ಕರ್ನಾಟಕ ಹೈಕೋರ್ಟ್ ನಾಲ್ವರು ನ್ಯಾಯಾಧೀಶರ ವರ್ಗಾವಣೆಗೆ ಕೊಲಿಜಿಯಂ ಶಿಫಾರಸು
ಬೆಂಗಳೂರು, ಏಪ್ರಿಲ್ 21: ಭಾರತದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಏಳು ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಗೆ ಶಿಫಾರಸು ಮಾಡಿದೆ. ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಾಧೀಶರನ್ನು ದೇಶದ ವಿವಿಧ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಲು ಶಿಫಾರಸು ಮಾಡಲಾಗಿದೆ. ಕೇಂದ್ರ ಸರ್ಕಾರದ ಒಪ್ಪಿಗೆ ಬಳಿಕ ಈ ಕುರಿತು ಅಧಿಕೃತ ಆದೇಶ ಪ್ರಕಟವಾಗಲಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅಧ್ಯಕ್ಷತೆಯ ಕೊಲಿಜಿಯಂ ಶಿಫಾರಸು ಕುರಿತು ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದೆ.
ನ್ಯಾಯಾಂಗದ ಆಡಳಿತ ಗುಣಮಟ್ಟ ಬಲಪಡಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಏಪ್ರಿಲ್ 15, 19ರ ಸಭೆಯ ತೀರ್ಮಾನದಂತೆ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರ ವರ್ಗಾವಣೆಗೆ ಶಿಫಾರಸು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕರ್ನಾಟಕ ಹೈಕೋರ್ಟ್‌ನ ನಾಲ್ವರು ಸೇರಿ ಒಟ್ಟು 7 ನ್ಯಾಯಾಧೀಶರ ವರ್ಗಾವಣೆಗೆ ಶಿಫಾರಸು ಮಾಡಲಾಗಿದೆ.

ಯಾವ-ಯಾವ ನ್ಯಾಯಾಧೀಶರು?; ಕರ್ನಾಟಕ ಹೈಕೋರ್ಟ್‌ನ ನ್ಯಾ. ಹೇಮಂತ್ ಚಂದನಗೌಡರ್ ಅವರನ್ನು ಮದ್ರಾದ್ ಹೈಕೋರ್ಟ್‌ಗೆ. ನ್ಯಾ. ಕೃಷ್ಣ ನಟರಾಜನ್ ಅವರನ್ನು ಕೇರಳ ಹೈಕೋರ್ಟ್‌ಗೆ. ನ್ಯಾ. ನೆರನಹಳ್ಳಿ ಶ್ರೀನಿವಾಸನ್ ಸಂಜಯ್ ಗೌಡ ಅವರನ್ನು ಗುಜರಾತ್ ಹೈಕೋರ್ಟ್ ಮತ್ತು ನ್ಯಾ. ದೀಕ್ಷಿತ್ ಕೃಷ್ಣ ಶ್ರೀಪಾದ್ ಅವರನ್ನು ಓಡಿಶಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಶಿಫಾರಸು ಮಾಡಲಾಗಿದೆ.
ತೆಲಂಗಾಣ ಹೈಕೋರ್ಟ್‌ನಿಂದ ನ್ಯಾ. ಪೆರಗು ಶ್ರೀ ಸುಧಾ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ. ತೆಲಂಗಾಣ ಹೈಕೋರ್ಟ್‌ನ ನ್ಯಾ. ಕಸೋಜು ಸುರೇಂದರ್ ಅಲಿಯಾಸ್ ಕೆ. ಸುರೇಂದರ್ ಅವರನ್ನು ಮದ್ರಾಸ್ ಹೈಕೋರ್ಟ್‌ಗೆ ಮತ್ತು ಆಂಧ್ರ ಪ್ರದೇಶ ಹೈಕೋರ್ಟ್‌ನ ನ್ಯಾ. ಕುಂಭಾಜದಲ ಮನ್ಮಧ ರಾವ್ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಶಿಫಾರಸು ಸಲ್ಲಿಕೆಯಾಗಿದೆ.
ಭಾರತದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆ, ನೇಮಕದ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಇದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕ ಬಳಿಕ ಅದನ್ನು ಆದೇಶವಾಗಿ ಹೊರಡಿಸಲಾಗುತ್ತದೆ. ಆದರೆ
ಕೊಲಿಜಿಯಂ ನೇಮಕ, ವರ್ಗಾವಣೆಗೆ ಒಪ್ಪಿಗೆ ನೀಡದಿದ್ದರೆ ಅದಕ್ಕೆ ನೀಡಿದ ಕಾರಣವನ್ನು ಬಹಿರಂಗಪಡಿಸಲಾಗದು. ಈ ಹಿಂದೆಯೇ ದೆಹಲಿ ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಗೆ ಶಿಫಾರಸು ಮಾಡಿದ ಹೆಸರುಗಳನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ತಿರಸ್ಕರಿಸಲು ನೀಡಿರುವ ಕಾರಣಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಆಗದು ಎಂದು ದೆಹಲಿ ಹೈಕೋರ್ಟ್ ಹೇಳಿತ್ತು.
ಸುಪ್ರೀಂಕೋರ್ಟ್ ಕೊಲಿಜಿಯಂ ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಉನ್ನತ ನ್ಯಾಯಾಲಯದ ನಾಲ್ಕು ಹಿರಿಯ ನ್ಯಾಯಾಧೀಶರನ್ನು ಒಳಗೊಂಡಿರುವ ಸಂಸ್ಥೆಯಾಗಿದೆ. ಈ 5 ಸದಸ್ಯರನ್ನು ಒಳಗೊಂಡಿದೆ. ಸುಪ್ರೀಂಕೋರ್ಟ್‌ಗೆ ನ್ಯಾಯಾಧೀಶರ ನೇಮಕಾತಿಗಾಗಿಯೂ ಇದು ಶಿಫಾರಸು ಮಾಡುತ್ತದೆ.
ಹೈಕೋರ್ಟ್‌ಗಳಲ್ಲಿನ ನೇಮಕಾತಿಗಳು ಮತ್ತು ವರ್ಗಾವಣೆಗಳಿಗೆ ಸುಪ್ರೀಂಕೋರ್ಟ್ ಕೊಲಿಜಿಯಂ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಾಧೀಶರನ್ನು ಒಳಗೊಂಡ ಕೊಲಿಜಿಯಂ ಶಿಫಾರಸುಗಳನ್ನು ಮಾಡುತ್ತದೆ.
ವಿವಿಧ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಅಥವಾ ಸುಪ್ರೀಂಕೋರ್ಟ್‌ನಲ್ಲಿ ಹುದ್ದೆಗಳು ಖಾಲಿಯಾದಾಗ ಕೊಲಿಜಿಯಂ ಬಡ್ತಿ ಅಥವಾ ವರ್ಗಾವಣೆಗಾಗಿ ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡಲು ಸಭೆಯನ್ನು ನಡೆಸುತ್ತದೆ.
ಕೊಲಿಜಿಯಂ ಪರಿಗಣಿಸಬೇಕಾದ ನಿಯಮಗಳು, ಮಾರ್ಗಸೂಚಿಗಳನ್ನು ಬಹಿರಂಗ ಮಾಡಿಲ್ಲ. ಹಲವು ಮಾನದಂಡಗಳನ್ನು ನ್ಯಾಯಾಧೀಶರು ತಮ್ಮ ಶಿಫಾರಸುಗಳನ್ನು ಮಾಡುತ್ತಾರೆ. ಇಂತಹ ಶಿಫಾರಸುಗಳು ತಿರಸ್ಕಾರವಾಗುವುದು ಕಡಿಮೆ.












Click it and Unblock the Notifications