ಬೋಗಸ್ ದರ್ಶನ, ಖಜಾನೆ ಖಾಲಿ ಇಲ್ಲ ಎಂದಾದರೆ ಪರಿಹಾರ ನೀಡಿ, ಶ್ವೇತಪತ್ರಕ್ಕಾಗಿ ವಿಪಕ್ಷ ನಾಯಕನ ಪಟ್ಟು
ಬೆಂಗಳೂರು, ನವೆಂಬರ್ 27: ಕರ್ನಾಟಕದಲ್ಲಿ ಗ್ಯಾರೆಂಟಿ ಯೋಜನೆಗಳ ಅರೆಬರೆ ಜಾರಿಯಿಂದ ಬೊಕ್ಕಸ ಬರಿದಾಗಿದೆ. ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು ಹಣಕಾಸಿನ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವಂತೆ ಬೆಳಗಾವಿ ಅಧಿವೇಶನದಲ್ಲಿ ಪಟ್ಟು ಹಿಡಿಯುತ್ತೇವೆ ಎಂದು ಬಿಜೆಪಿ ವಿರೋಧ ಪಕ್ಷದ ನಾಯಕ ನಾಯಕ ಆರ್.ಅಶೋಕ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೀಗಾಗಿ ಬರಗಾಲದಿಂದ ತತ್ತರಿಸುತ್ತಿರವ ರೈತರಿಗೆ ಪರಿಹಾರ ನೀಡಲು ಸಾಧ್ಯವಾಗದೆ ಕೇಂದ್ರದತ್ತ ಬೊಟ್ಟು ತೋರಿಸುತ್ತಿದ್ದಾರೆ. ಇದು ಸಂವೇದನಾ ರಹಿತ ಎಡಬಿಡಂಗಿ ಸರ್ಕಾರ ಎಂದು ಗುಡುಗಿದರು.
ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಅನೇಕ ಜಿಲ್ಲೆಗಳಲ್ಲಿ ಬರಗಾಲದ ಬಗ್ಗೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಸರ್ಕಾರದ ಬಣ್ಣ ಬಯಲಾಗುತ್ತಿದೆ. ಜನ ಸಂಕಷ್ಟದಲ್ಲಿದ್ದರೂ ತನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದರು.

ಪರಿಹಾರ ನೀಡಲು ಏನು ದಾಡಿ
ಕೇಂದ್ರದ ವಿರುದ್ಧ ಗೂಬೆ ಕೂರಿಸುವ ಮೊದಲು ರಾಜ್ಯ ಸರ್ಕಾರದ ಪಾತ್ರ, ಹೊಣೆಗಾರಿಕೆ ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿ. ಹಿಂದೆ ನಮ್ಮ ಸರಕಾರ ಅಧಿಕಾರದಲ್ಲಿ ಇದ್ದಾಗ ಮೊದಲು ರೈತರ ಸಂಕಷ್ಟಕ್ಕೆ ಧಾವಿಸಿದ್ದೆವು. ಎನ್ ಡಿಆರ್ ಎಫ್ ಮಾರ್ಗಸೂಚಿಗಿಂತ ದುಪ್ಪಟ್ಟು ಪರಿಹಾರ ನೀಡಿದ್ದೆವು. ನಂತರ ಕೇಂದ್ರದ ನೆರವು ಖಜಾನೆಗೆ ಬಂತು. ಆ ಕೆಲಸ ಮಾಡಲು ಇವರಿಗೇನು ದಾಡಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೊಳವೆ ಬಾವಿ ಕೊರೆಸಲು, ಜಾನುವಾರುಗಳಿಗೆ ಮೇವು ಖರೀದಿಸಲು ಆದೇಶವನ್ನು ಹೊರಡಿಸಿಲ್ಲ. ಕನಿಷ್ಟಪಕ್ಷ ಕೊಳವೆ ಬಾವಿಗಳಿಗೆ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ. ಕೇಳಿದರೆ ಎಲ್ಲದಕ್ಕೂ ಲಂಚ ಕೊಡಬೇಕು, ಇಲ್ಲದಿದ್ದರೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ರೈತರು ದೂರು ನೀಡುತ್ತಿದ್ದಾರೆ.
