ಮಠಮಾನ್ಯಗಳಿಗೆ ಬೆಂಗಳೂರಿನಲ್ಲಿ 80 ಎಕರೆ ಸರ್ಕಾರಿ ಭೂಮಿ ಹಂಚಿಕೆ: ಸಿಎಂ ಭರವಸೆ
ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿರುವ ವಿವಿಧ ಸಮುದಾಯಗಳ ಮಠಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುಮಾರು 80 ಎಕರೆ ಸರ್ಕಾರಿ ಜಮೀನನ್ನು ವಿವಿಧ ಸಮಾಜದ ಮಠಮಾನ್ಯಗಳಿಗೆ ಹಂಚುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿದ್ದು, ವಿವಿಧ ಸಮಾಜದ ಸ್ವಾಮೀಜಿಗಳು ಕೋರಿದಂತೆ ಸಮಾಜದ ಅಭಿವೃದ್ಧಿಗೆ ಅನುದಾನವನ್ನು ನೀಡಲು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಹಾಗೂ ಶಾಖಾಮಠ ಮತ್ತು ಬೆಂಗಳೂರು ಭಕ್ತರ ಭಂಡಾರದ ಕುಟೀರ ಲೋಕಾರ್ಪಣೆ ಸಮಾರಂಭದಲ್ಲಿ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಿದ್ದಾರೆ.
ಕಾಗಿನೆಲೆ ಗುರುಪೀಠದ ಶಾಖಾಮಠದ ಭಕ್ತರ ಭಂಡಾರದ ಕುಟೀರಕ್ಕೆ ಹಿಂದೆ ನಾನೇ ಶಂಕುಸ್ಥಾಪನೆ ಮಾಡಿದ್ದೆ. ಇಂದು ನಾನೇ ಉದ್ಘಾಟನೆ ಮಾಡುತ್ತಿರುವುದು ನನಗೆ ಸಂತಸ ನೀಡಿದೆ. ಕಾಗಿನೆಲೆ ಗುರುಪೀಠದ ಸ್ವಾಮಿಗಳು ಶಾಖಾಮಠದ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. 10 ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಒಂದು ಎಕರೆ ಜಾಗವನ್ನು ಮಹೇಶ್ ಅವರು ಕೊಟ್ಟಿದ್ದು ಶ್ಲಾಘನೀಯ. ಅವರಿಗೆ ಎಲ್ಲರ ಪರವಾಗಿ ಧನ್ಯವಾದಗಳು ಎಂದಿದ್ದಾರೆ.

ಕಾಗಿನೆಲೆ ಗುರುಪೀಠದ ನಿರಂಜನಾನಂದ ಸ್ವಾಮೀಜಿಯವರು ಯಾವುದೇ ಕಟ್ಟಡಗಳನ್ನು ಅತ್ಯಂತ ಕ್ಷಿಪ್ರವಾಗಿ ಕಟ್ಟುತ್ತಾರೆ. ಎರಡೇ ವರ್ಷಗಳಲ್ಲಿ ಭಕ್ತರಿಂದ ವಂತಿಗೆ ಪಡೆದು ನಿರ್ಮಾಣ ಮಾಡಿದ್ದಾರೆ. ಇದು ಅವರ ಕಾರ್ಯದಕ್ಷತೆಗೆ ಸಾಕ್ಷಿ. ಸಚಿವ ಬೈರತಿ ಸುರೇಶ್ ಅವರು 50 ಲಕ್ಷ ರೂಪಾಯಿಗಳ ದೇಣಿಗೆ ನೀಡಿದ್ದು, ಈ ಕಾರ್ಯಕ್ಕೆ ವಂತಿಗೆ ನೀಡಿದ ಎಲ್ಲರಿಗೂ ಧನ್ಯವಾದಗಳು. ಕುಟೀರವನ್ನು ನಿರ್ಮಾಣ ಮಾಡಲು ಎಲ್ಲರ ಸಹಾಯ ಪಡೆದಿದ್ದಾರೆ. ಸುಮಾರು 4 ಕೋಟಿ ರೂಪಾಯಿಯಷ್ಟು ಹಣವನ್ನು ವೆಚ್ಚ ಮಾಡಿದ್ದು, ಇತರರು ವಸ್ತುಗಳ ರೂಪದಲ್ಲಿ ದೇಣಿಗೆ ನೀಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಮಠಗಳು ಸರ್ಕಾರದಿಂದ ಬೆಳೆಯುವುದಿಲ್ಲ
