ಸಿಎಂ ಬಳಿಕ 'ಹೋಂ ಮಿನಿಸ್ಟರ್' ಬದಲಾವಣೆ ಕೂಗು...ಯಾರಿಂದ?
ಮುಡಾ ಹಗರಣ ಬಯಲಿಗೆ ಬಂದ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆಯ ಕೂಗು ಜೋರಾಗಿ ಎದ್ದಿತ್ತು. ಮತ್ತೊಂದೆಡೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿದರೆ ನಾನೇ ಸಿಎಂ ಎಂದೂ ಹಲವರು ಸಾಲಾಗಿ ನಿಂತಿದ್ದರು. ಇದೀಗ ಕಾಂಗ್ರೆಸ್‌ನ ಹೋಂ ಮಿನಿಸ್ಟರ್ ಸ್ಥಾನಕ್ಕೂ ಕುತ್ತು ಬಂದಿದೆ.
ಸದ್ಯ ಗೃಹ ಸಚಿವರ ಸ್ಥಾನದಲ್ಲಿ ಜಿ.ಪರಮೇಶ್ವರ್ ಇದ್ದಾರೆ. ಆದರೆ, ಅವರು ಗೃಹ ಸಚಿವರ ಸ್ಥಾನಕ್ಕೆ ಸಮರ್ಥರಲ್ಲ. ಹಾಗಾಗಿ ಬೇರೆ ಯಾರನ್ನಾದರೂ ಆ ಸ್ಥಾನಕ್ಕೆ ತುಂಬಿ ಎಂಬ ಮಾತು ಬಿಜೆಪಿಯಿಂದ ಕೇಳಿಬಂದಿದೆ.

ವಿಪಕ್ಷ ನಾಯಕ ಆರ್.ಅಶೋಕ್ ಅವರು ಈ ರೀತಿ ಮಾತನಾಡಿದ್ದು, ಜಿ.ಪರಮೇಶ್ವರ್ ಅವರ ರಾಜೀನಾಮೆ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಗಳನ್ನು ಉಲ್ಲೇಖಿಸಿ ಆರ್.ಅಶೋಕ್ ಅವರು ಈ ರೀತಿ ಮಾತನಾಡಿದ್ದಾರೆ.
ʼರಾಜ್ಯದಲ್ಲಿ ದಿನನಿತ್ಯ ಒಂದಲ್ಲ ಒಂದು ಕಡೆ ನಡೆಯುತ್ತಿರುವ ಕೋಮುಗಲಭೆಗಳನ್ನ ನೋಡುತ್ತಿದ್ದರೆ ಕೋಮುಗಲಭೆಗಳು ಕರ್ನಾಟಕ ಸರ್ಕಾರದ ಆರನೇ ಗ್ಯಾರಂಟಿ ಎನಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಗೃಹ ಸಚಿವ ಜಿ.ಪರಮೇಶ್ವರ್ ಅವರೇ...ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಪೊಲೀಸರಿಗೆ ಬಿದ್ದಿರುವ ಕಲ್ಲೇಟು, 30 ವಾಹನಗಳು ಜಖಂ ಆಗಿರುವುದು, ಮನೆಗಳ ಕಿಟಿಕಿ ಗಾಜುಗಳು ಪುಡಿ ಪುಡಿ ಆಗಿರುವುದು ಇವೆಲ್ಲ ನಿಮ್ಮ ಪ್ರಕಾರ ಸಣ್ಣ, ಆಕಸ್ಮಿಕ ಘಟನೆಗಳೇ ಅಲ್ಲವೇ? ಅಥವಾ ಇದು ಸುಳ್ಳು ಸುದ್ದಿ ಎಂದು ಮಾಧ್ಯಮಗಳ ಮೇಲೆ ಎಫ್ಐಆರ್ ಹಾಕುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ.. ಪರಮೇಶ್ವರ್ ಅವರ ಬಾಲಿಶತನ, ಬೇಜವಾಬ್ದಾರಿತನದಿಂದ ರಾಜ್ಯದ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ರಾಜ್ಯದಲ್ಲಿ ದಿನನಿತ್ಯ ಶಾಂತಿ ಕದಡುತ್ತಿದೆ. ಪರಮೇಶ್ವರ್ ಅವರ ರಾಜೀನಾಮೆ ಪಡೆದು ಯಾರಾದರೂ ಸಮರ್ಥರಿಗೆ ಗೃಹ ಇಲಾಖೆ ವಹಿಸಿ ಪುಣ್ಯ ಕಟ್ಟಿಕೊಳ್ಳಿ ಎಂದೂ ಆರ್.ಅಶೋಕ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶನ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ನಿನ್ನೆ ಬೆಣ್ಣೆನಗರಿ ದಾವಣಗೆರೆಯಲ್ಲೂ ಗಣೇಶ ಮೂರ್ತಿ ವಿಸರ್ಜನೆ ವೇಳೆ ಮೆರವಣಿಗೆ ನಡೆಸಿದ್ದವರ ಮೇಲೆಯೂ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ವರದಿಯಾಗಿದೆ.
ಘಟನೆಯಲ್ಲಿ ಪೊಲೀಸ್ ಇಲಾಖೆಯ ಸಿಪಿಐ, ಎಸ್‌ಐ ಸೇರಿದಂತೆ ಮೂವರು ಪೊಲೀಸರಿಗೆ ಕಲ್ಲೇಟು ಬಿದ್ದಿದ್ದು, ಮೂವತ್ತಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ. ಮುದ್ದ ಬೋವಿ ಕಾಲೋನಿ ಹಾಗೂ ವೆಂಕಬೋವಿ ಕಾಲೋನಿಯ ಗಣೇಶನನ್ನು ನಗರದ ಅರಳಿ ಮರ ಸರ್ಕಲ್‌ನಲ್ಲಿ ಮೆರವಣಿಗೆ ಮಾಡುವಾಗ ಕಲ್ಲು ತೂರಾಟ ನಡೆದಿದೆ.
ಈ ವೇಳೆ ಸರ್ಕಲ್ ಇನ್ಸ್‌ಪೆಕ್ಟರ್ ಗುರುಬಸವರಾಜ್ ಹಾಗೂ ಕ್ರೈಂ ವಿಭಾಗದ ಪೊಲೀಸ್ ಕಾನ್ಸ್‌ಸ್ಟೇಬಲ್ ರಘು ಎಂಬುವವರಿಗೆ ಗಾಯಗಳಾಗಿತ್ತು. ಕೆಲ ಮನೆಗಳಿಗೂ ಘಟನೆಯಿಂದ ಹಾನಿಯಾಗಿರುವುದಾಗಿ ಹೇಳಲಾಗಿದೆ. ಈ ಘಟನೆ ಸಂಬಂಧ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಯಾರೇ ಕೋಮುಭಾವನೆ ಕೆರಳಿಸುವ, ಕಾನೂನಿಗೆ ಧಕ್ಕೆ ತರುವ ರೀತಿ ನಡೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಐಜಿಪಿ ರಮೇಶ್ ಹೇಳಿದ್ದಾರೆ. ಇದೇ ವಿಚಾರವಾಗಿ ಆರ್.ಅಶೋಕ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications