ಬಾದಾಮಿ: ಕೊಳವೆ ಬಾವಿಗೆ ಬಿದ್ದ ಬಾಲಕ, ರಕ್ಷಣಾ ಕಾರ್ಯ ಜಾರಿ
ಬಾದಾಮಿ,ಆ.3: ಬಿಜಾಪುರದ ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ ನಾಲ್ಕು ವರ್ಷದ ಅಕ್ಷತಾಳ ಘಟನೆ ಮಾಸುವ ಮುನ್ನವೇ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸೂಳಿಕೇರಿಯಲ್ಲಿ ಆರು ವರ್ಷದ ತಿಮ್ಮಣ್ಣ ಎಂಬ ಬಾಲಕ ಕೊಳವೆ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ. ತೀವ್ರಗತಿಯಲ್ಲಿ ರಕ್ಷಣಾ ಕಾರ್ಯ ಜಾರಿಯಲ್ಲಿದ್ದು, ಕೊಳವೆ ಮೂಲಕ ಆಮ್ಲಜನಕ ಪೂರೈಸಲಾಗುತ್ತಿದೆ.
ಕಳೆದ 15 ದಿನಗಳ ಹಿಂದೆ ಕೊರೆಸಿದ್ದ ಸುಮಾರು 300 ಅಡಿ ಆಳದ ಕೊಳವೆ ಬಾವಿಯಲ್ಲಿ 10 ಅಡಿಗಳ ಆಳದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹನುಮಂತಹಟ್ಟಿ ಎಂಬುವರು ಈ ಕೊಳವೆ ಬಾವಿಯನ್ನು ಕೊರೆಸಿದ್ದು, ನೀರು ಬಾರದ ಹಿನ್ನೆಲೆಯಲ್ಲಿ ನಿರುಪಯುಕ್ತ ಎಂದು ಮುಚ್ಚದೆ ಬಿಡಲಾಗಿತ್ತು.
ಹನುಮಂತಹಟ್ಟಿ ಅವರು ತಮ್ಮ ತೋಟದಲ್ಲಿ ಕೊರೆಸಿದ್ದ ಕೊಳವೆ ಬಾವಿಗೆ ಅವರ ಆರು ವರ್ಷದ ತಿಮ್ಮಣ್ಣನೇ ಬಿದ್ದಿರುವುದು ದುರದೃಷ್ಟವಾಗಿದೆ. ಸ್ಥಳದಲ್ಲಿ ಸೂಳಿಕೇರಿ ಗ್ರಾಮಸ್ಥರು ಬೀಡುಬಿಟ್ಟಿದ್ದಾರೆ.

ಖಚಿತ ಮಾಹಿತಿ ಇಲ್ಲ: ಬಾಲಕ ಸದ್ಯಕ್ಕೆ ಎಷ್ಟು ಅಡಿ ಆಳದಲ್ಲಿದ್ದಾನೆ ಇನ್ನೂ ತಿಳಿದು ಬಂದಿಲ್ಲ.
* ಆಮ್ಲಜನಕ ಪೈಪ್ ಹಿಡಿದುಕೊಳ್ಳಲು ಹೋಗಿ ಇನ್ನಷ್ಟು ಆಳಕ್ಕೆ ಕುಸಿದಿದ್ದಾನೆ.
* ಬಾಲಕ ತಿಮ್ಮಣ್ಣ ಸದ್ಯಕ್ಕೆ ಜೀವಂತವಿದ್ದು, ಕೈ ಕಾಲು ಆಡಿಸುತ್ತಿದ್ದಾನೆ.
* ಕೆಮರಾ ಮೂಲಕ ಬಾಲಕನ ಚಟುವಟಿಕೆ ಕಾಣುತ್ತಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಶ್ರೀಕಾಂತ್ ಕುಲಕರ್ಣಿ ಹೇಳಿದ್ದಾರೆ.
* ಹಟ್ಟಿ ಚಿನ್ನದ ಗಣಿಯಿಂದ ರಕ್ಷಣಾ ಕಾರ್ಯಕ್ಕಾಗಿ ತಂಡವೊಂದು ಆಗಮಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಆರ್ ಪಾಟೀಲ್ ಹೇಳಿಕೆ.
* ಮಂಡ್ಯದಿಂದ ಬಾಗಲಕೋಟೆಗೆ ರಾಬೋಟ್ ತಜ್ಞ ಮಂಜೇಗೌಡ ತೆರಳುತ್ತಿದ್ದಾರೆ. ಬೇಗ ಹೋಗಲು ಸರ್ಕಾರದ ನೆರವು ಬೇಡಿದ್ದಾರೆ.












Click it and Unblock the Notifications