ಸಾರ್ವಜನಿಕ ಕಾಮಗಾರಿ ಟೆಂಡರ್‌ಗಳಲ್ಲಿ ಮೀಸಲಾತಿ: ಆದೇಶ, ವಿವರಗಳು
ಬೆಂಗಳೂರು, ನವೆಂಬರ್ 11: ಕರ್ನಾಟಕ ಸರ್ಕಾರ 1 ಕೋಟಿ ರೂಪಾಯಿಗಳವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರು ಟೆಂಡರ್‌ಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ನಿಯಮಗಳನ್ನು ಬದಲಾವಣೆ ಮಾಡಿದೆ. ಈ ಕುರಿತು ಆದೇಶವನ್ನು ಹೊರಡಿಸಿದ್ದು, ರಾಜ್ಯ ಪತ್ರದ ಮೂಲದ ಅದನ್ನು ಪ್ರಕಟಿಸಲಾಗಿದೆ. ಆದೇಶದಲ್ಲಿನ ನಿಗದಿಪಡಿಸಿದ ಪ್ರಕ್ರಿಯೆಯು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂರಲ್ಲಿ ವ್ಯಾಖ್ಯಾನಿಸಿದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಿಗಳು ಕೈಗೊಳ್ಳುವ ನಿರ್ಮಾಣ ಕಾಮಗಾರಿಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಲ್. ಕೆ. ಅತೀಕ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಆರ್ಥಿಕ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಆದೇಶದಲ್ಲಿ ಸರ್ಕಾರದ ಆದೇಶದಲ್ಲಿ ಒಂದು ಕೋಟಿ ರೂಪಾಯಿಗಳವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರು ಕಾಮಗಾರಿಗಳ ಟೆಂಡರ್‌ಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಮಾದರಿ ಟೆಂಡರ್ ದಾಖಲೆಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿರುತ್ತದೆ ಎಂದು ಹೇಳಿದೆ.

ಸರ್ಕಾರದ ಆದೇಶದಲ್ಲಿ ಮಾದರಿ ಟೆಂಡರ್ ದಾಖಲೆಗಳ ಷರತ್ತುಗಳಿಗೆ ತರಲಾದ ಎಲ್ಲಾ ಮಾರ್ಪಾಡುಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು ಪ್ರವರ್ಗ II(A) ರಲ್ಲಿನ ಜಾತಿಗಳ ಟೆಂಡರ್‌ದಾರರುಗಳಿಗೂ ಒಂದು ಕೋಟಿ ರೂಪಾಯಿಗಳವರೆಗಿನ ಕಾಮಗಾರಿಗಳ ಟೆಂಡರ್‌ಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಅನ್ವಯಿಸಿ ಅವಕಾಶ ಕಲ್ಪಿಸಲಾಗಿರುತ್ತದೆ.
ಮುಂದುವರೆದು, ಒಂದು ಕೋಟಿ ರೂಪಾಯಿಗಳವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರು ಹಾಗೂ ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು ಪ್ರವರ್ಗ II(A) ರಲ್ಲಿನ ಜಾತಿಗಳ ಟೆಂಡರ್‌ದಾರರು ಟೆಂಡರ್‌ಗಳಲ್ಲಿ ಭಾಗವಹಿಸುವ ಕುರಿತು ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪೋರ್ಟಲ್‌ನಲ್ಲಿ ಶೇಕಡಾವಾರು ಮೀಸಲಾತಿಯನ್ವಯ Randomization ಮೂಲಕ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ- ಆಡಳಿತ) ರವರಿಂದ ಸ್ಪಷ್ಟೀಕರಣ ಕೋರಲಾಗಿರುತ್ತದೆ.
ಈ ಬಗ್ಗೆ ದಿನಾಂಕ 01.10.2024 ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ಇವರ ಅಧ್ಯಕ್ಷತೆಯಲ್ಲಿ ನಡೆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕಾಮಗಾರಿಗಳ ಅನುಷ್ಟಾನ ನಿರ್ವಹಿಸುವ ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ), ಮುಂತಾದ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಪ್ರವರ್ಗ-1 ಮತ್ತು ಪ್ರವರ್ಗ-IIA ಗುತ್ತಿಗೆದಾರರ ಪ್ರತಿನಿಧಿಗಳು ಹಾಜರಾದ ಸಭೆಯಲ್ಲಿ ಚರ್ಚಿಸಲಾಗಿದೆ.
