ಶಾಶ್ವತವಾಗಿ ಹುಬ್ಬಳ್ಳಿ-ಬೆಂಗಳೂರು ಎಕ್ಸ್‌ಪ್ರೆಸ್ ರದ್ದುಗೊಳಿಸಿದ ರೈಲ್ವೆ ಇಲಾಖೆ
ಬೆಂಗಳೂರು, ಜುಲೈ 7: ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿತವಾದ ಕಾರಣ ಬೆಂಗಳೂರು-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ (ರೈಲು ನಂ.07353/07354) ಜುಲೈ 16 ರಿಂದ ಶಾಶ್ವತವಾಗಿ ರದ್ದುಗೊಳಿಸಲಾಗಿರುತ್ತದೆ ಎಂದು ನೈಋತ್ಯ ರೈಲ್ವೆ ಇಲಾಖೆ ತಿಳಿಸಿದೆ.
ನೈಋತ್ಯ ರೈಲ್ವೆ (SWR) ವಿಭಾಗ ಈ ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಈ ವರ್ಷ ಮಾರ್ಚ್ 23 ರಂದು ಸೀಮಿತ ನಿಲುಗಡೆಗಳೊಂದಿಗೆ ಪ್ರಾರಂಭಿಸಿತ್ತು. ಈ ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್ ನಿಲ್ದಾಣವನ್ನು ತಲುಪುವ ಮೊದಲು ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಯಶವಂತಪುರದಲ್ಲಿ ನಿಲುಗಡೆ ಮಾಡುತ್ತಿತ್ತು.

ಬೆಂಗಳೂರು- ಹುಬ್ಬಳ್ಳಿ ರೈಲು ಬೆಂಗಳೂರಿನಿಂದ ಬೆಳಗ್ಗೆ 7:30ಕ್ಕೆ ಹೊರಟು ಮಧ್ಯಾಹ್ನ 2.30ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತಿತ್ತು. ಹಿಂದಿರುಗುವ ದಿಕ್ಕಿನಲ್ಲಿ ಈ ರೈಲು ಹುಬ್ಬಳ್ಳಿಯಿಂದ ಮಧ್ಯಾಹ್ನ 3.15 ಕ್ಕೆ ಹೊರಟು ರಾತ್ರಿ 11.10 ಕ್ಕೆ ಬೆಂಗಳೂರು ತಲುಪುತ್ತದೆ. ರೈಲು ಮೂರು ಎಸಿ ತರಗತಿಗಳು ಮತ್ತು ಏಳು ಸ್ಲೀಪರ್ ತರಗತಿಗಳು ಸೇರಿದಂತೆ 16 ಕೋಚ್‌ಗಳನ್ನು ಹೊಂದಿದೆ.
ನೈಋತ್ಯ ರೈಲ್ವೆ ವಿಭಾಗೀಯ ಅಧಿಕಾರಿಗಳ ಪ್ರಕಾರ, ಹುಬ್ಬಳ್ಳಿ-ಬೆಂಗಳೂರು ರೈಲು ಶೇಕಡಾ 34ಕ್ಕಿಂತ ಕಡಿಮೆ ಸೀಟುಗಳನ್ನು ಹೊಂದಿದೆ ಮತ್ತು ಪ್ರಯಾಣಿಕರಿಂದ ಕಳಪೆ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಇದು ಪ್ರಾರಂಭವಾದಾಗಿನಿಂದ ಈ ರೈಲಿಗೆ ಉತ್ತಮ ಪ್ರತಿಕ್ರಿಯೆಯಿಲ್ಲ. ರೈಲ್ವೆಯು ಈ ರೈಲನ್ನು ನಷ್ಟದೊಂದಿಗೆ ನಿರ್ವಹಿಸುತ್ತಿದೆ. ಹೀಗಾಗಿ ಜುಲೈ 16ರಿಂದ ರೈಲನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವ ರೈಲು ಶೇ.30.17 ಮತ್ತು ಬೆಂಗಳೂರು-ಹುಬ್ಬಳ್ಳಿ ರೈಲು ಶೇ.37.15 ಸೀಟುಗಳನ್ನು ಹೊಂದಿದೆ. ಜುಲೈ 5 ರವರೆಗೆ ರೈಲು ಪ್ರತಿ ದಿಕ್ಕಿನಲ್ಲಿ 94 ಟ್ರಿಪ್‌ಗಳನ್ನು ಪೂರ್ಣಗೊಳಿಸಿದೆ. ಇತ್ತೀಚೆಗೆ ಆರಂಭಿಸಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೂಡ ಬೆಂಗಳೂರಿನಿಂದ ಬೆಳಗ್ಗೆ ಹೊರಟು ಮಧ್ಯಾಹ್ನದ ಮೊದಲು ಹುಬ್ಬಳ್ಳಿ ತಲುಪುವುದನ್ನು ಸ್ಮರಿಸಬಹುದು. ಹಿಂದಿರುಗುವ ದಿಕ್ಕಿನಲ್ಲಿ ಇದು ಮಧ್ಯಾಹ್ನ ಹುಬ್ಬಳ್ಳಿಯಿಂದ ಹೊರಟು ಸಂಜೆ ತಡವಾಗಿ ಬೆಂಗಳೂರು ತಲುಪುತ್ತದೆ. ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಕೂಡ ಈ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ.












Click it and Unblock the Notifications