ಎಸಿ ಕೋರ್ಟ್‌ಗಳಿಗೆ ಅಲೆಯುತ್ತಿರುವವರಿಗೆ ಸರ್ಕಾರದಿಂದ ಸಿಹಿಸುದ್ದಿ
ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯಗಳಲ್ಲಿ ಇರುವ ತಕರಾರು ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಕಂದಾಯ ಇಲಾಖೆ ಮುಂದಾಗಿದೆ. ಬಾಕಿ ಪ್ರಕರಣಗಳನ್ನೂ ಆರು ತಿಂಗಳೊಳಗೆ ವಿಲೇವಾರಿ ಮಾಡುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳಿಗೆ ಡೆಡ್‌ಲೈನ್ ನೀಡಿದ್ದಾರೆ.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಜೊತೆ ಎಸಿ ಕೋರ್ಟ್ ಗಳಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವರು, ನಾನು ಕಳೆದ ವರ್ಷ ಕಂದಾಯ ಇಲಾಖೆ ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಎಸಿ ನ್ಯಾಯಾಲಯಗಳಲ್ಲಿ 73,682 ತಕರಾರು ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ 33,207 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಲಾಖೆಯು ರೈತರು ಹಾಗೂ ಸಾರ್ವಜನಿಕರು ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲಾಗಿದ್ದು, ಹಲವು ರೈತರಿಗೆ ಈ ಕ್ರಮದಿಂದ ನ್ಯಾಯ ಒದಗಿಸಿ ನೆಮ್ಮದಿ ನೀಡಿರುವ ಸಾರ್ಥಕತೆಯ ಭಾವ ನಮ್ಮಲ್ಲಿದೆ ಎಂದರು.
ಎಸಿ ಕೋರ್ಟ್‌ಗಳಲ್ಲಿರುವ ತಕರಾರು ಪ್ರಕರಣಗಳನ್ನು ಆರು ತಿಂಗಳೊಳಗೆ ವಿಲೇವಾರಿ ಮಾಡಬೇಕು ಎನ್ನುವ ಕಾನೂನಿದೆ. ಆದರೆ, ನಾನು ಸಚಿವನಾದಾಗ ಮೊದಲಿಗೆ ಪ್ರಗತಿ ಪರಿಶೀಲನೆ ನಡೆಸಿದ್ದೆ. ಈ ವೇಳೆ ಐದು ವರ್ಷದ ಹಳೆಯ ಪ್ರಕರಣಗಳು ಸಹ ಇತ್ಯರ್ಥಗೊಳ್ಳದೆ ಬಾಕಿ ಉಳಿದಿದ್ದವು ಎಂದು ಸಚಿವ ಮಾಹಿತಿ ನೀಡಿದರು.

ಇದರಿಂದಾಗಿ ರೈತರು ಸಾಕಷ್ಟು ನೊಂದಿದ್ದರು. ಇದನ್ನು ಮನಗಂಡು ಕಳೆದ ಒಂದು ವರ್ಷದಿಂದ ಅಭಿಯಾನದ ಮಾದರಿಯಲ್ಲಿ ಎಸಿ ನ್ಯಾಯಾಲಯಗಳಲ್ಲಿನ ಬಾಕಿ ಪ್ರಕರಣಗಳ ಇತ್ಯರ್ಥದ ವೇಗ ಹೆಚ್ಚಿಸಲಾಯಿತು ಎಂದರು.
ಇಲಾಖೆಯು ಸಾಗಿಬಂದ ಹಾದಿ ಸಣ್ಣದಿದ್ದು, ಕ್ರಮಿಸಬೇಕಾದ ದೂರ ಇನ್ನೂ ಇದೆ. ಮಾಹಿತಿ ಪ್ರಕಾರ ಇನ್ನೂ 40 ಸಾವಿರ ತಕರಾರು ಕೇಸ್‌ಗಳು ಬಾಕಿ ಇವೆ. ಇವೆಲ್ಲವೂ ಮುಂದಿನ ಆರು ತಿಂಗಳಲ್ಲಿ ಇತ್ಯರ್ಥವಾಗಿರಬೇಕು. ಇಲಾಖೆಯ ಹಲವು ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಆದರೆ ಇನ್ನೂ ಕೆಲವರು ತಮ್ಮ ಮನಸ್ಥಿತಿ ಬದಲಿಸಿಕೊಂಡಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ಬಾಕಿ ಪ್ರಕರಣಗಳಿಗೆ ಮುಕ್ತಿ ನೀಡಬಹುದು ಎಂದು ಕಿವಿಮಾತು ಹೇಳಿದರು.
ರೈತರಿಗೆ ನ್ಯಾಯ ಒದಗಿಸುವುದು ಕಷ್ಟದ ಕೆಲಸವಲ್ಲ. ಒಂದು ವರ್ಷದಲ್ಲಿ ಒಂಬತ್ತು ಬಾರಿ ಉಪ ವಿಭಾಗಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದೆ. ಮುಂದಿನ ತಿಂಗಳ ಮೊದಲ ವಾರವೂ ಮತ್ತೊಂದು ಸಭೆ ನಡೆಸುತ್ತೇನೆ. ಅಷ್ಟರೊಳಗೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಪ್ರಕರಣಗಳನ್ನು ವಿಲೇವಾರಿ ಮಾಡಿರುತ್ತೀರಿ? ಎಂಬುದನ್ನೂ ಪರಿಶೀಲನೆ ನಡೆಸುತ್ತೇನೆ. ಹೀಗಾಗಿ ಅಧಿಕಾರಿಗಳು ತಮ್ಮ ಕೆಲಸಗಳನ್ನು ವೇಗವಾಗಿ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ತಕರಾರು ಕೇಸ್‌ಗಳನ್ನು ಇತ್ಯರ್ಥಗೊಳಿಸಿ, ರೈತರಿಗೆ ಶೀಘ್ರ ನ್ಯಾಯ ಒದಗಿಸಲು ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕುಂದಾಪುರ ಸೇರಿದಂತೆ 11 ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ವಿಶೇಷ ನ್ಯಾಯಾಲಯಗಳಿಗೆ ಚಾಲನೆ ನೀಡಿದ್ದೇವೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.












Click it and Unblock the Notifications