11,513 ಕೋಟಿ ಮೌಲ್ಯದ 10 ಯೋಜನೆ ಗುತ್ತಿಗೆಗೆ ಸರ್ಕಾರದಿಂದ ಒಪ್ಪಿಗೆ
ಬೆಂಗಳೂರು, ಏಪ್ರಿಲ್ 18: ಕರ್ನಾಟಕದಲ್ಲಿ 46,984 ಉದ್ಯೋಗಗಳ ಸೃಜನೆಯ ನಿರೀಕ್ಷೆ ಹುಟ್ಟಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 58ನೇ ಸಭೆಯಲ್ಲಿ ಒಟ್ಟು 11,513 ಕೋಟಿ ರೂಪಾಯಿಗಳ 10 ಯೋಜನೆಗಳಿಗೆ ಅನುಮತಿ ನೀಡಲಾಗಿದೆ.
ಸೋಮವಾರ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಪಗುತ್ತಿಗೆ ಮತ್ತು ಗುತ್ತಿಗೆಯ ಅವಧಿಯನ್ನು ಮಿತಿಮೀರಿ ವಿಸ್ತರಿಸಬಾರದು. ಈ ಬಗ್ಗೆ ಸ್ಪಷ್ಟ ನಿಯಮಗಳನ್ನು ರೂಪಿಸುವಂತೆ ಸೂಚನೆ ನೀಡಿದರು.
ವಿದ್ಯುತ್ ಹಾಗೂ ಸ್ಟೀಲ್ ಯೋಜನೆಗಳಿಗೆ ಸಂಬಂಧಿಸಿದ ಕೈಗಾರಿಕೆಗಳಲ್ಲಿ ನೀರಿನ ಬಳಕೆಯ ಪ್ರಮಾಣ ಹೆಚ್ಚಿರುತ್ತದೆ. ಕೈಗಾರಿಕೆಗಳಲ್ಲಿ ನೀರಿನ ಬಳಕೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕೈಗಾರಿಕೆಗಳಿಗೆ ನೀಡಿದ ಜಮೀನು ಕುರಿತು ಚರ್ಚೆ:
ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 58ನೇ ಸಭೆಯಲ್ಲಿ ಕೈಗಾರಿಕೆಗಳಿಗೆ ನೀಡಲಾಗಿರುವ ಜಮೀನು ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. 10 ರಿಂದ 20 ವರ್ಷಗಳ ಹಿಂದೆ ಸ್ಥಳ ಮಂಜೂರಾತಿ ಮಾಡಿಸಿಕೊಂಡಿದ್ದರೂ ಯೋಜನೆಗೆ ಬಳಕೆಯಾಗದೆ ಉಳಿದುಕೊಂಡಿರುವ ಕೈಗಾರಿಕೆಗಳಿವೆ. ಇದನ್ನು ಬೇರೆಯವರಿಗೆ ಕೊಡುವುದಕ್ಕೂ ಸಾಧ್ಯವಿಲ್ಲದ ಸ್ಥಿತಿಯಿದೆ. ಈ ಬಗ್ಗೆ ಕೂಡಲೇ ಪರಿಶೀಲಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಮಾರ್ಗದರ್ಶನ:
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಪರಿಶೀಲನೆಗಾಗಿ ಪ್ರತ್ಯೇಕವಾಗಿ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು. ನವೆಂಬರ್ 2 ಮತ್ತು 3ರಂದು ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಈ ಯೋಜನೆಗಳು ಪೂರಕವಾಗಲಿವೆ. ಭೂಮಿ, ನೀರು, ವಿದ್ಯುತ್ ಮೂಲಭೂತ ಸೌಕರ್ಯ, ವಿನಾಯತಿ ನೀಡುವುದು, ಹೊಸ ಕೈಗಾರಿಕಾ ನೀತಿ 2025ರ ಅಡಿಯಲ್ಲಿ ಯಾವ ರೀತಿ ಸೌಲಭ್ಯಗಳನ್ನು ನೀಡಬಹುದು ಎಂಬ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 58ನೇ ಸಭೆಯಲ್ಲಿ ಗಣ್ಯರು:
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ವಸತಿ ಸಚಿವ ವಿ.ಸೋಮಣ್ಣ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್ಎನ್ ಪ್ರಸಾದ್, ಅಭಿವೃದ್ಧಿ ಆಯುಕ್ತೆ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಐ.ಟಿ. ಬಿ.ಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications