ದಾಂಡೇಲಿಗೆ ಅಂಬಾರಿ ಉತ್ಸವ ಬಸ್ ಓಡಿಸಿ, ಸಚಿವರಿಗೆ ಪತ್ರ
ಬೆಂಗಳೂರಿನಿಂದ ದಾಂಡೇಲಿ ನಗರಕ್ಕೆ ಅಂಬಾರಿ ಉತ್ಸವ ಬಸ್ ಸೇವೆಯನ್ನು ಆರಂಭಿಸಬೇಕು ಎಂದು ಕಾಂಗ್ರೆಸ್ ನಾಯಕ ಆರ್. ವಿ. ದೇಶಪಾಂಡೆ ಸಾರಿಗೆ ಸಚಿವ ಬಿ. ಶ್ರೀರಾಮುಗೆ ಪತ್ರವೊಂದನ್ನು ಬರೆದಿದ್ದಾರೆ.
ಬೆಂಗಳೂರು, ಮಾರ್ಚ್ 05; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) 'ಅಂಬಾರಿ ಉತ್ಸವ' ಎಂಬ ಐಷಾರಾಮಿ ಬಸ್ ಸೇವೆಗಳಿಗೆ ಚಾಲನೆ ನೀಡಿದೆ. ಸದ್ಯ 8 ಮಾರ್ಗದಲ್ಲಿ ಮಾತ್ರ ಈ ಬಸ್‌ಗಳು ಸಂಚಾರ ನಡೆಸುತ್ತಿವೆ. ಹಲವು ಬಸ್‌ಗಳು ಅಂತರಾಜ್ಯದ ಮಾರ್ಗದಲ್ಲಿ ಓಡುತ್ತಿವೆ. ಇವು ವೊಲ್ವೋ ಮಲ್ಟಿ ಆಕ್ಸೆಲ್ ಸ್ಲೀಪರ್ ಕೋಚ್ ಬಸ್‌ಗಳು.
ಕರ್ನಾಟಕದ ವಿವಿಧ ನಗರಗಳ ನಡುವೆ ಅಂಬಾರಿ ಉತ್ಸವ ಬಸ್ ಸೇವೆ ಆರಂಭಿಸಬೇಕು ಎಂಬ ಬೇಡಿಕೆ ಇದೆ. ಕೆಎಸ್‌ಆರ್‌ಟಿಸಿ ಈ ಮಾದರಿಯ 50 ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ. ಸದ್ಯ 15 ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ನಗರಗಳ ನಡುವೆ ಈ ಮಾದರಿ ಬಸ್ ಸಂಚಾರ ನಡೆಸುವ ನಿರೀಕ್ಷೆ ಇದೆ.

ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಹಾಗೂ ಹಳಿಯಾಳದ ಶಾಸಕ ಆರ್. ವಿ. ದೇಶಪಾಂಡೆ ಸಾರಿಗೆ ಸಚಿವ ಬಿ. ಶ್ರೀರಾಮುಗೆ ಪತ್ರವೊಂದನ್ನು ಬರೆದಿದ್ದಾರೆ. 'ಅಂಬಾರಿ ಉತ್ಸವ' ಬಸ್ ಸೇವೆಯನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರಕ್ಕೂ ಕಾರ್ಯಾಚರಣೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ವಿನಂತಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?; ಆರ್. ವಿ. ದೇಶಪಾಂಡೆ ಅವರು ತಮ್ಮ ಪತ್ರದಲ್ಲಿ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲಕರ ಆರಾಮದಾಯಕ ಪ್ರಯಾಣ ಸೌಕರ್ಯ ಒದಗಿಸಲು 'ಅಂಬಾರಿ ಉತ್ಸವ' ಎಂಬ ಹೊಸ ವೊಲ್ವೋ ಮಲ್ಟಿ ಆಕ್ಸೆಲ್ ಸ್ಲಿಪರ್ ಬಸ್ ಸೇವೆಯನ್ನು ಪ್ರಾರಂಭಿಸಿ, ಮುಖ್ಯಮಂತ್ರಿಗಳಿಂದ ಚಾಲನೆ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ನನ್ನ ಮತ ಕ್ಷೇತ್ರವಾದ ದಾಂಡೇಲಿ ತಾಲೂಕು ಪರಿಸರ ಪ್ರವಾಸೋದ್ಯಮಕ್ಕೆ ಹೆಸರಾದ ತಾಲೂಕಾಗಿದ್ದು, ಪ್ರವಾಸೋದ್ಯಮದ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ. ಪ್ರಸ್ತುತ ದೇಶದ ವಿವಿಧೆಡೆಯಿಂದ ಅದರಲ್ಲಿಯೂ ಮುಖ್ಯವಾಗಿ ರಾಜಧಾನಿಯಾದ ಬೆಂಗಳೂರಿನಿಂದ ವಾರಾಂತ್ಯದಲ್ಲಿ ಹಾಗೂ ರಜಾದಿನಗಳಲ್ಲಿ ಸಾವಿರಾರು ಪ್ರಯಾಣಿಕರು ದಾಂಡೇಲಿಗೆ ಆಗಮಿಸುತ್ತಿದ್ದಾರೆ ಎಂದು ಆರ್. ವಿ. ದೇಶಪಾಂಡೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಖಾಸಗಿ ಬಸ್‌ಗಳಲ್ಲಿ, ವಾಹನಗಳಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ರೈಲು ಪ್ರಯಾಣವು ದಾಂಡೇಲಿಗೆ ದೂರವಾಗುವುದರಿಂದ ಅವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಪ್ರಮುಖ ಪ್ರವಾಸಿ ತಾಣಗಳು, ಐತಿಹಾಸಿಕ ದೇಗುಲಗಳು ಹಾಗೂ ಕೈಬೀಸಿ ಕರೆಯುತ್ತಿರುವ ಸಾಹಸಿ ಕ್ರೀಡೆಗಳಿಗೆ ಹೆಸರಾದ ದಾಂಡೇಲಿ ತಾಲೂಕಿಗೆ ಅಂಬಾರಿ ಉತ್ಸವ ಬಸ್ ಸೇವೆ ಕಲ್ಪಿಸಿದರೆ ಪ್ರವಾಸೋದ್ಯಮಕ್ಕೆ ಹೆಚ್ಚು ಕಳೆ ಬರುತ್ತದೆ ಹಾಗೂ ಉತ್ತೇಜನ ಕೊಟ್ಟಂತಾಗುತ್ತದೆ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಅಲ್ಲದೇ ನಿಗಮದ ಆದಾಯದಲ್ಲಿ ಏರಿಕೆ ಕಂಡುಬರುವ ನಿರೀಕ್ಷೆ ಇದೆ. ಪ್ರವಾಸೋದ್ಯಮವನ್ನು ಜೀವನಾಧಾರ ಮಾಡಿಕೊಂಡಿರುವರಿಗೂ ಅನುಕೂಲವಾಗುತ್ತದೆ. ಆದ್ದರಿಂದ ಈ ವಿಷಯವನ್ನು ಪ್ರಾಧಾನ್ಯತೆ ಮೇರೆಗೆ ಪರಿಗಣಿಸಿ, ಕರ್ನಾಟಕದಲ್ಲಿ ಈಗಾಗಲೇ ಪ್ರಾರಂಭಿಸಿರುವ ಅಂಬಾರಿ ಉತ್ಸವ ಬಸ್ ಅನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರಕ್ಕೂ ಕಾರ್ಯಾಚರಣೆಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲು ವಿನಂತಿಸುತ್ತೇನೆ ಎಂದು ಆರ್. ವಿ. ದೇಶಪಾಂಡೆ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದಾರೆ.
ಅಂಬಾರಿ ಉತ್ಸವ ಬಸ್; ಕೆಎಸ್ಆರ್‌ಟಿಸಿ ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಲು ವಿಐ 9600ಎಸ್ ಮಾದರಿಯ ಐಷಾರಾಮಿ ವೊಲ್ವೋ ಬಸ್ ಸೇವೆಯನ್ನು ಆರಂಭಿಸಿದೆ. ಸ್ಲಿಪರ್ ಕೋಚ್‌ನ ಈ ಬಸ್‌ಗಳಿಗೆ ಅಂಬಾರಿ ಉತ್ಸವ ಎಂದು ಹೆಸರಿಡಲಾಗಿದೆ. ಈ ಯೋಜನೆಯಡಿ ಕೆಎಸ್ಆರ್‌ಟಿಸಿ 50 ಬಸ್‌ಗಳನ್ನು ಓಡಿಸಲಿದೆ. ಸದ್ಯ 15 ಬಸ್‌ಗಳ ಸಂಚಾರ ಆರಂಭವಾಗಿದೆ. ಹಲವು ಬಸ್‌ಗಳು ಹೊರ ರಾಜ್ಯಗಳಿಗೆ ಸಂಚಾರ ನಡೆಸುತ್ತಿವೆ. ಬೆಂಗಳೂರು-ಕುಂದಾಪುರ ನಡುವೆ ಸಹ ಅಂಬಾರಿ ಬಸ್ ಸಂಚಾರ ಆರಂಭಿಸಿದೆ.
40 ಸೀಟುಗಳನ್ನು ಹೊಂದಿರುವ ಈ ಬಸ್‌ಗಳು 15 ಮೀಟರ್ ಉದ್ದವಿದೆ. ಬಸ್‌ನ ಮುಂಭಾಗ ಏರೋಡೈನಾಮಿಕ್ ಮೇರುಕೃತಿಯಂತೆ ಇದೆ. ಪ್ಯಾನೊರಮಿಕ್ ವಿಂಡೋಗಳನ್ನು ಈ ಬಸ್‌ಗಳು ಹೊಂದಿದ್ದು, ವಾಹನವು ಪ್ರಯಾಣಿಕರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಈ ಬಸ್‌ಗಳಿಗೆ ಯಾವ ಹೆಸರು ಇಡಬೇಕು? ಎಂದು ಕೆಎಸ್ಆರ್‌ಟಿಸಿ ಜನರನ್ನು ಕೇಳಿತ್ತು. ಅಂಬಾರಿ ಉತ್ಸವ ಎಂಬ ಹೆಸರನ್ನು ಜನರೇ ನೀಡಿದ್ದಾಗಿದೆ.
ಸದ್ಯ ಈ ಬಸ್ ಬೆಂಗಳೂರು-ಸಿಕಂದ್ರಬಾದ್, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ತಿರುವನಂತಪುರಂ, ಬೆಂಗಳೂರು-ಪಣಜಿ, ಬೆಂಗಳೂರು-ಕುಂದಾಪುರ, ಮಂಗಳೂರು-ಪೂನಾ ನಡುವೆ ಸಂಚಾರ ನಡೆಸುತ್ತಿದೆ.












Click it and Unblock the Notifications