ಅಸಮರ್ಥರನ್ನು ಅಸಮರ್ಥ ಎನ್ನದೆ ಜಗದೇಕ ವೀರ ಎನ್ನಬೇಕೆ: ಸಚಿವ ಪ್ರಿಯಾಂಕ್ ಖರ್ಗೆ
ಅಸಮರ್ಥರನ್ನು ಅಸಮರ್ಥ ಎನ್ನದೆ ಜಗದೇಕ ವೀರ ಎನ್ನಬೇಕೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನೆ ಮಾಡಿದ್ದು. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಬಾಂಗ್ಲಾ ವಲಸಿಗರ ಬಗ್ಗೆ ಅತಾರ್ಕಿಕವಾಗಿ ರಾಜ್ಯ ಸರ್ಕಾರವನ್ನು ಟೀಕಿಸುವ ಬಿಜೆಪಿಗರಿಗೆ ಬಾಂಗ್ಲಾ ವಲಸಿಗರು ದೇಶದೊಳಗೆ ನುಸುಳುವಂತಾಗಿದ್ದು ಹೇಗೆ ಮತ್ತು ಯಾರ ಅಸಾಮರ್ಥ್ಯದಿಂದ ಎಂಬ ಪ್ರಶ್ನೆಗೆ ಉತ್ತರ ಹೇಳುವ ಧೈರ್ಯವಿಲ್ಲ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಬಾಂಗ್ಲಾ ವಲಸಿಗರು ದೇಶದ ಗಡಿ ದಾಟಿ ಬರುವಂತಾಗಿದ್ದು ಕೇಂದ್ರ ಗೃಹ ಸಚಿವರ ವೈಫಲ್ಯವಲ್ಲವೇ. ದೆಹಲಿಯ ಕೆಂಪು ಕೋಟೆ ಬಳಿಯೇ ಸ್ಫೋಟವಾಗುತ್ತದೆ ಎಂದರೆ ಅದು ಕೇಂದ್ರ ಗೃಹ ಸಚಿವರ ಅಸಾಮರ್ಥ್ಯವಲ್ಲವೇ?, ಪೆಹಲ್ಗಾಮ್ ದಾಳಿಯಾಗುವಾಗ ಅಮಿತ್ ಶಾ ಅವರ ಚಾಣಾಕ್ಷತನ ಎಲ್ಲಿ ಅಡಗಿತ್ತು ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು ವರ್ಷಗಳ ಕಾಲ ಮಣಿಪುರದಲ್ಲಿ ದಂಗೆ ನಡೆಯುತ್ತಿದ್ದುದ್ದನ್ನು ಸುಮ್ಮನೆ ನೋಡುತ್ತಾ ಕುಳಿತಿದ್ದನ್ನು ಆಸಾಮರ್ಥ್ಯ ಎನ್ನಬೇಕೋ ಪರಾಕ್ರಮ ಎನ್ನಬೇಕೋ?, ಮಹಿಳೆಯರ ಬೆತ್ತಲೆ ಮೆರವಣಿಗೆಯಿಂದ ಇಡೀ ಜಗತ್ತಿನ ಎದುರು ದೇಶದ ಘನತೆ ಮಣ್ಣುಪಾಲಾದಾಗ ಕಣ್ಮುಚ್ಚಿ ಕುಳಿತಿದ್ದು ಆಸಾಮರ್ಥ್ಯವಲ್ಲದೆ ಇನ್ನೇನು?, ಅಮಿತ್ ಶಾ ಅವರ ಸಾಮರ್ಥ್ಯ, ಪರಾಕ್ರಮಗಳಿರುವುದು ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸುವುದರಲ್ಲಿ ಮತ್ತು ICCಯನ್ನು ಸಮೃದ್ಧಗೊಳಿಸುವುದರಲ್ಲಿ ಮಾತ್ರವೇ ಎಂದು ಸರಣಿ ಪ್ರಶ್ನೆ ಮಾಡಿದ್ದಾರೆ.
