ಎಡವದೇ ನಾಲ್ಕು ಕಿ.ಮೀ. ನಡೆದುಕೊಂಡು ಹೋಗಿ.. ಬೊಮ್ಮಾಯಿ, ಯಡಿಯೂರಪ್ಪಗೆ ಸಿದ್ದರಾಮಯ್ಯ ಸವಾಲ್
ಬೆಂಗಳೂರು, ಅಕ್ಟೋಬರ್ 12: ಜನಸಂಕಲ್ಪ ಯಾತ್ರೆ ನಡೆಸುತ್ತಿರುವವರು ಎಡವದೇ 4ಕಿ.ಮೀ. ನಡೆದುಕೊಂಡೇ ಹೋಗಿ ಮತ್ತು ಸಿದ್ದರಾಮಯ್ಯ ಹೆಸರೆತ್ತದೇ ಐದು ನಿಮಿಷ ಭಾಷಣ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಜನಸಂಕಲ್ಪ ಯಾತ್ರೆಯಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್, ರಾಹುಲ್ ಗಾಂಧಿ ಅವರ ವಿರುದ್ಧ ಮಾತನಾಡಿದ್ದರು. ಈ ಬಗ್ಗೆ ಸರಣಿ ಟ್ವೀಟ್ ಮೂಲಕ ತಿರುಗೇಟು ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಕಾರು ಜೀಪು ಬಿಟ್ಟು ನಾಲ್ಕು ಕಿ.ಮೀ. ಎಡವದೇ ನಡೆದುಕೊಂಡು ಹೋಗಿ ಮತ್ತು ಸಿದ್ದರಾಮಯ್ಯ ಎಂಬ ಹೆಸರೆತ್ತದೇ ಐದು ನಿಮಿಷ ಭಾಷಣ ಮಾಡಿ ತೋರಿಸಿ ಎಂದು ಅವರು ಹೇಳಿದ್ದಾರೆ. ಜತೆಗೆ #ಬಡಾಯಿಬೊಮ್ಮಾಯಿ ಹ್ಯಾಶ್‌ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಜನಸಂಕಲ್ಪ ಯಾತ್ರೆ ಕುರಿತು ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿಶ್ವಗುರು ಅಲ್ಲ, ಪುಕ್ಕಲು ಗುರು. ಅವರಿಗೆ ಧೈರ್ಯವಿದ್ದರೆ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಹೇಳಿ?. ಜನಸಂಕಲ್ಪ ಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂಟಿಯಾಗಿ ಯಾತ್ರೆ ಹೊಗಲು ಧೈರ್ಯ ಇಲ್ಲ. ಹೋದರೆ ಜನ ಕಲ್ಲು ಹೊಡೆಯುತ್ತಾರೋ ಎಂಬ ಭಯ ಇದೆ. ಹೀಗಾಗಿಯೇ ರಕ್ಷಣೆಗಾಗಿ ಬಿ.ಎಸ್.ಯಡಿಯೂರಪ್ಪ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಕುಟುಕಿದರು.
ನಿಮ್ಮ ದ್ರೋಹ ಜನರಿಗೆ ಗೊತ್ತಿದೆ
ಮುಖ್ಯಮಂತ್ರಿ ಸ್ಥಾನವನ್ನು ಕಿತ್ತುಕೊಂಡಾಗ ಬಹಿರಂಗವಾಗಿಯೇ ಬಿ.ಎಸ್.ಯಡಿಯೂರಪ್ಪ ಅವರು ಕಣ್ಣೀರು ಹಾಕಿದ್ದನ್ನು ರಾಜ್ಯದ ಜನ ನೋಡಿದ್ದಾರೆ. ಅವರ ಬೆನ್ನಿಗೆ ಇರಿದವರು ಯಾರು ಎನ್ನುವುದೂ ಜನರಿಗೆ ಗೊತ್ತಿದೆ. ಯಡಿಯೂರಪ್ಪನವರನ್ನು ಕರೆದುಕೊಂಡು ಬಂದ ಕೂಡಲೇ ಜನ ನಿಮ್ಮ ದ್ರೋಹವನ್ನು ಮರೆಯಲಾರರು ಎಂದು ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿ ಕಾರಿದರು.

ನಿಮ್ಮ ಪಕ್ಷದ ಶಾಸಕರೇ ಆದ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳುವಂತೆ ಬಸವರಾಜ ಬೊಮ್ಮಾಯಿ ಅವರೊಬ್ಬ ಎರಡೂವರೆ ಸಾವಿರ ಕೋಟಿ ರೂಪಾಯಿಯ ಪೇಸಿಎಂ. ಹೈಕಮಾಂಡ್ ಗೆ ಸರಿಯಾಗಿ ಕಂತು ಪಾವತಿಯಾದರೆ ಮಾತ್ರ ಅವರು ಸುರಕ್ಷಿತ. ತಪ್ಪಿದರೆ ಮನೆಗೆ ಎಂದು ಅವರೇ ಹೇಳಿದ್ದಾರೆ ಎಂದರು.
ಬಿಎಸ್‌ವೈ ಜೈಲುಪಾಲಾಗದಂತೆ ನೋಡಿಕೊಳ್ಳಿ
ರಾಹುಲ್ ಗಾಂಧಿಯವರನ್ನು ಬಚ್ಚಾ ಎಂದು ಹೇಳುವ ಬಿ.ಎಸ್.ಯಡಿಯೂರಪ್ಪನವರು ಪಾಪ ಯಾರೋ ಬರೆದುಕೊಟ್ಟದ್ದನ್ನು ಓದಿ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅವರು ಈ ರೀತಿ ಕಾಲ ವ್ಯರ್ಥ ಮಾಡುವುದರ ಬದಲಿಗೆ ಒಳ್ಳೆಯ ವಕೀಲರ ಜೊತೆ ಸಮಾಲೋಚಿಸಿ ಮತ್ತೊಮ್ಮೆ ಜೈಲು ಪಾಲಾಗದಂತೆ ನೋಡಿಕೊಳ್ಳುವುದು ಒಳ್ಳೆಯದು ಎಂದು ತಿರುಗೇಟು ನೀಡಿದರು.

ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಿದ ಮಂಡಲ್ ವರದಿಯಿಂದ ಹಿಡಿದು ಇಲ್ಲಿಯ ವರೆಗೆ ಮೀಸಲಾತಿಯನ್ನು ಅಡಿಯಿಂದ ಮುಡಿವರೆಗೆ ವಿರೋಧಿಸುತ್ತಾ ಬಂದಿರುವ ಕೇಂದ್ರ ಬಿಜೆಪಿಯ ಡಿಎನ್ಎ ದಲ್ಲಿಯೇ ಮೀಸಲಾತಿಗೆ ವಿರೋಧ ಇದೆ. ಈ ನಾಲ್ಕು ದಿನಗಳ ನಾಟಕದ ಮಾತುಗಳನ್ನು ನಂಬುವಷ್ಟು ಜನ ಮೂರ್ಖರಲ್ಲ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.












Click it and Unblock the Notifications