ಸೌಜನ್ಯ ಕೊಲೆಗೂ ನಮಗೂ ಸಂಬಂಧವಿಲ್ಲ, ವೀರೇಂದ್ರ ಹೆಗ್ಗಡೆ
ಮಂಗಳೂರು / ಬೆಂಗಳೂರು, ಅ 12: ಕಾಲೇಜು ವಿದ್ಯಾರ್ಥಿನಿ ಸೌಜನ್ಯಳ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಕೊಲೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಹೋದರನ ಪುತ್ರನೇ ನೇರ ಕಾರಣ ಎಂದು ಸೌಜನ್ಯಳ ಪೋಷಕರು ಆರೋಪಿಸಿದ್ದಾರೆ.
ಸೌಜನ್ಯ ಕೊಲೆಯನ್ನು ಮಾಡಿರುವ ಒಬ್ಬ ಆರೋಪಿಯನ್ನು ಪೊಲೀಸರು ಇದುವರೆಗೆ ಬಂಧಿಸಿದ್ದಾರೆ. ಆದರೆ ಅವನನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಲಾಗುತ್ತಿದೆ. ಆದರೆ ಇದರಲ್ಲಿ ಹೆಗ್ಗಡೆಯವರ ತಮ್ಮನ ಮಗನೂ ಭಾಗಿಯಾಗಿದ್ದಾನೆ ಎಂದು ಸೌಜನ್ಯ ಪೋಷಕರು ಆರೋಪಿಸಿದ್ದಾರೆ.
ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇದರಿಂದ ಪ್ರಕರಣದ ಸತ್ಯಾಸತ್ಯತೆ ಹೊರಗೆ ಬರುತ್ತದೆ. ಈ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ಸಾಕ್ಷಿಗಳ ಬಾಯಿ ಮುಚ್ಚಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೂ ಹೋರಾಟ ನಡೆಸದಂತೆ ತಡೆಹಿಡಿಯಲಾಗಿದೆ ಎಂದು ಹಿಂದೂ ಪರ ಸಂಘಟನೆಯ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಆಗ್ರಹಿಸಿದ್ದಾರೆ.
ವೀರೇಂದ್ರ ಹೆಗ್ಗಡೆ ಸ್ಪಷ್ಟನೆ: ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹೆಗ್ಗಡೆ. ಇದೊಂದು ವ್ಯವಸ್ಥಿತ ಪಿತೂರಿ. ಕ್ಷೇತ್ರದ ಅಭಿವೃದ್ದಿ ಮತ್ತು ಜನಪ್ರಿಯತೆಯನ್ನು ಸಹಿಸದ ವ್ಯಕ್ತಿಗಳಿಂದ ನಡೆಯುತ್ತಿರುವ ಕೆಲಸವಿದು.
ನನ್ನ ತಮ್ಮನ ಮಗ ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಹೋದ ವರ್ಷ ಘಟನೆ ನಡೆದ ದಿನ ಕೂಡಾ ಅವನು ಇಲ್ಲಿರಲಿಲ್ಲ. ಹಾಗಿದ್ದಾಗ ಈ ಪ್ರಕರಣದಲ್ಲಿ ಅವನು ಭಾಗಿಯಾಗಿರಲು ಹೇಗೆ ಸಾಧ್ಯ?. ಅವನು ಇನ್ನೂ 30-40 ವರ್ಷ ಬಾಳಿ ಬದುಕ ಬೇಕಾದವನು. ಈ ಆರೋಪದಿಂದ ಅವನ ಮುಂದಿನ ಜೀವನಕ್ಕೆ ತೊಂದರೆಯಾಗುವುದಿಲ್ಲವೇ? ಈ ಘಟನೆಗೆ ಸಂಬಂಧಿಸಿದಂತೆ ನನ್ನ ಮುಂದಾಳುತ್ವದಲ್ಲಿ ಧರ್ಮಸ್ಥಳದ ನಿವಾಸಿಗಳೊಂದಿಗೆ ಬೆಳ್ತಂಗಡಿ ಠಾಣೆಯ ಮುಂದೆ ನಾವು ಪ್ರತಿಭಟನೆ ನಡೆಸಿದ್ದೇವೆ.
ಈ ಎಲ್ಲಾ ಪ್ರಕರಣದ ದಾಖಲೆಗಳು ನಮ್ಮಲ್ಲಿವೆ. ಬೇಕಾಗಿದ್ದಲ್ಲಿ ಮಾಧ್ಯಮಗಳಿಗೆ ಅದನ್ನು ನಾನು ನೀಡಲು ಸಿದ್ದನಿದ್ದೇನೆ. ಈ ಪ್ರಕರಣದ ಸಂಬಂಧ ತನಿಖೆ ಚುರುಕುಗೊಳಿಸುವಂತೆ ಗೃಹ ಇಲಾಖೆಗೆ ನಾವು ಬರೆದ ಪತ್ರ ವ್ಯವಹಾರದ ಪ್ರತಿಯೂ ಇದೆ ಎಂದು ಧರ್ಮಾಧಿಕಾರಿ ಡಾ. ಹೆಗ್ಗಡೆ ಸ್ಪಷ್ಟನೆ ನೀಡಿದ್ದಾರೆ.
ಏನಿದು ಪ್ರಕರಣ? ಧರ್ಮಸ್ಥಳ ಆಸುಪಾಸು ಭಯದ ವಾತಾವರಣವಿದೆಯೇ?

