ಮಾನವೀಯತೆಗಿಂತ ಮಿಗಿಲಾದ ಯಾವುದೇ ಕಾನೂನು ಇಲ್ಲ: ಸಚಿವ ಮಾಧುಸ್ವಾಮಿ
ಆಡಳಿತದ ಚುಕ್ಕಾಣಿ ಹಿಡಿದವರು ಸರ್ಕಾರದ ನಿಲುವು, ಮಾಧ್ಯಮದ ಮಾಹಿತಿ ಹಾಗೂ ಜನ, ಕಾರ್ಯಕರ್ತರ ಅಭಿಪ್ರಾಯದ ಮೇಲೆ ಗಮನ ಹರುಸುವುದು ವಾಡಿಕೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಬೆಂಗಳೂರು, ಫೆಬ್ರವರಿ3: ಮಾನವೀಯತೆಗಿಂತ ಮಿಗಲಾದ ಯಾವುದೇ ಕಾನೂನಿಲ್ಲ. ನಾವು ಮೌಲ್ಯಾಧಾರಿತ ಬದುಕನ್ನು ನಡೆಸಬೇಕೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಶುಕ್ರವಾರ ವಿಕಾಸಸೌಧದಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ವತಿಯಿಂದ ಕಾನೂನು ವಿದ್ಯಾರ್ಥಿಗಳಿಗೆ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆಯ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಡಳಿತದ ಚುಕ್ಕಾಣಿ ಹಿಡಿದವರು ಸರ್ಕಾರದ ನಿಲುವು, ಮಾಧ್ಯಮದ ಮಾಹಿತಿ ಹಾಗೂ ಜನ, ಕಾರ್ಯಕರ್ತರ ಅಭಿಪ್ರಾಯದ ಮೇಲೆ ಗಮನ ಹರುಸುವುದು ವಾಡಿಕೆ. ಕಾನೂನು ಮಾಡಿ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟದ ಕೆಲಸ. ಇತ್ತೀಚೆಗೆ ಕೆಲ ರಾಜಕಾರಣಿಗಳು ಪ್ರಚಾರಕ್ಕಷ್ಟೇ ಸೀಮಿತವಾಗಿ ಕೆಲಸ ನಿರ್ವಹಿಸುತ್ತಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ನಾವು ಬೇರೆ ದೇಶದ ಕಾನೂನನ್ನು ಸಹ ತಿಳಿದು ನಮ್ಮ ದೇಶದ ಕಾನೂನನ್ನು ಅವರಿಗೆ ವಿನಿಮಯ ಮಾಡಿಕೊಡಬೇಕು ಎಂದರು
ಕಾನೂನು ವಿದ್ಯಾರ್ಥಿಗಳು ಅಗಾಧ ಓದಿನ ಜೊತೆಯಲ್ಲಿ ವಿಷಯ ಮನನ ಮಾಡಿಕೊಳ್ಳಬೇಕು. ಯಾವುದೇ ಕೆಲಸ ಮಾಡಿದರೂ ಬದ್ದತೆ ಇರಬೇಕು. ನಮ್ಮ ನಾಡು, ಜನ, ಸಂಸ್ಕೃತಿಯ ಬಗೆಗೆ ಅರಿವು ಇರಬೇಕು. ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಹೆಸರು ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾನೂನು ಇಲಾಖೆಯ ಸರ್ಕಾರದ ವಿಶೇಷ ಕಾರ್ಯದರ್ಶಿಗಳಾದ ಹೆಚ್. ಕೆ.ಜಗದೀಶ್ ಅವರು, ಕಾನೂನು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಈ ರಾಜ್ಯಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆಯಲ್ಲಿ ಜಿಲ್ಲಾ ವಲಯದ ವಿಜೇತರು ಸೇರಿ ಒಟ್ಟು 50 ಸ್ಪರ್ಧಿಗಳು ಭಾಗವಹಿಸಿದ್ದರು. ಅವರಲ್ಲಿ ಹತ್ತು ಜನರಿಗೆ ಪ್ರಶಸ್ತಿ ನೀಡಲಾಯಿತು.
ಈ ಸ್ಪರ್ಧೆ ಶಾಸಕಾಂಗದ ಮಹತ್ವವನ್ನು ವಿವರಿಸುವ ಅರಿವಿನ ಕಾರ್ಯಕ್ರಮವಾಗಿದೆ. ಇಂದಿನ ಯುವ ವಿದ್ಯಾರ್ಥಿಗಳಿಗೆ ಅಧಿವೇಶನದ ಕಾರ್ಯವಿಧಾನ, ಚಟುವಟಿಕೆ ಬಗೆಗೆ ತಿಳುವಳಿಕೆ ಮೂಡಿಸಿದೆ. ಎಲ್ಲರೂ ದೇಶದ ಸಂವಿಧಾನವನ್ನು ಅರ್ಥೈಸಿಕೊಳ್ಳಬೇಕೆಂದರು ಈ ಸ್ಪರ್ಧೆಯಲ್ಲಿ ವಿಜೇತರಾದ ಒಟ್ಟು ಹತ್ತು ಜನರಿಗೆ ಪ್ರಶಸ್ತಿ ನೀಡಲಾಯಿತು. ಪ್ರಥಮ ಸ್ಥಾನ ಭಾರ್ಗವಿ -ಎಸ್ ಡಿ ಎಂ ಕಾಲೇಜು ಮಂಗಳೂರು ರೂ 10000 .ಎರಡನೇ ಸ್ಥಾನ ರಕ್ಷಿತ- ಪಂಚಮಿ ಕಾನೂನು ಕಾಲೇಜು ಬೆಂಗಳೂರು ರೂ 7500 ಮೂರನೇ ಸ್ಥಾನ-ಅನಿಲ್ ರೆಡ್ಡಿ ಎಸ್ ಜೆ ಆರ್ ಕಾನೂನು ಕಾಲೇಜು ರೂ 5000 ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್ ಮಹಾಲಕ್ಷ್ಮಿ, ವಿಧಾನ ಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸಧಾರಣಾ ಸಂಸ್ಥೆ ನಿರ್ದೇಶಕ ಕೆ.ದ್ವಾರಕನಾಥ್ ಬಾಬು ಉಪಸ್ಥಿತರಿದ್ದರು.












Click it and Unblock the Notifications