ರಾಜ್ಯ ಬಾಲ್ಯ ವಿವಾಹ ಮಸೂದೆ ತಿದ್ದುಪಡಿಗೆ ರಾಷ್ಟ್ರಪತಿ ಅಂಕಿತ
ಕರ್ನಾಟಕದಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳ ಪ್ರಕರಣಗಳು ವರದಿಯಾಗುತ್ತಿದ್ದವು. ಇಂಥ ಸಾಮಾಜಿಕ ಪೀಡೆಗಳನ್ನು ಹತ್ತಿಕ್ಕಲೇ ಬೇಕೆಂದು ತೀರ್ಮಾನಿಸಿದ ಕರ್ನಾಟಕ ಸರ್ಕಾರ, ಬಾಲ್ಯ ವಿವಾಹ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿತ್ತು.
ನವದೆಹಲಿ, ಮೇ 23: ಕರ್ನಾಟಕ ಸರ್ಕಾರವು ತಿದ್ದುಪಡಿಗೊಳಿಸಿದ ಬಾಲ್ಯ ವಿವಾಹ ಕಾಯ್ದೆ ಮಸೂದೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಧಿಕೃತ ಮುದ್ರೆಯೊತ್ತಿದ್ದಾರೆ.
ಇದರಿಂದಾಗಿ, ರಾಜ್ಯದಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಆನೆ ಬಲ ಬಂದಂತಾಗಿದೆ. ಇಂಥ ಪ್ರಕರಣಗಳಲ್ಲಿ ಸಿಕ್ಕಿಬಿದ್ದವರ ವಿರುದ್ಧ ಮತ್ತಷ್ಟು ಕ್ರಮ ಜರುಗಿಸುವ, ಈಗಿರುವ ದಂಡದ ಮೊತ್ತವನ್ನು ಅಧಿಕಗೊಳಿಸುವ ಅವಕಾಶಗಳು ಈ ಹೊಸ ಮಸೂದೆಯಿಂದ ಪೊಲೀಸ್ ಇಲಾಖೆಗೆ ಸಿಗಲಿದೆ.

2011ರಲ್ಲಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ನೇತೃತ್ವದ ಸಮಿತಿಯು, ಬಾಲ್ಯ ವಿವಾಹ ತಡೆ ಕುರಿತಂತೆ ನಡೆಸಿದ್ದ ಅಧ್ಯಯನ ವರದಿಯನ್ವಯ ಕರ್ನಾಟಕದಲ್ಲಿ ಚಾಲ್ತಿಯಲ್ಲಿದ್ದ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು.
ಈ ತಿದ್ದುಪಡಿಯನ್ನು ಕೇಂದ್ರದ ಅನುಮೋದನೆಗೆ ಕಳುಹಿಸಲಾಗಿತ್ತು. ಕೇಂದ್ರ ಸರ್ಕಾರದ ಗೃಹ ಇಲಾಖೆಯು ಈ ತಿದ್ದುಪಡಿಯನ್ನು ರಾಷ್ಟ್ರಪತಿಗೆ ಕಳುಹಿಸಿತ್ತು. ಈಗ ಇದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದೆ.












Click it and Unblock the Notifications