ಶಿಗ್ಗಾಂವಿ ಉಪ ಚುನಾವಣೆ: ಭರತ್ ಬೊಮ್ಮಾಯಿ ಬಳಿ ಇದೆ ಇಷ್ಟು ಕೋಟಿ ರೂ. ಆಸ್ತಿ!
ಕುಟುಂಬ ರಾಜಕೀಯದ ಬಗ್ಗೆ ಮಾತನಾಡುತ್ತಲ್ಲೇ ಬಿಜೆಪಿ ಕುಟುಂಬ ರಾಜಕೀಯಕ್ಕೆ ಸೈ ಅನ್ನುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆ ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆ. ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಯಲ್ಲಿ ಈ ಬಾರಿ ಭರತ್ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಭರತ್ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ ಮಗ. ಭರತ್ ಬೊಮ್ಮಾಯಿ ಅವರು ಉದ್ಯಮಿ ಸಹ ಹೌದು ಅವರ ಬಳಿ ಎಷ್ಟು ಕೋಟಿ ಆಸ್ತಿ ಇದೆ ಎನ್ನುವ ವಿವರ ಇಲ್ಲಿದೆ.
ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಭರತ್ ಬೊಮ್ಮಾಯಿ ಅವರು ಈ ಬಾರಿ ಚುನಾವಣಾ ಕಣದಲ್ಲಿ ಇದ್ದಾರೆ. ಇದು ಅವರ ಪ್ರಥಮ ಚುನಾವಣೆಯೂ ಹೌದು ಅವರು ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಆಸ್ತಿ ವಿವರವನ್ನು ಗುರುವಾರ ನಾಮಪತ್ರ ಸಲ್ಲಿಸುವ ವೇಳೆ ಘೋಷಿಸಿಕೊಂಡಿದ್ದಾರೆ.

ಭರತ್ ಬಳಿ ಒಟ್ಟು 16.17 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಅವರು ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ಶಿಗ್ಗಾಂವಿ ಚುನಾವಣಾಧಿಕಾರಿಗೆ ನಾಮಪತ್ರದೊಂದಿಗೆ ಸಲ್ಲಿಕೆ ಮಾಡಲಾಗಿರುವ ಅಫಿಡವಿಟ್‌ನಲ್ಲಿ ಆಸ್ತಿ ವಿವರ ಇದೆ. ಸ್ಥಿರಾಸ್ತಿ ಮತ್ತು ಚರಾಸ್ತಿ ವಿವರ ಸಲ್ಲಿಸಲಾಗಿದೆ. ಒಟ್ಟು ಆಸ್ತಿ 16.17 ಕೋಟಿ ರೂಪಾಯಿ ಇದೆ. 2.03 ಲಕ್ಷ ನಗದು ಹಣ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಭರತ್ ಅವರು ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಹಾಗೂ ಹಣಕಾಸು ಸಂಸ್ಥೆಗಳಲ್ಲಿ 4.05 ಲಕ್ಷ ನಿಶ್ಚಿತ ಠೇವಣಿ ಇರಿಸಿದ್ದಾರೆ. ಸೇವಿಂಗ್ ಅಕೌಂಟ್‌ನಲ್ಲಿ 1.19 ಕೋಟಿ ರೂಪಾಯಿ ಇದೆ. ಸಾರ್ವಜನಿಕ ಕಂಪನಿಗಳಲ್ಲಿ 1.74 ಲಕ್ಷ ರೂಪಾಯಿ ಇದ್ದರೆ, ಖಾಸಗಿ ಕಂಪನಿಗಳಲ್ಲಿ 50,000 ಸಾವಿರ ರೂಪಾಯಿ ಇದೆ. ಶೇರಿಂಗ್ ಬಂಡವಾಳದಲ್ಲಿ 1.23 ಕೋಟಿ ರೂಪಾಯಿ ಹಾಕಿದ್ದಾರೆ.
ಗೋಲ್ಡ್ ಚಿಟ್ ಫಂಡ್‌ನಲ್ಲಿ 70 ಸಾವಿರ ಹಾಗೂ ಮ್ಯೂಚುವಲ್ ಫಂಡ್‌ನಲ್ಲಿ 10.20 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಇವರ ಬಳಿ ಇರುವ ಚಿನ್ನಾಭರಣದ ಮೌಲ್ಯವು 81.61 ಲಕ್ಷ ರೂಪಾಯಿ. ಬೆಂಗಳೂರಿನ ಆರ್.ಟಿ ನಗರದಲ್ಲಿ ಒಂದು ಮನೆ ಹಾಗೂ ಸೆಂಚುರಿ ಎಥೋಸ್ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್ ಸಹ ಇದೆ. ಆದರೆ, ಯಾವುದೇ ಸ್ವಂತ ವಾಹನವಿಲ್ಲ ಎಂದಿದ್ದಾರೆ.
ಮಗನಿಗೆ ಟಿಕೆಟ್ ಬೇಡ ಅಂದಿದ್ರು: ಇನ್ನು ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಅವರ ಮಗನಿಗೆ ಟಿಕೆಟ್ ಕೊಡುವುದು ಬೇಡ ಎಂದೇ ಹೇಳಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ಮೂರೂ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದೇವೆ ಎಂದೂ ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚೆನ್ನಪಟ್ಟಣದಲ್ಲೂ ಸಹ ವಾತಾವರಣ ಚೆನ್ನಾಗಿದೆ. ಅಲ್ಲಿಯೂ ಸಹ ಗೆಲ್ಲುವ ವಿಶ್ವಾಸವಿದೆ. ಪಕ್ಷದ್ರೋಹ ಮಾಡಿದವರ ವಿರುದ್ಧ ಆಕ್ರೋಶ ಇದೆ. ಚೆನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿಯವರು ಅವರ ಮಗನಿಗೆ ಟಿಕೆಟ್ ಬೇಡ ಎಂದು ಹೇಳಿದ್ದರು. ಆದರೆ, ಕೇಂದ್ರದಿಂದ (ಬಿಜೆಪಿ ಹೈಕಮಾಂಡ್)ನಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೇಂದ್ರದ ನಾಯಕರು ಸ್ಥಳೀಯ ವರದಿ ಆಧಾರದ ಮೇಲೆ ಒತ್ತಾಯ ಮಾಡಿ ಬೊಮ್ಮಾಯಿ ಮಗನಿಗೆ ಟಿಕೆಟ್ ಕೊಟ್ಟಿದ್ದಾರೆ. ಹೀಗಾಗಿ, ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಬೇಕಾಗುತ್ತೆ ಎಂದು ಹೇಳಿದ್ದಾರೆ.












Click it and Unblock the Notifications