DK Suresh: ಎಲ್ಲವೂ ಸುಸೂತ್ರ, ಒಂದು ಹಂತಕ್ಕೆ ಬರುತ್ತೆ: ಡಿಕೆ ಸುರೇಶ್ ಮಾತಿನ ಮರ್ಮವೇನು?
ಬೆಂಗಳೂರು, ಡಿಸೆಂಬರ್ 02: ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರ ನಡುವಿನ ಸಮಸ್ಯೆ ಬಗೆಹರಿಸಲು ಹೈಕಮಾಂಡ್ ಮುಂದಾಗಿದ್ದು, ಹೈಕಮಾಂಡ್ ಸೂಚನೆ ಮೇರೆಗೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸುವ ಮೂಲಕ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಒಗ್ಗಟ್ಟಿನ ಮಂತ್ರ ಜಪಿಸಿದರೆ, ಇತ್ತ ಡಿ ಕೆ ಸುರೇಶ್ ಅವರು ಒತ್ತಡದ ತಂತ್ರಕ್ಕೆ ಮುಂದಾಗಿದ್ದಾರೆ
ಸಿಎಂ ಬದಲಾವಣೆ ವಿಚಾರವಾಗಿ ನೀವು ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದೀರಾ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷರಾದ ಡಿ ಕೆ ಸುರೇಶ್ ಅವರು ಮಾತನಾಡಿ, "ಎಲ್ಲವೂ ಸುಸೂತ್ರವಾಗಿ ಆಗುತ್ತಿದ್ದು, ಒಂದು ಹಂತಕ್ಕೆ ಬರಲಿದೆ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ. ನನ್ನ ಖಾಸಗಿ ಭೇಟಿ ಬಗ್ಗೆ ಎಲ್ಲವನ್ನೂ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಉಪಾಹಾರ ಕೂಟ ನಡೆದಿದ್ದು, ಇಂದು ಸಹ ಒಂದು ಉಪಾಹಾರಕೂಟ ನಡೆಯಲಿದೆ ಎಂದರು.

ಇಬ್ಬರೂ ನಾಯಕರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿರುವ ಕುರಿತು ಉತ್ತರಿಸಿದ ಡಿ ಕೆ ಸುರೇಶ್ ಅವರು, ಹೈಕಮಾಂಡ್ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು. ಸಹೋದರನ ಮೂಲಕ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬುದು ಮಾಧ್ಯಮಗಳು ಹೇಳುತ್ತಿದ್ದೀರಿ ಎಂದರು.
ಸ್ವಾಮೀಜಿಗಳು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ, ಇದಕ್ಕೆ ರಾಜಕೀಯವಾಗಿ ಉತ್ತರ ಕೊಡುವುದಕ್ಕಿಂತ, ಯಾರು ಯಾವ ಸಂದರ್ಭದಲ್ಲಿ ಮಠವನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದು ಜನರಿಗೆ ಗೊತ್ತಿದ್ದು, ನಾನು ಹೆಚ್ಚಾಗಿ ಹೇಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ಕೇಂದ್ರ ಸಚಿವರ ಭೇಟಿಗೆ ಸಮಯ ಕೇಳಿದ್ದೇನೆ: ಡಿಕೆ ಶಿವಕುಮಾರ್
ಮೇಕೆದಾಟು ಹಾಗೂ ನೀರಾವರಿ ಯೋಜನೆಗಳ ಜಾರಿ ಸಂಬಂಧಿಸಿದಂತೆ ಕೇಂದ್ರ ಜಲಶಕ್ತಿ ಸಚಿವರು ಹಾಗೂ ಪರಿಸರ ಸಚಿವರನ್ನು ಭೇಟಿ ಮಾಡಲು ಸಮಯ ಕೇಳಿದ್ದೇನೆ. ಅವರು ಸಮಯ ಕೊಟ್ಟರೆ ದೆಹಲಿಗೆ ಭೇಟಿ ನೀಡುವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ ಎಲ್ಲಾ ಸಂಸದರು ರಾಜ್ಯದ ಹಿತಕ್ಕಾಗಿ ಹೋರಾಟ ನಡೆಸಬೇಕಿದೆ. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಅವರು ರಾಜ್ಯಕ್ಕೆ ಸಹಕಾರ ನೀಡಬೇಕು. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನಿಯೋಗವನ್ನು ಕರೆದೊಯ್ಯುವುದಾಗಿ ಹೇಳಿದ್ದಾರೆ. ಈ ಬಗ್ಗೆ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡಲಾಗುವುದು. ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುವ ಮುನ್ನ ಒಮ್ಮೆ ದೆಹಲಿಗೆ ಹೋಗಿ ಬರಬೇಕಾಗಿದೆ. ದೆಹಲಿಗೆ ಬನ್ನಿ ನಾವು ಸಹಾಯ ಮಾಡುತ್ತೇವೆ ಎಂದು ಅವರು ಹೇಳುತ್ತಿದ್ದಾರೆ. ಅವರಿಗೆ ಜವಾಬ್ದಾರಿ ಕೊಟ್ಟು ನೋಡೋಣ ಎಂದರು.












Click it and Unblock the Notifications