ಸೌಜನ್ಯ ಕೊಲೆ
ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಳನ್ನು ದುರುಳರು ಅಕ್ಟೋಬರ್ 9, 2012ರಂದು ಧರ್ಮಸ್ಥಳದಿಂದ ಎಂಟು ಕಿಲೋಮೀಟರ್ ದೂರದಲ್ಲಿ ಅತ್ಯಾಚಾರವೆಸಗಿ ಭರ್ಭರವಾಗಿ ಹತ್ಯೆಗೈದಿದ್ದರು. ಇವಳು ಗುತ್ತಿಗೆದಾರರೊಬ್ಬಳ ಮಗಳಾಗಿದ್ದು, ಆಕೆಯ ಮನೆ ಬಳಿಯ ಕಾಡಿನಲ್ಲಿ ಗ್ರಾಮಸ್ಥರಿಗೆ ಈಕೆಯ ಮೃತ ದೇಹ ದೊರಕ್ಕಿತ್ತು.

ಒಬ್ಬನ ಬಂಧನ
ಈ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಸಂತೋಷ (34) ಎನ್ನುವ ಒಬ್ಬನನ್ನು ಪೊಲೀಸರು ಬಂಧಿಸಿದ್ದರು. ಮಾನಸಿಕ ಅಸ್ವಸ್ಥನಂತೆ ಕಾಣುತ್ತಿರುವ ಈತನನ್ನು ಮಂಗಳೂರಿನಲ್ಲಿ ವೈದ್ಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೌಜನ್ಯಳ ಶವದ ಮೇಲಿದ್ದ ಉಗುರಿನ ಗುರುತುಗಳು ಮತ್ತು ಈತನ ಉಗುರುಗಳ ಗುರುತು ತಾಳೆಯಾಗುತ್ತದೆ ಎಂದು ಪೊಲೀಸರು ತಿಳಿಸಿದ್ದರು.

ಸಿಬಿಐ ತನಿಖೆ
ಈ ಪ್ರಕರಣವನ್ನು ಸಿಬಿಐಗೆ ವಹಿಸ ಬೇಕೆಂದು ಹಿಂದೂ ಪರ ಸಂಘಟನೆಯ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಆಗ್ರಹಿಸಿದ್ದಾರೆ. ಈಕೆಯ ತಂದೆ, ತಾಯಿ ನೀಡಿದ ದೂರಿನ ಪ್ರಕಾರ ಪೊಲೀಸರು ತನಿಖೆ ನಡೆಸುತ್ತಿಲ್ಲ. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆಂದು ಇಲ್ಲಿನ ಜನತೆಗೆ ತಿಳಿದಿದೆ. ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ. ನಮ್ಮ ಕೋರಿಕೆಗೆ ಸ್ಪಂಧಿಸದಿದ್ದರೆ ಮುಂದಿನ ದಿನದಲ್ಲಿ ತೀವ್ರ ಹೋರಾಟ ನಡೆಸಲಾಗುವುದು. ಧರ್ಮಸ್ಥಳ ಆಸುಪಾಸಿನಲ್ಲಿ ಸುಮಾರು 450ಕ್ಕೂ ಹೆಚ್ಚು ಅಸಹಜ ಸಾವು ಸಂಭಿಸಿದೆ. ಇದರ ತನಿಖೆಯಾಗ ಬೇಕು. ಇಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಮತ್ತು ಜನರು ಭಯದಿಂದ ಬದುಕುತ್ತಿದ್ದಾರೆಂದು ಇವರು ಆರೋಪಿಸಿದ್ದಾರೆ.

ಧರ್ಮಸ್ಥಳ ಗ್ರಾಮದಲ್ಲಿ ಭಯದ ವಾತಾವರಣ
ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಕೊಲೆ ಪ್ರಕರಣ ನಡೆದಿತ್ತು. ಒಂದು ಪ್ರಕರಣದಲ್ಲಿ ಬುದ್ದಿಮಾಂದ್ಯ ಅಣ್ಣ ಮತ್ತು ತಂಗಿಯನ್ನು ಕಲ್ಲಿನಿಂದ ಜಜ್ಜಿ ಕೊಲೆಗಯ್ಯಲಾಗಿತ್ತು. ಇನ್ನೊಂದು ಘಟನೆಯಲ್ಲಿ ಉಜಿರೆ ಕಾಲೇಜಿನಿಂದ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು (ಸೌಜನ್ಯ) ಅಪಹರಿಸಿ ಕೊಲೆ ಮಾಡಲಾಗಿತ್ತು. ಈ ಎರಡು ಘಟನೆ ನಡೆದ ನಂತರ ಧರ್ಮಸ್ಥಳ ಗ್ರಾಮದ ಮನೆಗಳಲ್ಲಿ ರಾತ್ರಿ ಹೊತ್ತು ಬಾಗಿಲು ತಟ್ಟಿ, ವಿಚಿತ್ರವಾಗಿ ಶಬ್ದ ಮಾಡಿ ಭಯದ ವಾತಾವರಣ ಸೃಷ್ಟಿ ಮಾಡುವ ಪ್ರಯತ್ನ ನಡೆದಿತ್ತು. ಸೌಜನ್ಯ ನಾಪತ್ತೆಯಾದ ಕೆಲವೇ ಹೊತ್ತಿನಲ್ಲಿ ಆಕೆಯ ಪೋಷಕರು ಹೆಗ್ಗಡೆಯವರನ್ನು ಭೇಟಿ ಮಾಡಿದ್ದರು.

ದೆವ್ವ, ಭೂತ
ಈ ಎರಡು ಕೊಲೆ ಘಟನೆಯ ನಂತರ ಇಡೀ ಧರ್ಮಸ್ಥಳ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ತುಪ್ಪ ಸುರಿಯುವಂತೆ ಕಿಡಿಗೇಡಿಗಳು ಗ್ರಾಮದಲ್ಲಿ ದೆವ್ವದ ಕಾಟ, ಪಿಶಾಚಿ ಕಾಟ, ಧರ್ಮಸ್ಥಳದಲ್ಲಿ ಅಶಾಂತಿ ಎಂದು ಇಲ್ಲ ಸಲ್ಲದ ಊಹಾಪೋಹಗಳನ್ನು ಹರಿದು ಬಿಟ್ಟಿದ್ದರು. ಬುದ್ದಿಮಾಂದ್ಯ ಜೋಡಿ ಕೊಲೆ ಮತ್ತು ಸೌಜನ್ಯ ಕೊಲೆ, ಈ ಎರಡೂ ಘಟನೆಯನ್ನು ಸಿಬಿಐಗೆ ವಹಿಸಬೇಕೆಂದು ವೀರೇಂದ್ರ ಹೆಗ್ಗಡೆ ಅಂದೇ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಿ ಕೊಳ್ಳಬಹುದಾಗಿದೆ.












Click it and Unblock the Notifications