸಾಕ್ಷಿಗೆ ಗೊತ್ತು. ಆದರೆ ಕುಮಾರಸ್ವಾಮಿ ಅವರು ನನ್ನ ವಿರುದ್ಧ ಬೆನ್ನಿಗೆ ಚೂರಿ ಹಾಕಿದ ಆರೋಪ ಮಾಡಿದರು. ನನಗೆ ಯಾರ ಪ್ರಮಾಣಪತ್ರವೂ ಬೇಡ. ನನ್ನ ಆತ್ಮಸಾಕ್ಷಿಯನ್ನು ನಾನು ಮೆಚ್ಚಿಸಿದರೆ ಸಾಕು. ನೀವು ನಿಮ್ಮ ಸ್ವಾಭಿಮಾನ, ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿ" ಎಂದು ಸಲಹೆ ನೀಡಿದರು.
ಹಣ್ಣು ಕೆಂಪಾಗಿ, ಚೆನ್ನಾಗಿದ್ದರೆ ಮಾತ್ರ ಕಲ್ಲು ಹೊಡೆಯುತ್ತಾರೆ. ನೀವು ಬಲಿಷ್ಠವಾಗಿದ್ದರೆ ಶತ್ರುಗಳು ಜಾಸ್ತಿ. ನಿಮ್ಮ ಮೇಲೆ ಅಸೂಯೆ ಪಡುವವರು ಹೆಚ್ಚು, ಹೀಗಾಗಿ ಎಚ್ಚರಿಕೆಯಿಂದ ಇರಿ. ನಾನು ವಯಸ್ಸಿನಲ್ಲಿ ಚಿಕ್ಕವನಾದರೂ, ಅನುಭವ ದೊಡ್ಡದಾಗಿದೆ. ನಿಮ್ಮ ಪರವಾಗಿ ನಾನು ಸಹೋದರನಾಗಿ, ಸ್ನೇಹಿತನ್ನಾಗಿ ಇರುತ್ತೇನೆ. ಊರಿನಲ್ಲಿ ಹುಟ್ಟಿದ ಹೋರಿಗಳೆಲ್ಲ ಬಸವ ಆಗುವುದಿಲ್ಲ. ಎಲ್ಲರೂ ನಾಯಕರಾಗಲು ಆಗುವುದಿಲ್ಲ. ನೀವು ಈ ದೇಶದ ಆಸ್ತಿ. ನಿಮಗೆ ಒಳ್ಳೆಯದಾಗಲಿ ಎಂದರು.












Click it and Unblock the Notifications