Philately Passport: ಕರ್ನಾಟಕದಲ್ಲಿ ಸುತ್ತಾಡುವವರಿಗೆ ಬಂತು ಸ್ಪೆಷಲ್ ಪಾಸ್ಪೋರ್ಟ್, ಮುಗಿಬಿದ್ದು ಖರೀದಿಸಿದ ಜನ
ಬೆಂಗಳೂರು: ಈ ಡಿಜಿಟಲ್ ಯುಗದಲ್ಲೂ ಜನ ಅಪ್ಪಟ ಹಳೆಯ ಮಾದರಿಯ ಇತಿಹಾಸದ ದಾಖಲೆಗೆ ಮರುಳಾಗಿದ್ದಾರೆ. ಕರ್ನಾಟಕ ಅಂಚೆ ವೃತ್ತದ ವತಿಯಿಂದ ಹೊರತರಲಾಗಿರುವ ವಿಶಿಷ್ಟ 'ಫಿಲಾಟೆಲಿ ಪಾಸ್ಪೋರ್ಟ್' (Philately Passport) ಅನ್ನು ಖರೀದಿಸಲು ಅಂಚೆ ಕಚೇರಿಗಳಲ್ಲಿ ಜನ ಮುಗಿಬಿದ್ದಿದ್ದಾರೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಇರುವ ಬೆಂಗಳೂರು ಪ್ರಧಾನ ಅಂಚೆ ಕಚೇರಿಯಲ್ಲೂ (GPO) ಜನಸಾಗರವೇ ಹರಿದುಬಂದಿದೆ. ಇಷ್ಟಕ್ಕೂ ಈ ಫಿಲಾಟೆಲಿ ಪಾಸ್ಪೋರ್ಟ್ ಅಂದ್ರೆ ಏನು, ಅದರ ಪ್ರಯೋಜನವೇನು? ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಏನಿದು ಫಿಲಾಟೆಲಿ ಪಾಸ್ಪೋರ್ಟ್
ಕರ್ನಾಟಕ ಅಂಚೆ ವೃತ್ತವು ನವೆಂಬರ್ 2024ರಿಂದ ಈ ಪಾಕೆಟ್ ಸೈಜ್ ನೀಲಿ ಬಣ್ಣದ ಬುಕ್ಲೆಟ್ ಪರಿಕಲ್ಪನೆಯನ್ನು ಜಾರಿಗೆ ತಂದಿದೆ. ಈ ಸಣ್ಣ ಪಾರ್ಸ್ಪೋರ್ಟ್ನಂತಿರುವ ಪುಸ್ತಕದಲ್ಲಿ ರಾಜ್ಯದ ಪ್ರಮುಖ ಐತಿಹಾಸಿಕ ತಾಣಗಳ ಸಣ್ಣ ವಿವರಣೆ ಇರುತ್ತದೆ. ಪ್ರವಾಸಿಗರು ಆಯಾ ಜಾಗಕ್ಕೆ ಭೇಟಿ ನೀಡಿದಾಗ, ಅಲ್ಲಿನ ಅಂಚೆ ಚೀಟಿ ಹಚ್ಚಿ, ಆ ತಾಣಕ್ಕೆ ಸಂಬಂಧಿಸಿದ ವಿಶೇಷ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್ (PPC) ಮುದ್ರೆಯನ್ನು ಒತ್ತಿಸಿಕೊಳ್ಳಬಹುದು.

ಈ ಪುಸ್ತಕದಲ್ಲಿ ಬೆಂಗಳೂರಿನ ವಿಧಾನ ಸೌಧ, ಕರ್ನಾಟಕ ಹೈಕೋರ್ಟ್, ರಾಜಾಜಿನಗರ ಫೌಂಡೇಶನ್ ಪಿಲ್ಲರ್ ಮತ್ತು ಬನ್ನೇರುಘಟ್ಟ ಸೇರಿದಂತೆ ಹಲವು ಪ್ರಮುಖ ತಾಣಗಳು ಇವೆ. ಕರ್ನಾಟಕದ ಇತಿಹಾಸದಲ್ಲೇ ಮೊದಲ ಇಂತಹ ವಿಶೇಷ ಮುದ್ರೆಯನ್ನು 1987ರಂದು ಬಾದಾಮಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇನ್ನು ಅಕ್ಟೋಬರ್ 2025ರ ವೇಳೆಗೆ 100 ವಿಶೇಷ ಮುದ್ರೆಗಳನ್ನು ಬಿಡುಗಡೆ ಮಾಡಲಾಗಿದೆ.
ಬೆಲೆ ಮತ್ತು ಖರೀದಿ ವಿವರ
ಈ ಫಿಲಾಟೆಲಿ ಪಾಸ್ಪೋರ್ಟ್ನ ಬೆಲೆ ₹600 ಆಗಿದೆ. ಗ್ರಾಹಕರು ನಗದು ಅಥವಾ ಯುಪಿಐ (UPI) ಮೂಲಕ ಹಣ ಪಾವತಿಸಿ ಇದನ್ನು ಖರೀದಿಸಬಹುದು. ಬೆಂಗಳೂರು ಜಿಪಿಒ ಮಾತ್ರವಲ್ಲದೆ ಮೈಸೂರು, ಮಂಗಳೂರು ಮತ್ತು ಬೆಳಗಾವಿಯ ಪ್ರಧಾನ ಅಂಚೆ ಕಚೇರಿಗಳ ಫಿಲಾಟೆಲಿಕ್ ಬ್ಯೂರೋಗಳಲ್ಲೂ ಇದು ಲಭ್ಯವಿದೆ. ಅಂಚೆ ಇಲಾಖೆಯ ಪ್ರಕಾರ, ಇದನ್ನು ಖರೀದಿಸುತ್ತಿರುವವರಲ್ಲಿ ಶೇ 90ರಷ್ಟು ಜನ ಯುವಕರು, ಬೈಕ್ ರೈಡರ್ಸ್ ಮತ್ತು ಕಂಟೆಂಟ್ ಕ್ರಿಯೇಟರ್ಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.
