ಬೆಣ್ಣೆಹಳ್ಳ ಸಮಸ್ಯೆಗೆ ಇದೇ ಕಾರಣ: ಸಚಿವ ಸಂತೋಷ್ ಲಾಡ್!
ರಾಜ್ಯದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಧಾರವಾಡದಲ್ಲೂ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಭಾರೀ ಅವಾಂತರವೇ ಸೃಷ್ಟಿಯಾಗಿದೆ. ಅಣ್ಣಿಗೇರಿ, ನವಲಗುಂದ ಹಾಗೂ ಕುಂದಗೋಳ ತಾಲ್ಲೂಕಿನ 130 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಹಾನಿಯಾದ ಮನೆಗಳಿಗೆ ಎಸ್.ಡಿ.ಆರ್.ಎಫ್ ನಿಯಮಾವಳಿಗಳ ಅನುಸಾರ ಪರಿಶೀಲಿಸಿ, ಪರಿಹಾರವನ್ನು ನೀಡಲಾಗುತ್ತದೆ. ಜಿಲ್ಲಾಡಳಿತದಿಂದ ಪರಿಹಾರ ಕಾರ್ಯಗಳು ನಡೆಯುತ್ತಿವೆ. ಇನ್ನೂ ಹೆಚ್ಚಾಗಿ ಮಳೆ ಬರುವ ಸಾಧ್ಯತೆಯಿದೆ. ಸಾರ್ವಜನಿಕರು ಜಾಗರೂಕರಾಗಬೇಕಿದೆ. ಜನರು ಸರ್ಕಾರ, ಜಿಲ್ಲಾಡಳಿತ ನೀಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಬೇಕು ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ತಿಳಿಸಿದ್ದಾರೆ.
ಕುಂದಗೋಳ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟಿ ಹಳ್ಳ ದಾಟುವಾಗ ಮಳೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಟ್ರಾಕ್ಟರ್ ಉರುಳಿ ಬಿದ್ದಿದೆ. ಪರಿಣಾಮವಾಗಿ ಶಿವಯ್ಯ ಬಸಯ್ಯ ವಟ್ನಾಳಮಠ ಅವರು ನಿಧನರಾಗಿದ್ದಾರೆ. ಜಾಗೃತಿಯನ್ನು ವಹಿಸಿದ್ದರೆ ಒಂದು ಜೀವ ಉಳಿಯುತ್ತಿತ್ತು. ಇನ್ನೂ ಇಬ್ಬರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರ್ಘಟನೆ ನಡೆಯಬಾರದಿತ್ತು. ಶಾಸಕರು, ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಸರ್ಕಾರದ ವತಿಯಿಂದ ಮೃತ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುತ್ತದೆ ಎಂದು ಸಚಿವ ಸಂತೋಷ ಲಾಡ್ ಅವರು ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುತ್ತದೆ. ಪ್ರವಾಹ ರೀತಿಯಲ್ಲಿ ಹಳ್ಳಗಳು ಹರಿಯುತ್ತಿವೆ. ಇಂತಹ ಸಂದರ್ಭದಲ್ಲಿ ಬೈಕ್, ಕಾರ್, ಟ್ರಾಕ್ಟರ್, ಲಾರಿ, ಬಸ್ ಸೇರಿದಂತೆ ಯಾವುದೇ ರೀತಿಯ ವಾಹನಗಳನ್ನು ಹಳ್ಳಗಳನ್ನು, ಸೇತುವೆಗಳನ್ನು ದಾಟುವಾಗ ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ದುಸ್ಸಾಹಸಕ್ಕೆ ಸಾರ್ವಜನಿಕರು ಮುಂದಾಗಬಾರದು. ನೀರು ಹರಿಯುವ ಪ್ರಮಾಣ ಇಳಿಮುಖವಾದ ನಂತರ ಜನರು ಹಳ್ಳ, ಸೇತುವೆಗಳನ್ನು ದಾಟಬೇಕು ಎಂದು ಹೇಳಿದರು.
