ಕಳಸಾ ಬಂಡೂರಿ ಯೋಜನೆ ವಿಳಂಬಕ್ಕೆ ಪ್ರಹ್ಲಾದ ಜೋಶಿ ಕಾರಣ: ಸೊಬರದಮಠ
ಹುಬ್ಬಳ್ಳಿ, ಜುಲೈ 15: ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಕಳಸಾ-ಬಂಡೂರಿ ಯೋಜನೆ ಅನುಷ್ಠಾನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಜಕಾರಣ ಮಾಡುತ್ತಿದ್ದಾರೆ ಎಂದು ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಹೇಳಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಳಸಾ-ಬಂಡೂರಿ ಯೋಜನೆ ಕುರಿತು ಈ ಹಿಂದೆ ಪ್ರಧಾನಮಂತ್ರಿ ಬಳಿ ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋದಾಗ ಈ ಹೋರಾಟ ಕಾನೂನು ಹೋರಾಟ ಎಂದು ಹಾದಿ ತಪ್ಪಿಸುವ ಕೆಲಸ ಮಾಡಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರು ಮಹದಾಯಿ ಕಳಸಾ-ಬಂಡೂರಿ ಯೋಜನೆ ಅನುಷ್ಠಾನದಲ್ಲಿ ಅನುಸರಿಸಿದ ಧೋರಣೆ ಕುರಿತು ಕಿರು ಹೊತ್ತಿಗೆ ಬಿಡುಗಡೆಗೊಳಿಸಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಡುವಳಿಕೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಇನ್ನೂ ಜುಲೈ 14 ರಂದು ಕಳಸಾ-ಬಂಡೂರಿ ಯೋಜನೆ ಹೋರಾಟ 8 ವರ್ಷ ಪೂರೈಸಿ 9 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಇದು ಹೋರಾಟಗಾರರಿಗೆ ನೋವಿನ ಸಂಗತಿಯಾಗಿದ್ದರೇ, ರಾಜಕೀಯ ನಾಯಕರಿಗೆ ರಾಜಕಾರಣ ಮಾಡಲು ಸಹಕಾರಿಯಾಗಿದೆ. ಈ ಮೂಲಕ ಜನರನ್ನು ರಾಜಕೀಯ ನಾಯಕರು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದರು.
ಕಳಸಾ-ಬಂಡೂರಿ ಯೋಜನೆ ಕಾನೂನು ಹೋರಾಟದಲ್ಲಿ ನ್ಯಾಯ ಒದಗಿಸಲು ಮಹತ್ವದ ಪಾತ್ರವಹಿಸಿರುವ ಮೋಹನ್ ಕಾತರಕಿ ಅವರು ಕೂಡಾ ವಿಳಂಬ ಧೋರಣೆ ಮಾಡುತ್ತಿದ್ದಾರೆ. ಇದು ನಾಡಿಗೆ ಅವರು ಎಸಗಿರುವ ದ್ರೋಹ ಆಗಿದೆ. ಯೋಜನೆ ಅನುಷ್ಟಾನಕ್ಕಾಗಿ ನಿರಂತರವಾಗಿ ಹೋರಾಟ, ಪಾದಯಾತ್ರೆ, ರಕ್ತ ಬರೆದರು ಕೂಡಾ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದರು.

ಇದೀಗ ಲೋಕಸಭಾ ಚುನಾವಣೆ ಪೂರ್ವಕ್ಕೂ ಮುನ್ನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜಕೀಯವಾಗಿ ನಡೆದುಬಂದ, ಮಠಾಧೀಶರನ್ನು ಬೇರೆ ಮಾಡಿದ ಹಾಗೂ ವೀರಶೈವ ಲಿಂಗಾಯತರ ನಡುವೆ ಒಡಕು ಮೂಡಿಸಿದ, ತಮ್ಮನ್ನು ಸಂಸದರಾಗಿ ಮಾಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಮನೆಗೆ ಕಳಿಸಿದ ಅಂಶಗಳನ್ನು ಒಳಗೊಂಡಂತೆ ಜೋಶಿ ಕುರಿತ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಗುವುದು. ಈ ಕಿರುಹೊತ್ತಿಗೆಯಲ್ಲಿ ಎಲ್ಲ ಪಕ್ಷಗಳ ರಾಜಕೀಯ ನಡೆಗಳ ಅಂಶಗಳನ್ನು ಒಳಗೊಂಡಿರಲಿದೆ ಎಂದರು.
ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ವಿಳಂಬಕ್ಕೆ ಪರೋಕ್ಷವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇ ಕಾರಣವಾಗಿದ್ದಾರೆ. ಅಲ್ಲದೇ ವೀರಶೈವ ಲಿಂಗಾಯತರಲ್ಲಿ ಒಡಕು ಮೂಡಿಸುವುದರಲ್ಲಿ, ಮಠಾಧೀಶರಲ್ಲಿ ಒಡಕು ಮೂಡಿಸಿ ಧರ್ಮ ಒಡೆಯುವ ಕಾರ್ಯವನ್ನು ಪ್ರಹ್ಲಾದ ಜೋಶಿ ಮಾಡಿದ್ದಾರೆ. ಈ ಕಳಸಾ ಬಂಡೂರಿ ಯೋಜನೆಯನ್ನು ಶೇ 80 ರಿಂದ 90 ರಷ್ಟು ಬಳಕೆ ಮಾಡಿಕೊಂಡವರು ಬಿಜೆಪಿಗರು. ತುಷ್ಟಿಕರಣ ರಾಜಕಾರಣವನ್ನು ಇವರು ಮಾಡಿದ್ದಾರೆ. ಮೋಹನ ಕಾತರಕಿಯವರಿಂದ ಮಹದಾಯಿ ಯೋಜನೆ ಹಿನ್ನಡೆಯಾಗಿದೆ. ತಪ್ಪು ವಾದ ಮಾಡಿದ್ದಾರೆ ಎಂಬ ಅಂಶಗಳು ಕೇಳಿ ಬಂದಿವೆ ಎಂದು ಹೇಳಿದರು.












Click it and Unblock the Notifications