Thank you ❤️#Philatelypassport #Karnatakapostalcircle pic.twitter.com/RWvkSymnYT
— Karnataka Postal Circle (@CPMGKARNATAKA) July 10, 2026
500 ಟೋಕನ್ ಖಾಲಿ
ಬೆಂಗಳೂರಿನ ಜಿಪಿಒ ಕಚೇರಿಯಲ್ಲಿ ಪ್ರವಾಸಕ್ಕೆ ಹೋಗುವವರು ಮತ್ತು ಯುವ ಪೀಳಿಗೆ ಮುಗಿಬಿದ್ದು ಇದನ್ನು ಖರೀದಿಸಿದ್ದಾರೆ. ಕಚೇರಿ ಆರಂಭವಾದ ಕೇವಲ 15 ನಿಮಿಷಗಳಲ್ಲೇ 500 ಟೋಕನ್ಗಳು ಖಾಲಿಯಾಗಿದ್ದವು. ಅಂತಿಮವಾಗಿ ಇಲಾಖೆ ನಿಗದಿಪಡಿಸಿದ್ದ ಎರಡು ದಿನಗಳ ಕೋಟಾ ಕೇವಲ ಒಂದೇ ದಿನದಲ್ಲಿ ಸಂಪೂರ್ಣವಾಗಿ ಮಾರಾಟವಾಗಿ ಹೊಸ ದಾಖಲೆ ಬರೆದಿದೆ. ರಾಜ್ಯದ ಸೌಂದರ್ಯ ಮತ್ತು ಇತಿಹಾಸವನ್ನು ವಿಭಿನ್ನವಾಗಿ ಅನ್ವೇಷಿಸಬೇಕು ಎಂಬ ಹಂಬಲವುಳ್ಳ ನೂರಾರು ತರುಣರು ಹಾಗೂ ಪ್ರವಾಸಿಗರು ಜಿಪಿಒ ಆವರಣದಲ್ಲಿ ಜಮಾಯಿಸಿದ್ದರು.
ಕೆಲವರು ಮುಂಜಾನೆಯೇ ಬಂದು ನಿಂತಿದ್ದರೆ, ಇನ್ನು ಕೆಲವರು ಗಂಟೆಗಟ್ಟಲೆ ಕ್ಯೂನಲ್ಲಿ ಕಾಯಬೇಕಾಯಿತು. ಅಂಚೆ ಕಚೇರಿಯ ಮೆಟ್ರೋ ಕಡೆಯ ಪ್ರವೇಶ ದ್ವಾರದವರೆಗೂ ಈ ಸಾಲು ಬೆಳೆದಿತ್ತು. ರಶ್ ಹೆಚ್ಚಾಗಿದ್ದರಿಂದ ಎಚ್ಚೆತ್ತ ಅಂಚೆ ಅಧಿಕಾರಿಗಳು, ಎಲ್ಲರಿಗೂ ಬುಕ್ಲೆಟ್ ಸಿಗಲಿ ಎಂಬ ಉದ್ದೇಶದಿಂದ ಒಬ್ಬರಿಗೆ ಒಂದೇ ಪಾಸ್ಪೋರ್ಟ್ ಎಂಬ ನಿಯಮವನ್ನು ಜಾರಿಗೆ ತಂದು ಟೋಕನ್ ವಿತರಿಸಿದರು.
ನಾವು ಈ ಫಿಲಾಟೆಲಿ ಪಾಸ್ಪೋರ್ಟ್ ಅನ್ನು ಜುಲೈ 10ಮತ್ತು 11ರಂದು ಎರಡು ದಿನಗಳ ಕಾಲ ಮಾರಾಟ ಮಾಡಲು ಯೋಜಿಸಿದ್ದೆವು. ಆದರೆ ಮೊದಲ ದಿನವೇ ಎಲ್ಲ 1,000 ಬುಕ್ಲೆಟ್ಗಳು ಮಾರಾಟವಾಗಿವೆ. ವಿಶೇಷವಾಗಿ ಯುವಕರಲ್ಲಿ ಇದರ ಕ್ರೇಜ್ ಹೆಚ್ಚಾಗಿದೆ ಎಂದು ಅಂಚೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಎಲ್ಲ ಪಾಸ್ಪೋರ್ಟ್ಗಳು ಖಾಲಿಯಾಗಿರುವುದರಿಂದ ಜಿಪಿಒದಲ್ಲಿ ಇದರ ಮಾರಾಟ ನಿಲ್ಲಿಸಲಾಗಿದೆ. ಆದರೆ ಪ್ರವಾಸಿಗರು ಕಚೇರಿಗೆ ಭೇಟಿ ನೀಡಿ ಸ್ಟಾಂಪ್ ಸಂಗ್ರಹಿಸಬಹುದು ಎಂದು ತಿಳಿಸಿದ್ದಾರೆ.












Click it and Unblock the Notifications