ಮಠಮಾನ್ಯಗಳು ಬೆಳೆಯಬೇಕಾದರೆ ಜನರಿಂದ ಮಾತ್ರವೇ ಸಾಧ್ಯ. ಒಂದು ವೇಳೆ ಸರ್ಕಾರದ ಮೇಲೆ ಅವಲಂಬಿತವಾದರೆ ಮಠಗಳು ಬೆಳೆಯಲು ಸಾಧ್ಯವಿಲ್ಲ. 1992ರಲ್ಲಿ ಪ್ರಾರಂಭವಾದ ಮಠವನ್ನು ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 25 ಲಕ್ಷ ರೂಪಾಯಿ ನೀಡಲು ಮುಂದಾದಾಗ, ಅದನ್ನು ನಿರಾಕರಿಸಲಾಗಿತ್ತು. ಉದ್ಯಮಿ ಹರಿ ಖೋಡೆಯವರು ಈ ಮಠ ಕುರುಬರ ಮಠವಲ್ಲ, ದಲಿತರು, ಅಲ್ಪಸಂಖ್ಯಾತರು ಹಾಗೂ ಮಠವನ್ನು ಹೊಂದಿಲ್ಲದವರಿಗೆ ಸೇರಿದ ಮಠ ಎಂದು ಘೋಷಿಸಿದ್ದರು. ಜನರಲ್ಲಿ ಜಾಗೃತಿ ಮೂಡಿಸಲು ಮಠದ ಅಗತ್ಯವಿದೆ. ಮಠಗಳಿಲ್ಲದೆ ಹೋದರೆ ಶಿಕ್ಷಣ, ಆರೋಗ್ಯ, ಸಂಘಟನೆ ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
34 ಕೋಟಿ ವೆಚ್ಚದಲ್ಲಿ ಕುರುಬರ ಸಂಘದ ನೂತನ ಕಟ್ಟಡ
ಕಾಗಿನೆಲೆ ಮಹಾಸಂಸ್ಥಾನದ ಪೀಠದ ವತಿಯಿಂದ ಸಮಾಜಮುಖಿ ಕೆಲಸಗಳಾಗುತ್ತಿರುವುದು ಶ್ಲಾಘನೀಯ. ಇದಕ್ಕೆ ಶ್ರಮಿಸುತ್ತಿರುವ ಜಗದ್ಗುರು ನಿರಂಜನಾನಂದ ಸ್ವಾಮೀಜಿ ಹಾಗೂ ಶಾಖಾಮಠದ ಸ್ವಾಮೀಜಿಗಳಿಗೆ ಅಭಿನಂದನೆಗಳು. ಮೈಸೂರಿನಲ್ಲಿ ಯಾಂದಳ್ಳಿ ಗ್ರಾಮದಲ್ಲಿ 12 ಎಕರೆ ಜಾಗವನ್ನು ನೀಡಲಾಗಿದ್ದು, ಭವನ ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು. ಬೆಂಗಳೂರಿನ ಬನಶಂಕರಿಯಲ್ಲಿ ಕಾನೂನು ಕಾಲೇಜು ಮತ್ತು ಯುಪಿಎಸ್‌ಸಿ ತರಬೇತಿಗಾಗಿ ಕಟ್ಟಡವನ್ನು ಈಗಾಗಲೇ ನಿರ್ಮಿಸಲಾಗಿದೆ. ಕುರುಬರ ಸಂಘದ ನೂತನ ಕಟ್ಟಡ ನಿರ್ಮಾಣವನ್ನು 34 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮೈಸೂರು ಜಿಲ್ಲೆಯಲ್ಲಿ 300 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಮತ್ತು ಯುಪಿಎಸ್‌ಸಿ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿರುವ ಶ್ರೀಕಾಗಿನೆಲೆ ಗುರುಪೀಠಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಸಿದ್ದರಾಮಯ್ಯ ಅಭಯ ನೀಡಿದ್ದಾರೆ.












Click it and Unblock the Notifications