ಹೈಕಮಾಂಡ್ ಮಾತಿಗೂ ಡೋಂಟ್ ಕೇರ್: 25 ಶಾಸಕರ ಜೊತೆ ಸಾಹುಕಾರ್ ದುಬೈಗೆ?
ಬೆಂಗಳೂರು, ಜನವರಿ 30: ರಾಜ್ಯ ರಾಜಕೀಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದೆ. ಬಿಜೆಪಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರ ವಿರುದ್ಧ ಯತ್ನಾಳ್ ಬಣ ತಿರುಗಿಬಿದಿದ್ದು, ಇತ್ತ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಬಹಿರಂಗವಾಗಿ ಹೇಳಿಕೆಗೆ ಬ್ರೇಕ್ ಹಾಕಿದ್ದು, ಡಿನ್ನರ್ ಪಾಲಿಟಿಕ್ಸ್‌ಗೆ ಬ್ರೇಕ್ ಹಾಕಿತ್ತು.
ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಹಗ್ಗ ಜಗ್ಗಾಟದ ನಡುವೆ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ ಎಲ್ಲವನ್ನು ತಣ್ಣಗೆ ಮಾಡಿದ್ದರು. ಬೆಳಗಾವಿ ರಾಜಕೀಯಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಎಂಟ್ರಿಯಾದ ಬೆನ್ನಲ್ಲೇ ಬಿರುಸುಗೊಂಡಿದ್ದ ಬಣ ತಿಕ್ಕಾಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ಖಡಕ್ ಸೂಚನೆ ಬಳಿಕ ತುಸು ತಣ್ಣಗಾದಂತೆ ಕಂಡಿದ್ದ ಬಣ ಸಂಘರ್ಷ ಇದೀಗ ಮತ್ತೆ ಮುನ್ನೆಲೆಗೆ ಬರುವ ಎಲ್ಲ ಸಾಧ್ಯತೆಗಳು ಗೋಚರಿಸಿವೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಪಕ್ಷ ಒಳಗೊಳಗೇ ಕುದಿಯುತ್ತಿರುವ ಜಾರಕಿಹೊಳಿ ಸಹೋದರರ ಈ ನಡವಳಿಕೆ ಕಾಂಗ್ರೆಸ್ ಪಕ್ಷಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. ಕಳೆದ ದಸರಾ ಮಹೋತ್ಸವದ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿಯವರು ಪ್ರತ್ಯೇಕ ಪ್ರವಾಸದ ಪ್ರಯತ್ನ ಮಾಡಿದ್ರು. ಆಪ್ತ ಶಾಸಕರೊಂದಿಗೆ ವಿದೇಶಿ ಪ್ರವಾಸಕ್ಕೆ ತೆರಳಲು ಮುಂದಾಗಿದ್ದ ಸತೀಶ್ ಜಾರಕಿಹೊಳಿ ಅಂಡ್ ಟೀಮ್ ಗೆ ಹೈಕಮಾಂಡ್ ಬ್ರೇಕ್ ಹಾಕಿತ್ತು.
ಇತ್ತೀಚೆಗೆ ಕಾಂಗ್ರೆಸ್ನಲ್ಲಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಶಾಸಕರು ಪ್ರತ್ಯೇಕ ಸಭೆ ನಡೆಸಲು ಮುಂದಾಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಅದಕ್ಕೂ ಬ್ರೇಕ್ ಹಾಕಿತ್ತು. ಹೀಗಾಗಿ ಸತೀಶ್ ಜಾರಕಿಹೊಳಿಯವರ ಪ್ರವಾಸ ಖಚಿತಗೊಂಡಿತ್ತಾದರೂ ಪೂರ್ತಿ ರದ್ದುಕೊಂಡಿರಲಿಲ್ಲ. ಇದೀಗ ಸಚಿವ ಸತೀಶ್ ಜಾರಕಿಹೊಳಿ ತನ್ನ 25 ಆಪ್ತ ಶಾಸಕರೊಂದಿಗೆ ದುಬೈ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಜಿದ್ದಾಜಿದ್ದಿನ ರಾಜಕಾರಣ ಕೈಬಿಟ್ಟಂತೆ ಕಾಣಿಸಿಕೊಂಡ ಸತೀಶ್ ಜಾರಕಿಹೊಳಿ ಒಳಗೊಳಗೇ ಬೆಂಬಲಿಗರನ್ನು ವಿದೇಶಿ ಪ್ರವಾಸಕ್ಕೆ ಪ್ರಚೋದಿಸಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಸುಮಾರು 25 ಮಂದಿ ಆಪ್ತ ಶಾಸಕರು ದುಬೈ ಪ್ರವಾಸಕ್ಕೆ ತೆರಳುತ್ತಿದ್ದು, ಇದರ ನೇತೃತ್ವವನ್ನು ಸತೀಶ್ ಜಾರಕಿಹೊಳಿ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ 25 ಮಂದಿ ಆಪ್ತ ಶಾಸಕರ ಜೊತೆಗೆ ದುಬೈ ಪ್ರವಾಸದ ಉಸ್ತುವಾರಿಯನ್ನ ಸಚಿವ ಸತೀಶ್ ಜಾರಕಿಹೊಳಿ ಅವರು ವಹಿಸಿದ್ದಾರೆ. ಇನ್ನೂ ಈ ಚರ್ಚೆಯ ಜೊತೆಗೆ ಮುಖ್ಯಮಂತ್ರಿ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಯಿಸಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಇದರ ಮಧ್ಯ ಕಾಂಗ್ರೆಸ್ ಹೈಕಮಾಂಡ್ ರಾಜ್ಯಕ್ಕೆ ಆಗಮಿಸಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರ ಎಲ್ಲಿಯೂ ಮಾತನಾಡದಂತೆ ಸೂಚನೆ ನೀಡಿತ್ತು.
ಇತ್ತ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಸಹ ಬಹಿರಂಗ ಹೇಳಿಕೆ ನೀಡದಂತೆ ಖಡಕ್ ವಾರ್ನಿಂಗ್ ನೀಡಿದ್ದರು. ಈ ನಡುವೆಯೂ ಕಾಂಗ್ರೆಸ್ ಹೈಕಮಾಂಡ್ ಮಾತಿಗೂ ಜಗ್ಗದ ಸತೀಶ್ ಜಾರಕಿಹೊಳಿ ದುಬೈ ಪ್ರವಾಸಕ್ಕೆ ಸಿದ್ದತೆ ಕೈಗೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.












Click it and Unblock the Notifications