ಸಭೆಯಲ್ಲಿ ಚರ್ಚಿಸಿದ ನಂತರ, ವಿವಿಧ ಆಯ್ಕೆಗಳನ್ನು ಪರಿಶೀಲಿಸಿ ಪ್ರಸಕ್ತ ಚಾಲ್ತಿಯಲ್ಲಿರುವಂತೆ ಇಂಜಿನಿಯರಿಂಗ್ ಡಿವಿಜನ್ ಅಥವಾ ಟೆಂಡರ್ ಆಹ್ವಾನ ಪ್ರಾಧಿಕಾರವನ್ನು ಘಟಕವಾಗಿ ಪರಿಗಣಿಸಿ ನಾಲ್ಕಕ್ಕಿಂತ ಹೆಚ್ಚಿನ ಸಂಖ್ಯೆಯ ಕಾಮಗಾರಿಗಳನ್ನು Randomize ಮಾಡಿದ ನಂತರ ಸರ್ಕಾರದ ಆದೇಶದಲ್ಲಿ ಹೊರಡಿಸಿರುವ ರೋಸ್ಟರ್ ಬಿಂದುವನ್ನು ಅನ್ವಯಿಸಿ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಮೀಸಲಾತಿಯನ್ನು ನಿಗದಿಪಡಿಸಲು ಹಾಗೂ ಒಂದು ಸಲ Randomize ಮಾಡಿದ ನಂತರ ಮೀಸಲಾತಿಯು ಯಾವ ರೋಸ್ಟರ್ ಬಿಂದುವಿನಲ್ಲಿ ಅಂತ್ಯವಾಗಿರುತ್ತದೆಯೋ, ಮುಂದಿನ Randomization ನಲ್ಲಿ ಮೀಸಲಾತಿಯನ್ನು ಅದೇ ರೋಸ್ಟರ್ ಬಿಂದುವಿನಿಂದ ಮುಂದುವರೆಸಿ ನಿಗದಿಪಡಿಸಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವ ಆಯ್ಕೆಯನ್ನು ಅನುಮೋದಿಸಿರುತ್ತಾರೆ.
ಮೇಲಿನ ಪ್ರಕ್ರಿಯೆಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪೋರ್ಟಲ್‌ನಲ್ಲಿ ಅಳವಡಿಸುವ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕಾರ್ಯಕಾರಿ ಆದೇಶ ಹೊರಡಿಸಬೇಕಾಗಿರುತ್ತದೆ. ಆದ್ದರಿಂದ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ ಎಂದು ಹೇಳಿದೆ.
ಸರ್ಕಾರದ ಆದೇಶ: 1 ಕೋಟಿ ರೂಪಾಯಿಗಳವರೆಗಿನ ಕಾಮಗಾರಿಗಳಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999ರ ಕಲಂ (6) ರ ಪರಂತುಕಗಳು ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು, 2000ರ (27A) ರಲ್ಲಿ ನಿಗದಿಪಡಿಸಿದ ಮೀಸಲಾತಿಯ ಅನುಸಾರ ಟೆಂಡರ್‌ದಾರರಿಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ವೇದಿಕೆಯಲ್ಲಿ ಕಾಮಗಾರಿಗಳನ್ನು ಆಯ್ಕೆ ಮಾಡಲು ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಈ ಮೂಲಕ ಆದೇಶಿಸಿದೆ
* ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು, 2000ರ (27A) ರಲ್ಲಿ ನಿಗದಿಪಡಿಸಿದಂತೆ ಇಂಜಿನಿಯರಿಂಗ್ ಡಿವಿಜನ್ ಅಥವಾ ಟೆಂಡರ್ ಆಹ್ವಾನ ಪ್ರಾಧಿಕಾರವನ್ನು ಘಟಕ ಎಂದು ಪರಿಗಣಿಸಿ ನಾಲ್ಕಕ್ಕಿಂತ ಹೆಚ್ಚಿನ ಸಂಖ್ಯೆಯ ಕಾಮಗಾರಿಗಳನ್ನು Randomize ಮಾಡಿದ ನಂತರ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಸರ್ಕಾರದ ಆದೇಶ ದಿನಾಂಕ 28.12.2022ರಲ್ಲಿ ನಿಗದಿಪಡಿಸಿದ ರೋಸ್ಟರ್ ಬಿಂದುವನ್ನು ಕಾಮಗಾರಿಗಳ ಆಯ್ಕೆಗೆ ಅನ್ವಯಿಸುವುದು ಮತ್ತು ಅದರಂತೆ ಮೀಸಲಾತಿಯನ್ನು ನಿಗದಿಪಡಿಸುವುದು.
* ಮೇಲಿನಂತೆ ಒಂದು ಸಲ ಕಾಮಗಾರಿಗಳ ಆಯ್ಕೆಗೆ Randomize ಪ್ರಕ್ರಿಯೆ ಕೈಗೊಂಡ ನಂತರ ಮೀಸಲಾತಿಯು ಯಾವ ರೋಸ್ಟರ್ ಬಿಂದುವಿನಲ್ಲಿ ಅಂತ್ಯವಾಗಿರುತ್ತದೆಯೋ, ಮುಂದಿನ ಕಾಮಗಾರಿಗಳ Randomization ಪ್ರಕ್ರಿಯೆಯಲ್ಲಿ ಮೀಸಲಾತಿಯನ್ನು ಅದೇ ರೋಸ್ಟರ್ ಬಿಂದುವಿನಿಂದ ಮುಂದುವರೆಸಿ ನಿಗದಿಪಡಿಸುವುದು.












Click it and Unblock the Notifications