SWR: ಬೆಂಗಳೂರು-ಹುಬ್ಬಳ್ಳಿ-ವಿಜಯಪುರ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್
ಬೆಂಗಳೂರು, ಸೆಪ್ಟಂಬರ್ 10: ದಸರಾ ಹಬ್ಬದ ಪ್ರಯುಕ್ತ ಕರ್ನಾಟಕದ ವಿವಿಧ ರೈಲು ಮಾರ್ಗಗಳಲ್ಲಿ ವಿಶೇಷ ರೈಲು ಕಾರ್ಯಾಚರಣೆಯನ್ನು ನೈಋತ್ಯ ರೈಲ್ವೆ ಅಧಿಕಾರಿಗಳು ಘೋಷಿಸಿದ್ದಾರೆ. SSS ಹುಬ್ಬಳ್ಳಿ-ಯಶವಂತಪುರ ಹಾಗೂ ವಿಜಯಪುರ-ಬೆಂಗಳೂರು ಮಾರ್ಗಗಳಲ್ಲಿ ಹೆಚ್ಚುವರಿ ರೈಲುಗಳನ್ನು ಸಂಚರಿಸಲು ತೀರ್ಮಾನಿಸಲಾಗಿದೆ. ಪ್ರಯಾಣಿಕರ ಹೆಚ್ಚಿನ ಬೇಡಿಕೆಯನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2025 ಸೆಪ್ಟೆಂಬರ್ 30ರಂದು SSS ಹುಬ್ಬಳ್ಳಿ-ಯಶವಂತಪುರ ವಿಶೇಷ ರೈಲು (ಸಂಖ್ಯೆ 07379) ಮಧ್ಯಾಹ್ನ 12:00 ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಟು, ಅದೇ ದಿನ ರಾತ್ರಿ 08:15 ಕ್ಕೆ ಯಶವಂತಪುರ ತಲುಪಲಿದೆ. ಮಾರ್ಗ ಮಧ್ಯೆ ಈ ರೈಲುಎಸ್‌ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ. ಈ ರೈಲು ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ.

2025 ಅಕ್ಟೋಬರ್ 3ರಂದು ರೈಲು (ಸಂಖ್ಯೆ 06280) ವಿಜಯಪುರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಜೆ 05:30 ಕ್ಕೆ ವಿಜಯಪುರದಿಂದ ಹೊರಡುತ್ತದೆ. ಮರುದಿನ ಬೆಳಗ್ಗೆ 08:10 ಕ್ಕೆ ಬೆಂಗಳೂರಿಗೆ ತಲುಪಲಿದೆ. ಮರಳಿ ಅದೇ ದಿಕ್ಕಿನಲ್ಲಿ ಯಶವಂತಪುರ-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06279) ಅಕ್ಟೋಬರ್ 2 ರಂದು ಸಂಚರಿಸಲಿದೆ. ಅಂದು ಸಂಜೆ 07:40 ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗ್ಗೆ 07:45 ಕ್ಕೆ ವಿಜಯಪುರ ತಲುಪಲಿದೆ. ಈ ರೈಲು ಸಹ ವಿವಿಧ ವರ್ಗಗಳ ಕೋಚ್ ಸೇರಿ ಒಟ್ಟು 21 ಬೋಗಿಗಳು ಹೊಂದಿದೆ.
ರೈಲ್ವೆ ಪ್ರಯಾಣಿಕರು ಈ ವಿಶೇಷ ರೈಲುಗಳ ಸಮಯ ಮತ್ತು ಇತರ ವಿವರಗಳನ್ನು ಪರಿಶೀಲಿಸಲು ಅಧಿಕೃತ ವೆಬ್‌ಸೈಟ್ www.enquiry.indianrail.gov.in /http://www.enquiry.indianrail.gov.in ನಲ್ಲಿ ಪರಿಶೀಲಿಸಬೇಕು. ಹೆಚ್ಚಿನ ಮಾಹಿತಿಗೆ NTES ಅಪ್ಲಿಕೇಶನ್ ಬಳಸಬೇಕು. ಇಲ್ಲವೇ ಸಹಾಯವಾಣಿ, 139 ಸಂಖ್ಯೆಗೆ ಕರೆ ಮಾಡುವ ಮೂಲಕ ಮಾಹಿತಿಯನ್ನು ಪಡೆಯಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ದಸರಾ, ದೀಪಾವಳಿ, ಛತ್ ಹಬ್ಬಗಳ ಆಚರಣೆ ಪ್ರಯುಕ್ತ ಬೆಂಗಳೂರು ಭಾಗದಿಂದ ವಿವಿಧ ಮಾರ್ಗಗಳಲ್ಲಿ ವಿಶೇಷ ರೈಲು ಸಂಚಾರ ಮಾಡಲಿವೆ. ಮೈಸೂರು, ಶಿವಮೊಗ್ಗ, ಬೀದರ್-ಬೆಂಗಳೂರು, ಬೆಂಗಳೂರು -ದಾಸನಾಪುರ, ಬೆಂಗಳೂರು-ಕಲಬುರಗಿ, ಬೆಂಗಳೂರು ಗೋಮತಿ ನಗರ ಸೇರಿದಂತೆ ಅನೇಕ ಮಾರ್ಗಗಳಲ್ಲಿ ವಿಶೇಷ ರೈಲು ಸಂಚರಿಸಲಿವೆ. ಹಲವು ರೈಲುಗಳು ಡಿಸೆಂಬರ್ ಮತ್ತು ಜನವರಿ 2026ರವರೆಗೆ ಕಾರ್ಯಾಚರಣೆ ಮಾಡಲಿವೆ ಎಂದು ಈಗಾಗಲೇ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಮಾಹಿತಿ ನೀಡಿತ್ತು.












Click it and Unblock the Notifications