ಬರ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎನ್ನುತ್ತಾರೆ, ಅದು ನಿಜವೇ ಆಗಿದ್ದಲ್ಲಿ ತಕ್ಷಣ ಹಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು. ಬೆಳಗಾವಿ ಅಧಿವೇಶನದಲ್ಲಿ ಇವರು ಮಾಡಿರುವ ಖರ್ಚು ವೆಚ್ಚ ಮತ್ತು ಹಣಕಾಸಿನ ಸ್ಥಿತಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಸಿಎಂ ಅವರದ್ದು ಬೋಗಸ್ ದರ್ಶನ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನತಾದರ್ಶನ ಮಾಡುತ್ತಿದ್ದಾರೆ. ಅವರ ಈ ಕಾರ್ಯವನ್ನು ಬೋಗಸ್ ದರ್ಶನ ಎಂದು ಲೇವಡಿ ಮಾಡಿದ ಅಶೋಕ್ ಅವರು, ನೆಟ್ಟಗೆ ಕೆಲಸ ಮಾಡದ ಮಂತ್ರಿಗಳನ್ನು ಕರೆಯಿಸಿ ಮೊದಲು ಅವರ ದರ್ಶನ ಮಾಡಬೇಕಿತ್ತು. ಯಾರ್ಯಾರು ಏನು ಕೆಲಸ ಮಾಡಿದ್ದಾರೆ ಎಂದು ಮಾಹಿತಿ ಪಡೆಯಬೇಕಿತ್ತು. ಅದನ್ನು ಬಿಟ್ಟು ಖುರ್ಚಿ, ಮೇಜು ಹಾಕಿಸಿ ಮನವಿ ಪತ್ರ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಿಎಂ ಸೇರಿದಂತೆ ಎಲ್ಲ ಸಚಿವರು ಜಿಲ್ಲಾ ಕೇಂದ್ರಗಳಲ್ಲಿ ಜನತಾ ದರ್ಶನ ಮಾಡಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಸಾವಿರಾರು ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತು. ಅದನ್ನು ಬಿಟ್ಟು ಸಿಎಂ ಅವರು ಸೀಮಿತ ಸಂಖ್ಯೆ ಜನರ ಅಹವಾಲು ಕೇಳಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ನಿದ್ದಯಿಂದ ಇವತ್ತು ಎದ್ದಿದೆ
ದಿಢೀರ್ ಎಂದು ಮುಖ್ಯಮಂತ್ರಿಗಳು ಅವರು ಜನತಾದರ್ಶನ ಮಾಡುತ್ತಿದ್ದಾರೆ ಎಂದರೆ ಇವತ್ತು ದೀರ್ಘ ಕಾಲದ ನಿದ್ದೆಯಿಂದ ಎದ್ದಿದ್ದಾರೆ ಎಂದು ಅರ್ಥ. ಏಕೆಂದರೆ ಆಡಳಿತ ಸಂಪೂರ್ಣ ನೆಲಕಚ್ಚಿದ್ದು ಅಧಿಕಾರಶಾಹಿ ಜನರ ಶೋಷಣೆಯಲ್ಲಿ ನಿರತವಾಗಿದೆ. ಇದನ್ನು ಗಮನಿಸಿ ಸರಿಪಡಿಸಬೇಕಿದ್ದ ಸಚಿವರು ತೆಲಂಗಾಣ ಚುನಾವಣೆಯಲ್ಲಿ ಗ್ಯಾರೆಂಟಿ ಯೋಜನೆಗಳಿಂದ ಕರ್ನಾಟಕದಲ್ಲಿ ಕ್ರಾಂತಿ ಆಗಿದೆ ಎಂದು ಬುರುಡೆ ಭಾಷಣ ಬಿಗಿಯುತ್ತಿದ್ದಾರೆ. ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಡಿದಿರುವ ಬರಗಾಲ ನಿವಾರಣೆಗಾಗಿ ಸಿದ್ದರಾಮಯ್ಯ ಎಲ್ಲಾ ಸಚಿವರನ್ನು ಅಲ್ಲಿಗೆ ನಿಯೋಜಿಸಿದ್ದಾರೆ. ಇಲ್ಲಿ ಜನ ತತ್ತರಿಸುತ್ತಿದ್ದರೂ ಕೇಳುವವರು ದಿಕ್ಕಿಲ್ಲ ಎಂದು ಕಿಡಿಕಾರಿದರು.
ಮೊದಲು ಪಕ್ಷದ ಸಿದ್ಧಾಂತ ಅರಿತುಕೊಳ್ಳಲಿ
ಮಾಗಡಿ ಶಾಸಕ ಬಾಲಕೃಷ್ಣ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕರು, ಅವರು ಈಗಾಗಲೇ ಮೂರು ಪಕ್ಷಗಳಿಗೆ ಪಕ್ಷಾಂತರ ಮಾಡಿದ್ದಾರೆ. ಹೀಗಾಗಿ ಪಕ್ಷಗಳ ಸಂಸ್ಥಾಪಕ ಅಧ್ಯಕ್ಷರು ಯಾರ್ಯಾರು ಎಂಬುದನ್ನೇ ತಿಳಿದುಕೊಂಡಿಲ್ಲ. ಕಾಂಗ್ರೆಸ್ ಸ್ಥಾಪಕ ಅಧ್ಯಕ್ಷ ಬ್ರಿಟಿಷ್ ಎಂಬುದೂ ಗೊತ್ತಿಲ್ಲ. ಅವರ ಪರಂಪರೆಯೇ ಕಾಂಗ್ರೆಸ್ ನಲ್ಲಿ ಮುಂದುವರೆಯುತ್ತಿದೆ. ಯುಪಿಎ ಅವಧಿಯಲ್ಲಿ ಕಾಶ್ಮೀರದಲ್ಲಿ ಸೈನಿಕರಿಗೆ ಕಾಸು ಕೊಟ್ಟು ಕಲ್ಲು ಹೊಡೆಸುತ್ತಿದ್ದರು. ಅವರೆಲ್ಲರೂ ಈಗ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಜನಜೀವನ ಸಹಜಸ್ಥಿತಿಗೆ ಮರಳಿದೆ. ಇದಕ್ಕೆ ಮೋದಿ ಸರ್ಕಾರದ ಕಠಿಣ ಕ್ರಮಗಳು ಕಾರಣ ಎಂದೂ ಅಶೋಕ್ ವಿವರಿಸಿದರು.












Click it and Unblock the Notifications