B Khata To A Khata: "ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿನ ಆಸ್ತಿಗಳು ಬಿ ಖಾತೆಯಿಂದ ಎ ಖಾತೆಗೆ"
ಬೆಂಗಳೂರು, ಅಕ್ಟೋಬರ್ 24: ಹೊರವಲಯ ಗಡಿಭಾಗದ ಒಂದಷ್ಟು ಪಂಚಾಯತಿಗಳು, ಮುನ್ಸಿಪಾಲಿಟಿಗಳು ಭವಿಷ್ಯದಲ್ಲಿ ಬೆಂಗಳೂರು ನಗರದ ಒಳಗೆ ಸೇರುತ್ತವೆಯಾದ್ದರಿಂದ ಈಗಿನಿಂದಲೇ ಮಾನಸಿಕವಾಗಿ ತಯಾರು ಮಾಡಲಾಗುತ್ತಿದೆ. ಈ ಪ್ರದೇಶಗಳಲ್ಲಿಯೂ ಸಹ ಬಿ ಖಾತೆಯಿಂದ ಎ ಖಾತೆ ಪರಿವರ್ತನೆ ವ್ಯವಸ್ಥೆಗೆ ತಯಾರಿ ನಡೆಸಲು ಸೂಚನೆ ನೀಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು. ಬೆಂಗಳೂರು ನಗರದಲ್ಲಿ ಆಸ್ತಿ ಮೌಲ್ಯ ಆಧಾರಿತ ತೆರಿಗೆ ಸಂಗ್ರಹದಂತೆ ಈ ಭಾಗದಲ್ಲಿಯೂ ಸಹ ತೆರಿಗೆ ಸಂಗ್ರಹದಲ್ಲಿ ಏಕರೂಪತೆ ತರಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಈಗಿನಿಂದಲೇ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು ಎಂದು ಸೂಚನೆ ನೀಡಿದ್ದೇನೆ. ಏಕೆಂದರೆ ಮುಂದೆ ನಾವೇ ನೀರು ಮತ್ತಿತರ ಮೂಲಸೌಕರ್ಯಗಳನ್ನು ನೀಡಬೇಕಾಗುತ್ತದೆ. ಆದ ಕಾರಣ ಅಕ್ರಮ ಕಟ್ಟಡ, ಬಡಾವಣೆ ನಿರ್ಮಾಣ ಯೋಜನೆಗಳಿಗೆ ಕಡಿವಾಣ ಹಾಕಬೇಕಿದೆ. ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಬೆಂಗಳೂರು ನಗರದಲ್ಲಿರುವ ರಾಜಕಾಲುವೆ ಒತ್ತುವರಿ, ಸರ್ಕಾರಿ ಆಸ್ತಿ ಒತ್ತುವರಿ ಸಮಸ್ಯೆ ಈ ಭಾಗದಲ್ಲಿಯೂ ಇರುವ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ಬೆಂಗಳೂರು ನಗರ ಮಾದರಿಯಲ್ಲಿಯೇ ಇಲ್ಲಿಯೂ ಎಲ್ಲ ಆಸ್ತಿ ದಾಖಲೆಗಳನ್ನು ಈಗಿನಿಂದಲೇ ಡಿಜಿಟಲೀಕರಣ ಮಾಡಲಾಗುವುದು. 110 ಹಳ್ಳಿಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಸೇರ್ಪಡೆಯಾಗುವ ಪ್ರದೇಶಗಳಲ್ಲಿ ನಾಗರಿಕ ಪ್ರಜ್ಞೆ ಮೂಡಿಸಬೇಕಿದೆ. ನಗರ ವ್ಯಾಪ್ತಿಯಲ್ಲಿ ಬದುಕಲು ಬೇಕಾದ ರೀತಿ-ನೀತಿಗಳ ಬಗ್ಗೆ ಮಾನಸಿಕವಾಗಿ ತಯಾರು ಮಾಡಲಾಗುತ್ತದೆ. ಕಸವನ್ನು ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಬೆಂಗಳೂರು ನಗರದ ಮಾದರಿಯಲ್ಲಿ ಕಸ ಸಂಗ್ರಹ ವ್ಯವಸ್ಥೆ ಬಗ್ಗೆಯೂ ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರು ದಕ್ಷಿಣದಲ್ಲಿ ಮಾತ್ರ ಹೊಸ ಪ್ರದೇಶಗಳನ್ನು ಸೇರಿಸಿಕೊಳ್ಳಲಾಗುವುದೇ ಎಂದು ಕೇಳಿದಾಗ, "ಬೆಂಗಳೂರು ಸುತ್ತಲಿನ ಗಡಿ ಭಾಗದ ಎಲ್ಲ 12 ಸ್ಥಳೀಯ ಸಂಸ್ಥೆಗಳ ಸೇರ್ಪಡೆ ಬಗ್ಗೆ ಯೋಜಿಸಲಾಗುತ್ತಿದೆ. ಮೊದಲು ಅಧಿಕಾರಿಗಳು ವರದಿ ನೀಡಲಿ. ಅದರ ಜೊತೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಸಕರು, ಸಂಸದರ ಜೊತೆ ಚರ್ಚೆ ಮಾಡಲು ತಿಳಿಸಿದ್ದೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ಭವಿಷ್ಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕಾದ ಬೆಂಗಳೂರು ಹೊರವಲಯದ ಪ್ರದೇಶಗಳ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆವರು ತಿಳಿಸಿದರು.
ಬೆಂಗಳೂರು ನಗರ ಜಿಲ್ಲೆಯ 12 ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಲಾಯಿತು. ಭವಿಷ್ಯದಲ್ಲಿ ಬೆಂಗಳೂರು ಬೆಳೆಯಲಿದೆ. ಬಿಎಂಆರ್ಡಿಎ ವ್ಯಾಪ್ತಿಯ ಪ್ರದೇಶಗಳು ಇಂದಲ್ಲ ನಾಳೆ ಬೆಂಗಳೂರು ನಗರದ ಭಾಗವಾಗಲಿವೆ ಎಂದರು. ನಗರ ಪ್ರದಕ್ಷಿಣೆ ಮಾಡಿ ಅವಲೋಕನ ನಡೆಸಿದೆ. ಈಗಿನಿಂದಲೇ ರಸ್ತೆ ಅಗಲೀಕರಣ ಮತ್ತಿತರ ಮೂಲಸೌಕರ್ಯಗಳ ಅಭಿವೃದ್ಧಿ ಮಾಡಬೇಕಿದೆ. ಇದಕ್ಕೆ ಸೂಕ್ತ ಯೋಜನೆ ಮಾಡಬೇಕಿದೆ. ಸಿಎಂಸಿ, ಪಟ್ಟಣ ಪಂಚಾಯತಿ ಸೇರಿದಂತೆ ಒಂದಷ್ಟು ಪ್ರದೇಶಗಳಲ್ಲಿ ರಸ್ತೆಗಳು ಕಿರಿದಾಗಿವೆ. ಭವಿಷ್ಯದಲ್ಲಿ ಕಷ್ಟಪಡುವ ಬದಲು ಈಗಲೇ ಪಿಡ್ಬ್ಲೂಡಿ, ನಗರ ಯೋಜನೆ ಇಲಾಖೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಎಂದು ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.












Click it and Unblock the Notifications