ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿಗಳ ಸುರಕ್ಷತೆ: ವರದಿ ಕೇಳಿದ ಮಹಿಳಾ ಆಯೋಗ
ಬೆಂಗಳೂರು, ಆಗಸ್ಟ್ 19: ಕೋಲ್ಕತ್ತಾದ ಆರ್. ಜಿ. ಕರ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸಂಬಂಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಹಿಳಾ ಸಿಬ್ಬಂದಿಗಳ ಸುರಕ್ಷತೆಯ ಕುರಿತು ಚರ್ಚೆಗಳು ಆರಂಭವಾಗಿವೆ. ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ವರದಿಯೊಂದನ್ನು ಕೇಳಿದೆ.
ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಹಾಗೂ ಕಾಲೇಜುಗಳ ಮಹಿಳಾ ಸಿಬ್ಬಂದಿ, ವೈದ್ಯರು, ವಿದ್ಯಾರ್ಥಿಗಳ ರಕ್ಷಣೆಗಾಗಿ ತೆಗೆದುಕೊಳ್ಳಲಾಗಿರುವ ಭದ್ರತಾ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಸೂಚಿಸಿದ್ದಾರೆ. ಈ ಕುರಿತು ಪತ್ರವನ್ನು ಬರೆದಿದ್ದಾರೆ.

ಪತ್ರದ ವಿವರ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ/ ಖಾಸಗಿ ಆಸ್ಪತ್ರೆ ಹಾಗೂ ಕಾಲೇಜುಗಳಲ್ಲಿ ಮಹಿಳಾ ವೈದ್ಯರು/ ಸಿಬ್ಬಂದಿ/ ವಿದ್ಯಾರ್ಥಿಗಳ ರಕ್ಷಣೆಗಾಗಿ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ನೀಡುವ ಕುರಿತು ಎಂಬ ವಿಷಯ ಒಳಗೊಂಡಿದೆ.
ಪತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ/ ರಾಜ್ಯದಲ್ಲಿ, ಶಾಲಾ, ಕಾಲೇಜು, ವಿಶ್ವವಿದ್ಯಾಲಯ ಹಾಗೂ ಸರ್ಕಾರಿ/ ಖಾಸಗಿ ಆಸ್ಪತ್ರೆಗಳಲ್ಲಿ ಮಹಿಳೆಯರು/ ಹೆಣ್ಣು ಮಕ್ಕಳು ಮತ್ತು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ, ಕೊಲೆ, ದೌರ್ಜನ್ಯಗಳ ಘಟನೆಗಳು ವರದಿಯಾಗುತ್ತಿದೆ.
ಈ ಸಂಬಂಧ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ರಾಜ್ಯದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಮುಂದಿನ ಭವಿಷ್ಯದ ಬಗ್ಗೆ ಚಿಂತನೆ ನಡೆಸಲು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಅರಿವು ಕಾರ್ಯಕ್ರಮ ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಪಡೆಯನ್ನು ರಚಿಸಿ, ಪ್ರತಿ ತಿಂಗಳಿಗೊಮ್ಮೆ ಎಲ್ಲಾ ಕಾಲೇಜು/ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ, ಅಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ, ವರದಿಯನ್ನು ಸಿದ್ಧಪಡಿಸಿ, ಮುಂದಿನ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಹಾಗೂ ಕಾಲೇಜು ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕರನ್ನು ಒಳಗೊಂಡ ಕಾರ್ಯಪಡೆಯನ್ನು ರಚಿಸಿ, ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ನಡೆಯದಂತೆ ಮುಂಜಾಗ್ರತಾ ಕ್ರಮವಹಿಸಿ, ತಮ್ಮ ಜಿಲ್ಲಾ ವ್ಯಾಪ್ತಿಯಡಿ ಬರುವ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳ ಮುಖ್ಯಸ್ಥರುಗಳಿಗೆ ಸುತ್ತೋಲೆ ಹೊರಡಿಸಿ, ಮಾರ್ಗದರ್ಶನ ನೀಡಲು ತಿಳಿಸಲಾಗಿತ್ತು ಹಾಗೂ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಲು ಕೋರಲಾಗಿತ್ತು. ಆದರೆ ಈವರೆವಿಗೂ ಯಾವುದೇ ಕ್ರಮವಹಿಸಿದ ಬಗ್ಗೆ ವರದಿಯಾಗಿರುವುದಿಲ್ಲ.
ದಿನಾಂಕ 09/08/2024ರಂದು ಕೋಲ್ಕತ್ತಾದಲ್ಲಿ ಮಹಿಳಾ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ಇಡೀ ದೇಶವೇ ಬೆಚ್ಚಿಬೀಳುವಂತಾಗಿದೆ. ಇದೊಂದು ಹೀನಾಯ ಕೃತ್ಯವಾಗಿದ್ದು, ಸದರಿ ಕೃತ್ಯವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಖಂಡಿಸುತ್ತದೆ.
ಈ ಸಂಬಂಧ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ/ ಖಾಸಗಿ ಆಸ್ಪತ್ರೆಗಳು, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರು/ ವಿದ್ಯಾರ್ಥಿನಿಯರು/ ಮಹಿಳಾ ವೈದ್ಯರು/ ಶುಶೂಶಕಿಯರು, ಇವರುಗಳ ರಕ್ಷಣೆ ಬಗ್ಗೆ ಜಿಲ್ಲಾ ಮಟ್ಟದಲ್ಲಿ ತೆಗೆದುಕೊಂಡ ಕ್ರಮದ ವರದಿಯನ್ನು ಈ ಕೂಡಲೇ ಆಯೋಗಕ್ಕೆ ಕಳುಹಿಸಲು ಹಾಗೂ ಜಿಲ್ಲೆಯಲ್ಲಿರುವ ಮಹಿಳಾ ವೈದ್ಯರು, ಶುಶ್ರೂಶಕಿಯವರ ರಕ್ಷಣೆಗೆ ಕೂಡಲೇ ಕ್ರಮವಹಿಸಲು ಮತ್ತು ಈ ಹಿಂದೆ ತಿಳಿಸಿದಂತೆ, ವಿಶೇಷ ಕಾರ್ಯ ಪಡೆಯನ್ನು ಜಿಲ್ಲಾ ಮಟ್ಟದಲ್ಲಿ ರಚಿಸಿ, ಸದರಿ ಕಾರ್ಯಪಡೆಯಲ್ಲಿ ವೈದ್ಯರನ್ನೊಳಗೊಂಡ ಅಧಿಕಾರಿಗಳನ್ನು ಸೇರಿಸಿ, ಈ ಬಗ್ಗೆ ಹೆಚ್ಚಿನ ನಿಗಾ ಇಡಲು ತಿಳಿಸಲಾಗಿದೆ. ತೆಗೆದುಕೊಂಡ ಕ್ರಮದ ಬಗ್ಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ವರದಿ ಸಲ್ಲಿಸಲು ಕೋರಲಾಗಿದೆ ಎಂದು ಪತ್ರದಲ್ಲಿ ಸೂಚಿಸಲಾಗಿದೆ.












Click it and Unblock the Notifications