ಸರ್ಕಾರ ಹಂತದಲ್ಲಿ ಮೂರು ತಿಂಗಳ ಹಿಂದೆ ಕಟ್ಟಿ ಹಳ್ಳ ಸೇತುವೆ ಬಗ್ಗೆ ಶಾಸಕರು, ಇಲಾಖೆ ಅಧಿಕಾರಿಗಳು ವರದಿಯನ್ನು ಸಲ್ಲಿಸಿದ್ದಾರೆ. ಬಯಲು ಪ್ರದೇಶದಲ್ಲಿ ಈ ತರಹದ ಸಾಕಷ್ಟು ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಇನ್ನೂ ಸೇತುವೆಗಳು ಬೇಕಾಗಿವೆ. ಈ ಪ್ರದೇಶದಲ್ಲಿನ ಪ್ರಮುಖವಾದ ಕಟ್ಟಿ ಹಳ್ಳ ಸೇತುವೆ ಮಾತ್ರ ಉಳಿದುಕೊಂಡಿದೆ. ಈ ಸೇತುವೆ ನಿರ್ಮಾಣಕ್ಕೆ ಶೀಘ್ರಗತಿಯಲ್ಲಿ ಬ್ರಿಜ್ ನಿರ್ಮಾಣ ಮಾಡಲಿದ್ದೇವೆ ಎಂದಿದ್ದಾರೆ.
ಬಯಲು ಸೀಮೆ ಪ್ರದೇಶದಲ್ಲಿನ ಹಳ್ಳಗಳಿಗೆ ಮಳೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತದೆ. ಹಳ್ಳಗಳು, ನಾಲಾಗಳ ಮೇಲೆ ಬಳ್ಳಿಗಳು ಬೆಳೆದು ನೀರು ಸೇತುವೆ ಮೇಲೆ ಹರಿಯುತ್ತದೆ. ಹೀಗಾಗಿ ಬೆಣ್ಣೆಹಳ್ಳ, ತುಪ್ಪರಿ ಹಳ್ಳಗಳು ಸಹ ಹೊಲಗಳಲ್ಲಿ ಹರಿದು ಹೋಗುತ್ತವೆ. ಈ ಭಾಗದ ರೈತರಿಗೆ ಸಹ ಸಾಕಷ್ಟು ಅನಾನುಕೂಲ ಆಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದುಕೊಂಡು ಪರಿಶೀಲನೆ ಮಾಡಲಾಗುತ್ತಿದೆ. ಸರ್ಕಾರದಿಂದ ಪರಿಹಾರ ಕೊಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಅಲ್ಲದೇ ಬೆಳೆ ಹಾನಿಯಾದ ರೈತರ ಮನವಿ ಪರಿಶೀಲಿಸಿ, ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಹಳ್ಳಗಳ ಅಗಲೀಕರಣ ಮಾಡಿದಾಗ ಸಹ ಬದುಗಳಲ್ಲಿ ನೀರು ತುಂಬುತ್ತದೆ. ಸುಮಾರು 30 ರಿಂದ 60 ಕಿ.ಮೀ. ವರೆಗೆ ರೂ.200 ಕೋಟಿ ವೆಚ್ಚದಲ್ಲಿ ಬೆಣ್ಣೆ ಹಳ್ಳ ಹೂಳು ತೆಗೆಯಲಾಗುತ್ತದೆ. ರೈತರು ತಮ್ಮ ಹೊಲಗಳಲ್ಲಿನ ಬದುಗಳನ್ನು ಅಗಲೀಕರಣ ಮಾಡಲು ಅವಕಾಶ ನೀಡುವುದಿಲ್ಲ. ರೈತರು ಜೆಸಿಬಿಗಳನ್ನು ವಾಪಸ್ಸು ಕಳಿಸುತ್ತಿದ್ದಾರೆ. ಇದರಿಂದ ಸಮಸ್ಯೆಗಳು ಉಳಿದುಕೊಳ್ಳುತ್ತವೆ. ರೈತರು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.












Click it and Unblock the Notifications