ಪ್ರಮೋಷನ್ ಗಾಗಿ, ಅಸ್ತಿತ್ವಕ್ಕಾಗಿ ಅಮಿತ್ ಶಾ ಅವರನ್ನು ಸ್ಪರ್ಧೆಗೆ ಬಿದ್ದವರಂತೆ ಸಮರ್ಥಿಸಿಕೊಳ್ಳುವುದು ರಾಜ್ಯದ ಬಿಜೆಪಿ ನಾಯಕರಿಗೆ ಅನಿವಾರ್ಯ ಎಂಬ ಸಂಗತಿ ನಮಗೂ ತಿಳಿದಿದೆ, ಜನತೆಗೂ ತಿಳಿದಿದೆ. ಮಹಾತ್ಮ ಗಾಂಧಿ, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ದೇಶ ಕಟ್ಟಿದ ನಾಯಕರ ಬಗ್ಗೆಯೇ ಅಸಂಸದೀಯ ಭಾಷೆಯ ಮೂಲಕ ನಾಲಿಗೆ ಹರಿಬಿಡುವ ಬಿಜೆಪಿ ಕರ್ನಾಟಕ ನಾಯಕರು ಇಂದು "ಆಸಮರ್ಥ" ಎಂಬ ಪದವನ್ನು ಸಹಿಸಲಾಗದೆ ಒದ್ದಾಡುತ್ತಿರುವುದು ಅವರ ಶೋಚನಿಯ ಸ್ಥಿತಿಗೆ ಹಿಡಿದ ಕನ್ನಡಿ ಎಂದು ಹೇಳಿದ್ದಾರೆ.
ಬಿಜೆಪಿ ಸರಣಿ ಟ್ವೀಟ್
ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯವೈಖರಿಯನ್ನು ಬಿಜೆಪಿ ಪ್ರಶ್ನೆ ಮಾಡಿದ್ದು, ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸರಣಿ ಟ್ವೀಟ್ ಮಾಡಿದೆ. ಗ್ರಾಪಂ ನೌಕರರು ನಡುಗುವ ಚಳಿಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಾತ್ರ ಕ್ಯಾರೇ ಎನ್ನುತ್ತಿಲ್ಲ.! ಗ್ರಾಮ ಸ್ವರಾಜ್ಯದ ಕುರಿತು ಭಾಷಣ ಬಿಗಿಯುವ ಸರ್ಕಾರ, ನೌಕರರನ್ನು ಬೀದಿಗೆ ತಳ್ಳಿ ಮಜಾ ತೆಗೆದುಕೊಳ್ಳುತ್ತಿದೆ.
ಕೆಲಸಕ್ಕೆ ತಕ್ಕ ವೇತನವಿಲ್ಲ, ಬೇಡಿಕೆ ಈಡೇರಿಸಿಲ್ಲ. ಸ್ವಂತ ಇಲಾಖೆಯ ನೌಕರರ ಸಮಸ್ಯೆ ಆಲಿಸಲು ಯೋಗ್ಯತೆಯಿಲ್ಲದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಧಿಕಾರವಾದರೂ ಯಾಕೆ ಬೇಕು.? ಗ್ಯಾರಂಟಿ ಪ್ರಚಾರಕ್ಕೆ ಕೋಟಿ ಕೋಟಿ ಸುರಿಯುವ ಸರ್ಕಾರಕ್ಕೆ, ದಿನವಿಡೀ ದುಡಿಯುವ ನೌಕರರ ಸಂಬಳ ಹೆಚ್ಚಿಸಲು ಹಣವಿಲ್ಲವೇ?
ಸ್ವಾಮಿ ಸಿದ್ದರಾಮಯ್ಯ ಅವರೇ, ಗ್ರಾಪಂ ನೌಕರರ ಬೇಡಿಕೆ ಈಡೇರಿಸಲು ಕೂಡಲೇ ಕ್ರಮವಹಿಸಿ ಎಂದು ಹೇಳಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಕಾಂಗ್ರೆಸ್ ಸರ್ಕಾರದ ಸಚಿವರಿಗೆ ತಮ್ಮ ನಾಲಗೆ ಮೇಲೆ ಹಿಡಿತವಿಲ್ಲ. ಸಂಸ್ಕಾರ ಇಲ್ಲದವರಿಗೆ ಸಚಿವ ಸ್ಥಾನ ಕೊಟ್ಟರೆ ಅದರ ಘನತೆ ಕಡಿಮೆಯಾದೀತೇ ಹೊರತು, ಕುಳಿತವರಿಗೆ ಅರ್ಹತೆ ಬರುವುದಿಲ್ಲ ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದ್ದಾರೆ. ಭಾರತದ ಗೃಹ ಸಚಿವರ ವಿರುದ್ಧ, ಸದನದೊಳಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರಿಯಾಂಕ್ ಖರ್ಗೆ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications