SM Krishna Death: ಅಣ್ಣಾವ್ರಿಗೆ ಮರು ಜೀವ ಕೊಟ್ಟಿದ್ದೇ ಎಸ್‌ಎಂ ಕೃಷ್ಣ: ಸಾರಾ ಗೋವಿಂದು
ಬೆಂಗಳೂರು, ಡಿಸೆಂಬರ್ 10: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಈ ರಾಜ್ಯ ಕಂಡಂತ, ದೇಶ ಕಂಡಂತ ರಾಜಕಾರಣದಲ್ಲಿ ವಿಶೇಷವಾದ ವ್ಯಕ್ತಿತ್ವ ಹೊಂದಿದ್ದು, ಅವರ ಅಗಲಿಕೆಯಿಂದ ನಷ್ಟವಾಗಿದೆ ಎಂದು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರು ಹೇಳಿದ್ದಾರೆ.
ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಾರಾ ಗೋವಿಂದು ಅವರು, ವರನಟ ಡಾ ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿ ಬರೋಬ್ಬರಿ 108 ದಿನಗಳ ಕಾಲ ಕಾಡಿನಲ್ಲಿಟ್ಟಿದ್ದನು. ಅಣ್ಣಾವ್ರರನ್ನು ಹೊರ ತರುವುದಕ್ಕೆ ಎಸ್.ಎಂ. ಕೃಷ್ಣ ದೊಡ್ಡ ಮಟ್ಟದ ಪ್ರಯತ್ನವನ್ನೇ ಮಾಡಿದರು ಎಂದು ಹಳೆಯ ದಿನಗಳನ್ನು ಸಾರಾ ಗೋವಿಂದು ಅವರು ಸ್ಮರಿಸಿದ್ದಾರೆ.

ರಾಜ್‌ಕುಮಾರ್ ಜೀವಂತವಾಗಿ ಮನೆಗೆ ಬರಲು ಎಸ್.ಎಂ. ಕೃಷ್ಣ ಕಾರಣ ಎಂದಿದ್ದಾರೆ. ಡಾ.ರಾಜ್‌ಕುಮಾರ್‌ರನ್ನು ವೀರಪ್ಪನ್ ಅಪಹರಣ ಮಾಡಿದ ಸಂದರ್ಭದಲ್ಲಿ ಅವರು ಪಟ್ಟಂತಹ ಕಷ್ಟ ತುಂಬಾ ಹತ್ತಿರದಿಂದ ನೋಡಿದ್ದೇನೆ. ಆ ಸಂದರ್ಭದಲ್ಲಿ ಎಲ್ಲರೂ ಶಾಂತಿಯಿಂದ ಇದ್ರೆ ಅಣ್ಣಾವ್ರು ವಾಪಸ್ ಬರುತ್ತಾರೆ ಎಂದು ಪಾರ್ವತಮ್ಮ ಹೇಳಿದ್ದರು. ಎಸ್.ಎಂ. ಕೃಷ್ಣ ಅವರು ಅಂದು ಮುಖ್ಯಮಂತ್ರಿ ಆಗಿದ್ದಕ್ಕೆನೇ ರಾಜ್‌ಕುಮಾರ್ ಅವರು ಜೀವಂತ ಮನೆಗೆ ಬಂದರು. ರಾಜ್‌ಕುಮಾರ್‌ಗೆ ಮರುಜೀವ ತಂದು ಕೊಟ್ಟಿದ್ದು ಎಸ್.ಎಂ. ಕೃಷ್ಣ ಎಂದು ಸ್ಮರಿಸಿದರು.
ನಾನು ಒಂದು ತಿಂಗಳ ಹಿಂದೆ ಎಸ್.ಎಂ. ಕೃಷ್ಣ ಅವರ ಮನೆಗೆ ಹೋಗಿದ್ದೆ, ಒಂದು ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲು ಆಗ ಅವರ ಸ್ಥಿತಿ ನೋಡಿ ಬೇಸರವಾಯಿತು. ನಾನು ಆ ದೇವರಲ್ಲಿ ಕೇಳಿಕೊಂಡಿದ್ದೆ, ದೇವರೆ ಅವರಿಗೆ ಹಿಂಸೆ ಕೊಡಬೇಡ ಆದಷ್ಟು ಬೇಗ ಕರೆದುಕೊಂಡು ಬಿಡು ಎಂದು ಕೋರಿಕೊಂಡಿದ್ದೆ ಎಂದ ಅವರು, ಇಂತಹ ರಾಜಕಾರಣಿ ಸಿಗೋದು ಅಪರೂಪ. ಅವರು ತುಂಬಾ ಶಿಸ್ತು ಅನ್ನು ಪಾಲಿಸುತ್ತಿದ್ದರು. ಅದರಿಂದಲೇ ಕೇಂದ್ರದಲ್ಲಿ ವಿದೇಶಾಂಗ ಸಚಿವರಾದರು, ಅವರನ್ನ ಪಡೆದ ನಾವೇ ಪುಣ್ಯವಂತರು ಎಂದು ಹೇಳಿದರು.
ಅಪಹರಣದಿಂದ ಮುಕ್ತರಾದ್ಮೇಲೆ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅಣ್ಣಾವ್ರಿಗೆ ಅಭಿನಂದನಾ ಕಾರ್ಯಕ್ರಮ ಇಟ್ಟುಕೊಂಡಿದ್ದೇವು. ಆ ಸಂದರ್ಭದಲ್ಲಿ ಎಸ್.ಎಂ ಕೃಷ್ಣಗೆ ಆಹ್ವಾನ ನೀಡಿದ್ದೇವು. ಅಂದು ಅವರ ಮನಸ್ಸಿಗೆ ಏನೋ ಬೇಸರ ಆಗಿತ್ತು ಅಂತ ಕಾಣುತ್ತೆ ಅವರು ಬರಲ್ಲ ಅಂದ್ರು. ನೀವು ಬರಲಿಲ್ಲ ಅಂದರೆ ಕಾರ್ಯಕ್ರಮ ರದ್ದು ಮಾಡುತ್ತೇವೆ ಎಂದು ಹೇಳಿದಾಗ ನಮ್ಮ ಮಾತಿಗೆ ಸ್ಪಂದಿಸಿ ಬಂದರು. ಇಂತಹ ವ್ಯಕ್ತಿಯನ್ನು ರಾಜಕಾರಣದಲ್ಲಿ ಮತ್ತೆ ನೋಡೋಕೆ ಆಗಲ್ಲ ಎಂದು ಸಾರಾ ಗೋವಿಂದು ಅವರು ಹೇಳಿದರು.
ಅಂದು ಅಪಹರಣದ ಸಂದರ್ಭದಲ್ಲಿ ಅಣ್ಣಾವ್ರ ಮಕ್ಕಳು ಮತ್ತು ನಾವೆಲ್ಲರೂ ಎಸ್.ಎಂ. ಕೃಷ್ಣರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವು. ಅಣ್ಣಾವ್ರರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವ ಹೊಣೆ ನಮ್ಮದು ಎಂದರು. ಅದು ಅವರು ಆಡಿದ ಮಾತಿನಂತೆ ಅಣ್ಣಾವ್ರರನ್ನು ಕರೆದುಕೊಂಡು ಬಂದರು. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸರಳ ವ್ಯಕ್ತಿ, ಇಂದು ಅವರು ನಮ್ಮೊಂದಿಗೆ ಇಲ್ಲದೆ ಇರೋದು ಬೇಸರವಿದೆ. ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಸಾರಾ ಗೋವಿಂದು ಅವರು ತಿಳಿಸಿದರು.












Click it and Unblock the Notifications